ADVERTISEMENT

ಕೊಟ್ಟೂರು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದ ಸಿಎಂ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 11:14 IST
Last Updated 25 ನವೆಂಬರ್ 2019, 11:14 IST
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಸೋಮವಾರ ಹೊಸಪೇಟೆಯ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠಕ್ಕೆ ಭೇಟಿ ಕೊಟ್ಟು ಅದರ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಇದ್ದಾರೆ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಸೋಮವಾರ ಹೊಸಪೇಟೆಯ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠಕ್ಕೆ ಭೇಟಿ ಕೊಟ್ಟು ಅದರ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಇದ್ದಾರೆ   

ಹೊಸಪೇಟೆ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಬೆಳಿಗ್ಗೆ ಹತ್ತು ಗಂಟೆಗೆ ಹೆಲಿಕ್ಯಾಪ್ಟರ್‌ ಮೂಲಕ ನಗರದ ಮುನ್ಸಿಪಲ್‌ ಮೈದಾನಕ್ಕೆ ಬಂದರು. ಅಲ್ಲಿಂದ ನೇರವಾಗಿ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠಕ್ಕೆ ತೆರಳಿ ಮಠದ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಅಲ್ಲಿನ ಗದ್ದುಗೆಗೆ ಪೂಜೆ ನೆರವೇರಿಸಿ, ನಂತರ ಸ್ವಾಮೀಜಿ ಅವರನ್ನು ಕಂಡು ಕೆಲನಿಮಿಷ ಕುಶಲೋಪರಿ ವಿಚಾರಿಸಿದರು. ಅದಾದ ನಂತರ ಮುಖಂಡರಾದ ಆರ್‌. ಕೊಟ್ರೇಶ್‌, ಭರಮನಗೌಡ ಅವರ ಮನೆಗೆ ಭೇಟಿ ನೀಡಿದರು. ಅಲ್ಲಿಂದ ನೇರವಾಗಿ ಕಮಲಾಪುರಕ್ಕೆ ತೆರಳಿ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು. ಮಧ್ಯಾಹ್ನ 12.30ಕ್ಕೆ ಅಲ್ಲಿಂದ ನಿರ್ಗಮಿಸಿದರು.

ದಿ. ಶಂಕರಗೌಡ ವೇದಿಕೆ

ADVERTISEMENT

ಕಮಲಾಪುರದಲ್ಲಿ ಸೋಮವಾರ ನಡೆದ ಬಿಜೆಪಿ ಬಹಿರಂಗ ಪ್ರಚಾರ ಸಭೆಯ ವೇದಿಕೆಗೆ ಮಾಜಿಶಾಸಕ ದಿ. ಶಂಕರಗೌಡ ಅವರ ಹೆಸರು ಇಡಲಾಗಿತ್ತು.ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಶಂಕರಗೌಡ ಅವರ ಮಗ ಭರಮನಗೌಡ ಅವರ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರನ್ನು ಕಂಡರು.

ಸಪ್ತಪದಿ ತುಳಿದಂತೆ...

‘ಸಪ್ತಪದಿ ತುಳಿದು ಮದುವೆ ಆಗುವ ರೀತಿಯಲ್ಲಿ ಆನಂದ್‌ ಅಣ್ಣ ರಾಜೀನಾಮೆ ಕೊಟ್ಟ ನಂತರವೇ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ’ ಎಂದು ಶಾಸಕ ರಾಜುಗೌಡ ವ್ಯಾಖ್ಯಾನಿಸಿದರು.‘ಆನಂದ್‌ ಅಣ್ಣ ರಾಜೀನಾಮೆ ಕೊಟ್ಟ ನಂತರ ಇನ್ನುಳಿದ 16 ಜನ ಅವರ ಮಾರ್ಗ ಅನುಸರಿಸಿದರು. ಅವನು ಬಂದ ಗಳಿಗೆ ಸರಿಯಾಗಿದೆ. ಹೊಲದಲ್ಲಿ ಕಾಂಗ್ರೆಸ್‌ ಕಳೆ ಇರಬಾರದು. ಅದನ್ನು ತೆಗೆದು ಕಮಲ ಅರಳಿಸಬೇಕು’ ಎಂದು ಮನವಿ ಮಾಡಿದರು.

