ಕಂಪ್ಲಿ: ತಾಲ್ಲೂಕಿನ ಜವುಕು ಗ್ರಾಮದ ಬಳಿ ಜೆ.ಜೆ.ಎಂ ಯೋಜನೆಯಡಿ ₹9.94ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕೆರೆ, ಪೈಪ್‍ಲೈನ್ ಮತ್ತು ನಳಗಳ ಅಳವಡಿಕೆ ಕಾಮಗಾರಿಗೆ ಶಾಸಕ ಜೆ.ಎನ್. ಗಣೇಶ್ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಹಂಪಾದೇವನಹಳ್ಳಿ, ಜವುಕು, ಜೀರಿಗನೂರು, ರೆಗ್ಯುಲೇಟರ್‍ಕ್ಯಾಂಪ್, ಜವುಕು ಕ್ಯಾಂಪ್, ಗೋನಾಳ, ಚಿಕ್ಕಜಾಯಿಗನೂರು ಗ್ರಾಮಗಳಿಗೆ ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕ್ಷೇತ್ರದ ಗ್ರಾಮ ಪಂಚಾಯಿತಿಗೆ ತಲಾ 200 ಮನೆ ನಿರ್ಮಾಣ, ಕುರುಗೋಡು ಪಟ್ಟಣದಲ್ಲಿ 16ಎಕರೆಯಲ್ಲಿ ಜಿ–ಪ್ಲಸ್ ಒನ್ ಮಾದರಿಯಲ್ಲಿ 1,400 ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಂಪ್ಲಿ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಿಸಿ ಅಲ್ಲಿಯ 11ಎಕರೆ ಪ್ರದೇಶದಲ್ಲಿ ಜಿ–ಪ್ಲಸ್ ಒನ್ ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಸ್ಥಳದಲ್ಲಿದ್ದ ಕೆಲ ಮಹಿಳೆಯರು ಹೊಸ ಪಡಿತರ ಚೀಟಿಗಾಗಿ ಮನವಿ ಮಾಡಿದಾಗ ಶಾಸಕರು ಸ್ಪಂದಿಸಿದರು.
ಇದಕ್ಕೂ ಮುನ್ನ ಉಪ್ಪಾರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ₹17ಲಕ್ಷ ವೆಚ್ಚದ ಕೊಠಡಿ ನಿರ್ಮಾಣಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪಿಡಿಒ ಬೀರಲಿಂಗ, ಅಧಿಕಾರಿಗಳಾದ ಎಎಎ ವೈ. ರಾಮಚಂದ್ರಪ್ಪ, ಎಇ ಕೆ.ಬಿ. ರವಿ, ಮುಖಂಡರಾದ ರಾಜುನಗೌಡ, ಹಾಲ್ವಿ ಕುಮಾರಸ್ವಾಮಿ, ಎನ್. ಮಲ್ಲಿಕಾರ್ಜುನ, ಜೆ. ಜಡೆಪ್ಪ, ಎಚ್.ಎಂ. ರಾಮಲಿಂಗಯ್ಯಸ್ವಾಮಿ, ಪೂಜಾರ ಅಂಜನೇಯ, ಎನ್. ಬಸವರಾಜ, ಗ್ರಾಮ ಪಂಚಾಯಿತಿ ಹಾಲಿ, ಮಾಜಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.