ಬಳ್ಳಾರಿ: ಔದ್ಯಮಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ನಿರೀಕ್ಷೆಯೊಂದಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು ಕುಡುತಿನಿಯಲ್ಲಿ ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶ (ಹಂತ–1)ಕ್ಕೆ ಪರಿಸರ ಅನುಮೋದನೆ (ಇ.ಸಿ.) ಸಿಗದೇ ನಿವೇಶನಗಳ ಹಂಚಿಕೆಯೂ ವಿಳಂಬವಾಗುತ್ತಿದೆ.
ಒಟ್ಟು 645.18 ಎಕರೆ ಪ್ರದೇಶದಲ್ಲಿ ಎರಡು ಕೈಗಾರಿಕಾ ಪ್ರದೇಶವನ್ನು ಕೆಐಎಡಿಬಿ ಅಭಿವೃದ್ಧಿಪಡಿಸಿದೆ. 601.27 ಎಕರೆಯಲ್ಲಿ ವಿವಿಧ ಅಳತೆಯ 130 ನಿವೇಶನಗಳಿದ್ದರೆ, 43.91 ಎಕರೆಯ ‘ಮಹಿಳಾ ಔದ್ಯಮಿಕ ಪಾರ್ಕ್’ನಲ್ಲಿ 74 ನಿವೇಶನಗಳಿವೆ.
2020–21ರಲ್ಲೇ ಯೋಜನೆ ಪೂರ್ಣಗೊಂಡಿತಾದರೂ ಈವರೆಗೆ ಒಂದೇ ಒಂದು ನಿವೇಶನ ಹಂಚಿಕೆಯಾಗಿಲ್ಲ. ಯಾವ ಕೈಗಾರಿಕೆಗಳೂ ಬಂದಿಲ್ಲ. ಹೀಗಾಗಿ ಭೂಮಿ ಹಲವು ವರ್ಷಗಳಿಂದ ಬಳಕೆಗೇ ಬಾರದೆ ಪಾಳು ಬಿದ್ದಿದೆ.
ಅಂತರರಾಜ್ಯ ಗಡಿಗೆ ಸನಿಹದಲ್ಲಿರುವ ಕಾರಣಕ್ಕೆ ಮತ್ತು ಬೃಹತ್ ಯೋಜನೆಯಾಗಿರುವ ಕಾರಣಕ್ಕೆ ಇದು 2006ರ ‘ಪರಿಸರ ಆಘಾತ ಅಧ್ಯಯನ ಅಧಿಸೂಚನೆ’ ಪ್ರಕಾರ, ಶೆಡ್ಯೂಲ್ 7(ಸಿ) ಅಡಿಯ ‘ಎ’ ವರ್ಗಕ್ಕೆ ಸೇರಿದೆ. ಇಂಥ ಯೋಜನೆಗೆ ಕೇಂದ್ರದ ಅರಣ್ಯ ಮತ್ತು ಹವಾಮಾನ ಬದಲಾವಣೆ (ಎಂಒಇಎಫ್‌ಸಿಸಿ)ಯ ತಜ್ಞರ ಮೌಲ್ಯಮಾಪನ ಸಮಿತಿ (ಇಎಸಿ)ಯಿಂದ ವಿವಿಧ ಅನುಮೋದನೆ ಅಗತ್ಯ. ಆದರೆ, ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸುವ ಮುನ್ನ ಅಂದಿನ ಅಧಿಕಾರಿಗಳು ಯಾವುದೇ ಅನುಮೋದನೆ ಪಡೆದಿಲ್ಲ. ಹೀಗಾಗಿ ಈಗ ಇ.ಸಿ ಪಡೆಯುವುದು ತ್ರಾಸದಾಯಕವಾಗಿ ಪರಿಣಮಿಸಿದೆ.
2021 ಜನವರಿ 17ರಂದು ಕೆಐಎಡಿಬಿಯು ಎಂಒಇಎಫ್‌ಸಿಸಿಯಿಂದ ಅನುಮೋದನೆ ಪಡೆಯುವ ಪ್ರಕ್ರಿಯೆ ಆರಂಭಿಸಿತು. ಯೋಜನೆ ಪರಿಶೀಲಿಸಿದ ಇಎಸಿ, ನಿಯಮ ಉಲ್ಲಂಘನೆ ಕಾರಣಕ್ಕೆ ಅನುಮತಿ ನಿರಾಕರಿಸಿತು. ಯೋಜನೆ ಆರಂಭಿಸುವುದಕ್ಕೂ ಮೊದಲು ಪಡೆಯಬೇಕಾಗಿದ್ದ ಅನುಮೋದನೆಗಳನ್ನು ಪಡೆಯದ ಕಾರಣಕ್ಕೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾದ ಅಗತ್ಯವಿರುವುದಾಗಿಯೂ, ಪ್ರಕರಣ ದಾಖಲಿಸುವ ಸಂಬಂದ ಪ್ರಕ್ರಿಯೆ ಆರಂಭಿಸಬೇಕಾಗಿಯೂ, ಪ್ರಕರಣದ ಸಂಖ್ಯೆ ತಮಗೆ ನೀಡಬೇಕಾಗಿಯೂ ಸೂಚಿಸಿತು.
