ಸಂಡೂರು: ಇತ್ತೀಚೆಗೆ ನಡೆದ ಅಪಘಾತವು ಸಂಡೂರಿನ ವ್ಯವಸ್ಥೆಗಳನ್ನು ಪ್ರಶ್ನೆ ಮಾಡುವಂತಿದೆ. ತಾಲ್ಲೂಕಿನಲ್ಲಿ ಆರೋಗ್ಯ ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದ ಈ ಅಪಘಾತ, ಇಲ್ಲಿನ ಅದಿರು ಸಾಗಣೆ ವ್ಯವಸ್ಥೆ, ಅದರಿಂದ ಜನರಿಗೆ ಆಗುತ್ತಿರುವ ಅನನುಕೂಲದ ದಿಗ್ದರ್ಶನ ಮಾಡಿಸುತ್ತಿದೆ.
ಗಣಿ ಬಾಧಿತ ಗ್ರಾಮಗಳಲ್ಲಿ ಅನಿಯಂತ್ರಿತ ಗಣಿ ಲಾರಿಗಳ ಅಬ್ಬರದ ಸಂಚಾರದಿಂದ ಜನರು ತತ್ತರಿಸಿದ್ದು, ಜನಸಾಮಾನ್ಯರು ತಮ್ಮ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಸೃಷ್ಟಿಸಿದೆ.
ಸಂಡೂರಿನಲ್ಲಿ ಜೆಎಸ್‌ಡಬ್ಲು, ಎನ್‌ಎಂಡಿಸಿ, ಸ್ಮಯೆರ್, ಎಂಎಂಎಲ್, ವೆಸ್ಕೋ, ಬಿಕೆಜಿ ಸೇರಿದಂತೆ ಹಲವು ಗಣಿ ಕಂಪನಿಗಳಿವೆ. ಈ ಗಣಿಗಳಿಂದ ವಾರ್ಷಿಕವಾಗಿ 35 ಮಿಲಿಯನ್ ಟನ್ ಅದಿರನ್ನು ಹೊರ ತೆಗೆದು ಮಾರಾಟ ಮಾಡಲಾಗುತ್ತಿದೆ.
ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ ವಾರ್ಷಿಕ 10 ಲಕ್ಷ ಟನ್ ಅದಿರು ಉತ್ಪಾದಿಸುವ ಗಣಿಗಳು ಕಡ್ಡಾಯವಾಗಿ ಕ್ವನೆಯರ್ ಬೆಲ್ಟ್‌ಗಳನ್ನು ಅಳವಡಿಸಿಕೊಳ್ಳಬೇಕು. ಅದರ ಮೂಲಕವೇ ಅದಿರು ಸಾಗಿಸಬೇಕು. ಆದರೆ, ಜೆಎಸ್‌ಡಬ್ಲು ಮತ್ತು ಎನ್‌ಎಂಡಿಸಿ ಹೊರತುಪಡಿಸಿ ಇನ್ಯಾರೂ ಕನ್ವೇಯರ್ ಬೆಲ್ಟ್ ಅಳವಡಿಸಿಕೊಂಡಿಲ್ಲ. ಎನ್‌ಎಂಡಿಸಿ ಕನ್ವೇಯರ್ ಬೆಲ್ಟ್ ಹಾಳಾಗಿ ಅದಾಗಲೇ ವರ್ಷಗಳು ಉರುಳುತ್ತಿವೆ. ಹೀಗಾಗಿ ಬಹುಪಾಲು ಅದಿರು ಲಾರಿಗಳ ಮೂಲಕ ರಸ್ತೆಯಲ್ಲೇ ಸಾಗಾಟವಾಗುತ್ತಿದೆ.
ಸಂಡೂರು ಕುಮಾರಸ್ವಾಮಿ – ದೇವಗಿರಿ, ಸಂಡೂರು - ಹೊಸಪೇಟೆ, ಧರ್ಮಾಪುರ -ಯಶವಂತನಗರ, ಸಂಡೂರು – ತೋರಣಗಲ್ಲು ಸಾರ್ವಜನಿಕ ರಸ್ತೆಗಳಲ್ಲಿ ಪ್ರತಿ ದಿನ 11 ಸಾವಿರ ಅದಿರು ಟಿಪ್ಪರ್‌ಗಳು ಸಂಚರಿಸುತ್ತಿವೆ. ಪ್ರತಿ 30 ಸೆಕೆಂಡಿಗೆ ಒಂದು ಅದಿರು ಲಾರಿ ಸಂಚರಿಸುವುದರಿಂದ ಬೈಕ್, ಸಾರಿಗೆ ಬಸ್, ಆಂಬುಲೆನ್ಸ್, ಶಾಲಾ ಕಾಲೇಜುಗಳ ಬಸ್, ಪ್ರವಾಸಿಗರ ವಾಹನಗಳು, ರೈತರ ಎತ್ತಿನ ಬಂಡಿಗಳು ಸೇರಿದಂತೆ ಇತರೆ ವಾಹನಗಳ ಸವಾರರು ಪರದಾಡವಂತಾಗಿದೆ.
