ADVERTISEMENT

ಸಹಾಯಕರು ಸಿಕ್ಕಿ ಬಿದ್ದ ವಾರಕ್ಕೇ ಬಳ್ಳಾರಿ ಪಾಲಿಕೆ ಆಯುಕ್ತೆ ತುಷಾರಮಣಿ ಅಮಾನತು!

ಲಂಚ ಪಡೆದ ಆರೋಪ ಸಾಬೀತು:ಡಿ.ಸಿ ವರದಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 5:32 IST
Last Updated 17 ಅಕ್ಟೋಬರ್ 2020, 5:32 IST
ತುಷಾರಮಣಿ
ತುಷಾರಮಣಿ   

ಬಳ್ಳಾರಿ: ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳಕ್ಕೆ ತಮ್ಮ ಸಹಾಯಕರು ಸಿಕ್ಕಿಬಿದ್ದು ಒಂದು ವಾರ ಕಳೆಯುವಷ್ಟರಲ್ಲೇ ಇಲ್ಲಿನ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿಯವರೂ ಮತ್ತೊಂದು ಪ್ರಕರಣದಲ್ಲಿ ₹5 ಲಕ್ಷ ಲಂಚ ಪಡೆದ ಆರೋಪಕ್ಕೆ ಗುರಿಯಾಗಿ ಸೇವೆಯಿಂದ ಅಮಾನತ್ತಾಗಿದ್ದಾರೆ. ಪಾಲಿಕೆಯ ಮೇಲೆ ಲಂಚದ ಕಳಂಕ ಮೆತ್ತಿಕೊಂಡಿದೆ.

‘ಆಯುಕ್ತೆ ತಮ್ಮ ಸರ್ಕಾರಿ ಕಾರನ್ನು ತಾವೇ ಚಲಾಯಿಸಿಕೊಂಡು ರಾತ್ರಿ ವೇಳೆ ಬಂದು ₹5 ಲಕ್ಷ ಲಂಚ ಪಡೆದರೆಂಬ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರು ನೀಡಿದ ವರದಿ ಆಧರಿಸಿ ನಗರಾಭಿವೃದ್ಧಿ ಇಲಾಖೆಯು ಶುಕ್ರವಾರ ಆದೇಶ ಹೊರಡಿಸಿದೆ.

ಲಂಚ ಪ್ರಕರಣದ ಕುರಿತು ನಗರದ ಅಣ್ಣಾ ಫೌಂಡೇಶನ್‌ ಕಚೇರಿಯಲ್ಲಿ ರಾಜಶೇಖರ ಮುಲಾಲಿ ನೇತೃತ್ವ ದಲ್ಲಿ ಗುರುವಾರ ಬಾಡದ ಬದ್ರಿನಾಥ್‌ ಎಂಬುವವರು ವಿವಿಧ ಸಂಘಟನೆಗಳ ಜೊತೆ ಸೇರಿ ಆಯುಕ್ತೆ ವಿರುದ್ಧ ಲಂಚ ಪಡೆದ ಆರೋಪ ಮಾಡಿದ್ದರು.

ADVERTISEMENT

‘ಆಸ್ತಿ ದಾಖಲೆಗೆ ಸಂಬಂಧಿಸಿ ಫಾರಂ 2 ಕೊಡಲು ₹5 ಲಕ್ಷ ಕೇಳಿದ್ದರು. ಬೆಳಿಗ್ಗೆ ಕೊಡುವೆ ಎಂದರೂ ರಾತ್ರಿ 10.30ರ ವೇಳೆಗೆ ತಾವೇ ಸರ್ಕಾರಿ ಕಾರು ಚಾಲನೆ ಮಾಡಿಕೊಂಡು ಬಂದು ಹಣ ಪಡೆದು ಹೋಗಿದ್ದರು’ ಎಂದು ಆರೋಪಿಸಿದ್ದರು. ಹಣ ಪಡೆದ ಘಟನೆಯದ್ದು ಎನ್ನಲಾದ ವಿಡಿಯೊ ದೃಶ್ಯಾವಳಿ, ಸಂಭಾಷಣೆಯ ಧ್ವನಿ ಮುದ್ರಿತ ಕ್ಲಿಪ್ಪಿಂಗ್‌ ಬಿಡುಗಡೆ ಮಾಡಿದ್ದರು.

ಇದೇ ಸಂದರ್ಭದಲ್ಲಿ ನವ ಕರ್ನಾಟಕ ಯುವಶಕ್ತಿ ಸಂಘಟನೆ ಮುಖಂಡರು ಹಾಗೂ ಸಾರ್ವಜನಿಕರೂ ಪಾಲಿಕೆ ಆಯುಕ್ತೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸುದ್ದಿಗೋಷ್ಠಿ ಬಳಿಕ ಪಾಲಿಕೆ ಮುಂಭಾಗ ಪ್ರತಿಭಟನೆಯನ್ನೂ ನಡೆಸಿದ್ದರು. ನಂತರ ಯುವಶಕ್ತಿ ಸಂಘ ಟನೆ ಜಿಲ್ಲಾಧಿಕಾರಿಗೆ ದೂರು ನೀಡಿತ್ತು.

ಲಂಚ ಪಡೆದ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಆಯುಕ್ತೆ, ‘ಆರೋಪದಲ್ಲಿ ಹುರುಳಿಲ್ಲ. ಆರೋಪ ಮಾಡಿರುವವರು ವಿಡಿಯೊ ಮತ್ತು ಆಡಿಯೋ ತುಣು ಕುಗಳ ಬದಲಿಗೆ ಎಲ್ಲವನ್ನೂ ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದ್ದರು.

ಅ.9ರಂದು ಇನ್ನೊಂದು ಪ್ರಕರಣ: ಮತ್ತೊಂದು ಪ್ರಕರಣದಲ್ಲಿ, ನಗರದ ಇಂಡಿಯನ್‌ ಸ್ಕೂಲ್‌ ಮಾಲೀಕರಾದ ಶಾಹೀದಾ ಬೇಗಂ ಅವರಿಗೆ ಶಾಲೆಗೆ ಸಂಬಂಧಿಸಿ ಫಾರಂ ನಂ2 ನೀಡಲು ಪಾಲಿಕೆಯಲ್ಲಿ ₹50 ಸಾವಿರ ಲಂಚ ಪಡೆಯುತ್ತಿದ್ದಾಗಲೇ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಆಯುಕ್ತರ ಆಪ್ತ ಸಹಾಯಕ ಮಲ್ಲಿಕಾರ್ಜುನ್‌ ಎಸ್‌.ಪಾಟೀಲ್‌ ಮತ್ತು ಡಿ. ದರ್ಜೆ ನೌಕರ ಎಸ್‌.ಬಾಷಾ ಸಿಕ್ಕಿಬಿದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.