ಈ ಸಂಬಂಧ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ (ಕೆಎಸ್‌ಪಿಸಿಬಿ)ಗೆ ಪತ್ರ ಬರೆದ ಕೆಐಎಡಿಬಿ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದರು. ಅದರಂತೆ ಕೆಎಸ್‌ಪಿಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಲು ಅನುಮತಿ ಕೋರಿ ಪ್ರಸ್ತಾವವನ್ನು ಕೇಂದ್ರ ಕಚೇರಿಗೆ ಕಳುಹಿಸಿದ್ದರು. ಆದರೆ, ಪ್ರಸ್ತಾವಿತ ಸೆಕ್ಷನ್‌ಗಳ ಬದಲು ಇನ್ನಿತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಅಲ್ಲಿಂದ ಉತ್ತರ ಬಂದಿತ್ತು. ಸದ್ಯ ಮತ್ತೆ ಪ್ರಸ್ತಾವ ಕಳುಹಿಸಬೇಕಾಗಿ ಬಂದಿದೆ. ಇದರೊಂದಿಗೆ ಯೋಜನೆಗೆ ಇ.ಸಿ ಪಡೆಯುವ ಪ್ರಕ್ರಿಯೆ ಕುಂಟುತ್ತ ಸಾಗಿದೆ.
ಇನ್ನೊಂದೆಡೆ, ನಿಯಮ ಉಲ್ಲಂಘನೆಗೆ ಸಂಬಂಧಿಸಿ ಕೆಐಎಡಿಬಿಯು ದಂಡ, ಬ್ಯಾಂಕ್ ಗ್ಯಾರಂಟಿ ಸೇರಿದಂತೆ ಪಾವತಿಸಬೇಕಾದ ಎಲ್ಲ ಶುಲ್ಕಗಳನ್ನೂ ಪಾವತಿಸಿದೆ.
ಇಂಥ ಭಾರಿ ಯೋಜನೆಗಳನ್ನು ಕೆಗೆತ್ತಿಕೊಳ್ಳುವುದಕ್ಕೂ ಮೊದಲು ಸೂಚಿತ ಅನುಮೋದನೆಗಳನ್ನು ಪಡೆಯಬೇಕಾದದ್ದು ಸಾಮಾನ್ಯ ಜ್ಞಾನ. ಆದರೆ, ಇದೆಲ್ಲವನ್ನು ಮೀರಿ ಇಷ್ಟು ದೊಡ್ಡ ಯೋಜನೆಯನ್ನು ಪೂರ್ಣಗೊಳಿಸಿದ್ದು ಹೇಗೆ. ಈಗ ಭೂಮಿ ಬಳಕೆಗೆ ಬಾರದಂತಾಗಿದೆ. ಉದ್ಯಮ ಸ್ಥಾಪಿಸಲು ಬಯಸಿರುವವರು ಕಾದು ಕುಳಿತುಕೊಳ್ಳುವಂತಾಗಿದೆ. ಯೋಜನೆ ನಡೆಯುವ ಹೊತ್ತಿನಲ್ಲಿ ಇದ್ದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು, ಹೋರಾಟಗಾರರು ಆಗ್ರಹಿಸಿದ್ದಾರೆ.
ಎನ್‌ಜಿಟಿ ತೂಗುಗತ್ತಿ: ಈ ಮಧ್ಯೆ, ನಿಯಮ ಉಲ್ಲಂಘಿಸಿದ ಯೋಜನೆಗಳಿಗೆ ದೇಶದಲ್ಲಿ ಯಾವುದೇ ಕಾರಣಕ್ಕೂ ಪರಿಸರ ಅನುಮೋದನೆ ನೀಡಬಾರದು ಎಂದು ಕೆಲ ಸಂಘ ಸಂಸ್ಥೆಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮೋರೆ ಹೋಗಿದ್ದಾರೆ. ವಿಚಾರಣೆ ನಡೆಯುತ್ತಿದೆ. ಅಲ್ಲೇನಾದರೂ, ವ್ಯತಿರಿಕ್ತ ತೀರ್ಪು ಬಂದರೆ, ಯೋಜನೆ ಸ್ಥಿತಿ ಡೋಲಾಯಮಾನವಾಗುವ ಆತಂಕ ಅಧಿಕಾರಿಗಳದ್ದು. ಹೀಗಾಗಿ ಯೋಜನೆ ಅತ್ತ ದರಿ ಇತ್ತ ಪುಲಿ ಎಂಬಂತೆ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದೆ.
ಪರಿಸರ ಅನುಮೋದನೆಗೆ ಪ್ರಕ್ರಿಯೆ ನಡೆಯುತ್ತಿದೆ. ನಿಯಮ ಉಲ್ಲಂಘನೆಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿತ ಪ್ರಾಧಿಕಾರ ಹೇಳಿದೆ. ಅದು ಪೂರ್ಣಗೊಂಡ ಬಳಿಕ ಸಮ್ಮತಿ ಸಿಗಲಿದೆಶ್ರೀಧರ್ ಇ.ಇ ಕೆಐಡಿಎಡಿಬಿ ಬಳ್ಳಾರಿ
ನಿಯಮ ಉಲ್ಲಂಘನೆಗೆ ಸಂಬಂಧಿಸಿ ಕ್ರಮ ಕೈಗೊಳ್ಳಬೇಕೆಂಬ ಸೂಚನೆ ಇದೆ. ಈ ಕುರಿತು ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಅಲ್ಲಿಂದ ಅನುಮತಿ ಬಂದ ಬಳಿಕ ಪ್ರಕರಣ ದಾಖಲಿಸಲಾಗುವುದುಸಿದ್ದೇಶ್ವರ ಬಾಬು ಇ.ಇ ಕೆಎಸ್‌ಪಿಸಿಬಿ ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.