ಸಂಡೂರಿನಲ್ಲಿ 2022ರಿಂದ ರಿಂದ 24ರವರೆಗೆ 330 ಅಪಘಾತಗಳು ಸಂಭವಿಸಿದ್ದು, 126 ಜನರು ಮೃತಪಟ್ಟಿದ್ದಾರೆ. 310 ಜನ ಗಾಯಗೊಂಡಿದ್ದಾರೆ. ಈ ಭೀಕರ ಅಪಘಾತಗಳಿಂದ ಕೆಲ ಜನರು ಶಾಶ್ವತವಾಗಿ ಅಂಗವಿಕಲರಾಗಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ಇದಕ್ಕೆಲ್ಲ ರಸ್ತೆ ಮೂಲಕ ಅದಿರು ಸಾಗಿಸುತ್ತಿರುವುದೇ ಮೂಲ ಕಾರಣ.
ಅದಿರು ಸಾಗಣೆಗೆ ಸುಪ್ರೀಂ ಕೋರ್ಟ್ ಸೂಚನೆಯಂತೆ ಕನ್ವೇಯರ್ ಬೆಲ್ಟ್‌ಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡರೆ ರಸ್ತೆ ಮೂಲಕ ಅದಿರು ಸಾಗಿಸುವುದು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಅಪಘಾತಗಳೂ ತಗ್ಗಲಿವೆ ಎಂಬುದು ಜನರ ಅಭಿಪ್ರಾಯ.
ಗಣಿ ಮಾಲೀಕರ, ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ನ್ಯಾಯಾಲಯದ ಆದೇಶವು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕನ್ವೇಯರ್ ಬೆಲ್ಟ್ ಹಾಕದ ಗಣಿಗಳ ಬಗ್ಗೆ ಜಿಲ್ಲಾಡಳಿತ, ಸಿಇಸಿಯು ಸಹ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಜನರಿಂದ ಎದುರಾಗಿದೆ.
ಇನ್ನೊಂದೆಡೆ ಲಾರಿ ಲಾಬಿಯು ರಾಜಕಾರಣಿಗಳ ಮೇಲೆ ಒತ್ತಡ ತಂದು ಕನ್ವೇಯರ್ ಬೆಲ್ಟ್‌ಗಳು ಬರದಂತೆ ನೋಡಿಕೊಳ್ಳಲಾಗುತ್ತಿದೆ ಎಂಬ ಆರೋಪವೂ ಇದೆ. ಏನೇ ಆದರೂ ತೊಂದರೆ ಮಾತ್ರ ಜನರಿಗೆ ಎಂಬುದು ಜನರ ಆರೋಪ.
ಕನ್ವೇಯರ್ ಬೆಲ್ಟ್ ಹಾಕದ ಗಣಿಗಳಿಗೆ ಅದಿರು ಉತ್ಪಾದನೆಯ ಮಿತಿ ಕಡಿತಗೊಳಿಸಲು ಜಿಲ್ಲಾಡಳಿತವು ಸಿಇಸಿಗೆ ತಕ್ಷಣ ಶಿಫಾರಸ್ಸು ಮಾಡಬೇಕು.– ಟಿ.ಎಂ.ಶಿವಕುಮಾರ್, ಶ್ರೀಶೈಲಾ ಆಲದಳ್ಳಿ ಜನ ಸಂಗ್ರಾಮ ಪರಿಷತ್ ಪದಾಧಿಕಾರಿಗಳು ಸಂಡೂರು
ಅದಿರು ಲಾರಿಗಳ ಅನಿಯಂತ್ರಿತ ಸಂಚಾರದ ಬಗ್ಗೆ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. ನಿಯಮಗಳ ಪಾಲನೆ ಜಾಗೃತಿ ಮೂಡಿಸಲಾಗುವುದು.– ಅನಿಲ್ ಕುಮಾರ್ ಜಿ., ತಹಶೀಲ್ದಾರ್ ಸಂಡೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.