‘ಸಿಂಗ್‌–ಗವಿಯಪ್ಪ ಇಬ್ಬರೂ ಬೇಕು’

‘ನಮಗೆ ಆನಂದ್‌ ಸಿಂಗ್‌ ಹಾಗೂ ಎಚ್‌.ಆರ್‌. ಗವಿಯಪ್ಪ ಇಬ್ಬರೂ ಬೇಕು. ಎರಡೂ ಮನೆತನ ಒಂದಾಗಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಬೇಕು’ ಎಂದು ಬಿಜೆಪಿ ಮುಖಂಡ ಕಾರ್ತಿಕ್‌ ಘೋರ್ಪಡೆ ಹೇಳಿದರು.‘ಇಂದಿನ ಕಾರ್ಯಕ್ರಮಕ್ಕೆ ಗವಿಯಪ್ಪನವರು ಬಂದಿಲ್ಲ ಎಂದು ತಪ್ಪು ಭಾವಿಸುವುದು ಬೇಡ. ಬಹಳ ಮುಖ್ಯವಾದ ಕೆಲಸದಿಂದ ಅವರು ಬಂದಿಲ್ಲ’ ಎಂದರು.‘ಕಾಂಗ್ರೆಸ್‌ ಈ ಹಿಂದಿನ ಪಕ್ಷವಾಗಿ ಉಳಿದಿಲ್ಲ. ಆ ಪಕ್ಷದೊಳಗೆ ಬರೀ ‘ಲೋಫರ್‌’ಗಳು ಸೇರಿಕೊಂಡಿದ್ದಾರೆ’ ಎಂದು ಟೀಕಿಸಿದರು.

ಸಿ.ಎಂ.ಗೆ 150 ಕೆ.ಜಿ. ಸೇಬಿನ ಹಾರ

ಕಮಲಾಪುರ ಬಿಜೆಪಿ ಯುವ ಮೋರ್ಚಾದ ಶಿವು ಮತ್ತು ಗೆಳೆಯರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ 150 ಕೆ.ಜಿ. ಸೇಬಿನ ಹಾರ ಹಾಕಿ ಅಭಿಮಾನ ತೋರಿದರು.ಕಾರ್ಯಕ್ರಮ ಮುಗಿದ ನಂತರ ಹಾರದಿಂದ ಸೇಬುಗಳೆಲ್ಲ ಕಾಣೆಯಾಗಿದ್ದವು. ಅಲ್ಲಿದ್ದವರು ಅವುಗಳನ್ನು ಕಡಿದು ತಿಂದರು.

‘ಯಡಿಯೂರಪ್ಪ ರಾಜಾಹುಲಿ’

ಕಾರ್ಯಕ್ರಮದಲ್ಲಿ ಆನಂದ್‌ ಸಿಂಗ್‌ ಅವರು, ಯಡಿಯೂರಪ್ಪ ಅವರನ್ನು ‘ರಾಜಾಹುಲಿ’ ಎಂದು ಕರೆದು ಗಮನ ಸೆಳೆದರು.‘ವೇದಿಕೆ ಮೇಲೆ ಆಸೀನರಾಗಿರುವ ರಾಜಾಹುಲಿ’ ಎಂದು ಆರಂಭದಲ್ಲಿ ಕರೆದರೆ, ‘ನನ್ನ ಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆಗೆ ಅನುದಾನ ಮಂಜೂರು ಮಾಡಬೇಕು ಎಂದು ಕೇಳಿಕೊಂಡಾಗ ತಕ್ಷಣವೇ ಅದಕ್ಕೆ ಅನುದಾನ ಕೊಟ್ಟರು. ಯಾವುದೇ ವಿಚಾರವಿರಲಿ ಕೂಡಲೇ ಅದಕ್ಕೆ ಸ್ಪಂದಿಸುವ ಗುಣ ಅವರಲ್ಲಿದೆ. ಅದಕ್ಕಾಗಿಯೇ ಅವರನ್ನು ರಾಜಾಹುಲಿ ಎನ್ನುತ್ತಾರೆ’ ಎಂದು ಸಿಂಗ್‌ ಹೇಳಿದಾಗ ಜನ ಶಿಳ್ಳೆ ಹೊಡೆದರು.

