ಕಂಪ್ಲಿ: ಇಲ್ಲಿಯ ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಅಂಗವಾಗಿ ನಾಗಸುಬ್ರಹ್ಮಣ್ಯ ಆರಾಧನೆ ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ಏಳುಹೆಡೆ ನಾಗವಿಗ್ರಹಕ್ಕೆ ರುದ್ರಾಭಿಷೇಕ, ಪಂಚಾಮೃತ, ಅಷ್ಟೋತ್ತರ ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಮಾತನಾಡಿ, ‘ಮಕ್ಕಳಿಗೆ ಹುಟ್ಟಿನಿಂದಲೇ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಈ ಜಗತ್ತನ್ನು ಸ್ವರ್ಗವನ್ನಾಗಿ ಮಾಡುವ ಸಾಮರ್ಥ್ಯ ಧರ್ಮಕ್ಕಿದೆ. ಎಷ್ಟೇ ಆಸ್ತಿ ಅಂತಸ್ತು ಗಳಿಸಿದರೂ ಮನಸ್ಸು, ಆತ್ಮ ಮಾತ್ರ ನೆಮ್ಮದಿಯಿಂದಿರುವುದಿಲ್ಲ. ನೆಮ್ಮದಿ, ಶಾಂತಿ ಹೊಂದಿದವರೇ ದೇವಮಾನವ. ಧರ್ಮದಿಂದ ನಡೆದರೆ ಮಾತ್ರ ಮನುಷ್ಯನ ಜೀವನ ಸಾರ್ಥಕ’ ಎಂದು ತಿಳಿಸಿದರು.
ಇದಕ್ಕು ಮುನ್ನ ಕೆಲ ಭಕ್ತರು ಚರ್ಮ, ಮನೋರೋಗ ನಿವಾರಣೆಗೆ ಸಂಕಲ್ಪಿಸಿ ಬ್ರಹ್ಮಚಾರಿ(ವಟು)ವಿಗೆ ವಸ್ತ್ರದಾನ, ಹಾಲು, ನಾಗಬಿಂಬವನ್ನು ದಾನ ಮಾಡಿದರು.
ದೇವಸ್ಥಾನ ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾಶಶಿಧರ್, ಭಗವತಿ, ಆಶ್ವತ್ಥನಾರಾಯಣ, ಸಂಪತ್, ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.