ವಿಜಯನಗರ ಜಿಲ್ಲೆ ಎಂದಾಕ್ಷಣ ಕೇಕೆ

ಆನಂದ್‌ ಸಿಂಗ್‌ ಭಾಷಣ ಮಾಡುವಾಗ ವಿಜಯನಗರ ಕ್ಷೇತ್ರ ಎನ್ನುವ ಬದಲು ಬಾಯ್ತಪ್ಪಿ ವಿಜಯನಗರ ಜಿಲ್ಲೆ ಎಂದ ಕೂಡಲೇ ಅಲ್ಲಿದ್ದ ಕಾರ್ಯಕರ್ತರು ಕೇಕೆ ಹಾಕಿ ಶಿಳ್ಳೆ, ಚಪ್ಪಾಳೆ ಹೊಡೆದು ಸ್ವಾಗತಿಸಿದರು. ಅದಕ್ಕೆ ಅವರು ನಗೆಬೀರಿ ಸುಮ್ಮನಾದರು.

ಹೊಸಪೇಟೆಗೆ ಹೊಸಕೋಟೆ ಎಂದ ಸಿ.ಎಂ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಭಾಷಣ ಮಾಡುವಾಗ ಹೊಸಪೇಟೆ ಬದಲು ಹೊಸಕೋಟೆ ಎಂದರು. ಆಗ ಅಲ್ಲಿದ್ದ ಮುಖಂಡರು ಹೊಸಕೋಟೆಯಲ್ಲ, ಹೊಸಪೇಟೆ ಎಂದಾಗ ಅದನ್ನು ಸರಿಪಡಿಸಿಕೊಂಡು ಹೇಳಿದರು.‘ಹೊಸಪೇಟೆ ವಿಶ್ವಭೂಪಟದಲ್ಲಿ ರಾರಾಜಿಸಲು ಎಲ್ಲಾ ಸಹಕಾರ ನೀಡಲಾಗುವುದು. ಅದಕ್ಕಾಗಿ ಆನಂದ್‌ ಸಿಂಗ್‌ ಅವರನ್ನು ಗೆಲ್ಲಿಸಿ’ ಎಂದು ಮನವಿ ಮಾಡಿದರು.

50 ನಿಮಿಷದಲ್ಲಿ ಮುಗಿದ ಕಾರ್ಯಕ್ರಮ

ಕಮಲಾಪುರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಬಹಿರಂಗ ಸಭೆ ಕೇವಲ 50 ನಿಮಿಷಗಳಲ್ಲಿ ಮುಗಿದು ಹೋಯಿತು.ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಭಾಷಣ ಆಲಿಸಲು ಜನ ಬೆಳಿಗ್ಗೆ ಒಂಬತ್ತು ಗಂಟೆಯಿಂದಲೇ ಕಾದು ಕುಳಿತಿದ್ದರು. ಆದರೆ, ಕಾರ್ಯಕ್ರಮ 11.30ಕ್ಕೆ ಆರಂಭಗೊಂಡಿತು. ಯಡಿಯೂರಪ್ಪ ಕೇವಲ ಎಂಟು ನಿಮಿಷಗಳಷ್ಟೇ ಮಾತನಾಡಿ ಅಲ್ಲಿಂದ ನಿರ್ಗಮಿಸಿದರು.

ರಾರಾಜಿಸಿದ ಗವಿಯಪ್ಪ ಫ್ಲೆಕ್ಸ್‌

ಮಾಜಿಶಾಸಕ ಎಚ್‌.ಆರ್‌.ಗವಿಯಪ್ಪನವರು ಕಾರ್ಯಕ್ರಮಕ್ಕೆ ಗೈರಾಗಿದ್ದರು. ಆದರೆ, ಅವರ ಬೃಹತ್‌ ಫ್ಲೆಕ್ಸ್‌ ಮಾತ್ರ ವೇದಿಕೆಯ ಪಕ್ಕ ರಾರಾಜಿಸಿತು.‘ಇದೇನಿದು ಗವಿಯಪ್ಪ ಬರದಿದ್ದರೂ ಅವರ ಫ್ಲೆಕ್ಸ್‌ ಹಾಕಿದ್ದಾರಲ್ಲಾ’ ಎಂದು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.