ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಬೆಳೆದಿರುವ ಒಣಮೆಣಸಿನಕಾಯಿಯನ್ನು ಇ–ಟೆಂಡರ್ ವ್ಯವಸ್ಥೆ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳಲ್ಲಿ ಮಾರಾಟಕ್ಕೆ ಅನುವು ಮಾಡಿಕೊಡಬೇಕು, ಕೂಡಲೇ ಬಳ್ಳಾರಿ ಜಿಲ್ಲೆಯಲ್ಲಿ ಒಣಮೆಣಸಿನ ಕಾಯಿ ಮಾರುಕಟ್ಟೆಯನ್ನು ಆರಂಭಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.
ಈ ಕುರಿತು ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ ಸಂಘದ ಅಧ್ಯಕ್ಷ ಕರೂರು ಮಾಧವ ರೆಡ್ಡಿ, ‘ರಾಜ್ಯದಲ್ಲಿ ಅತೀ ಹೆಚ್ಚು ಒಣಮೆಣಸಿನಕಾಯಿ ಬೆಳೆಯುವ ಜಿಲ್ಲೆ ಬಳ್ಳಾರಿ. 2023-24 ಸಾಲಿನಲ್ಲಿ 59,508 ಹೆಕ್ಟೇರ್ ಪ್ರದೇಶದಲ್ಲಿ ಸರಿಸುಮಾರು 11,9155.54 ಟನ್ ಒಣ ಮೆಣಸಿನಕಾಯಿ ಬೆಳೆಯಲಾಗಿದೆ. ಇದು ರಾಜ್ಯದ ಒಟ್ಟು ಮೆಣಸಿನಕಾಯಿ ಉತ್ವಾದನೆಯಲ್ಲಿ ಶೇ 20-22ರಷ್ಟು ಆಗುತ್ತದೆ’ ಎಂದು ಹೇಳಿದ್ದಾರೆ.
‘ಮೆಣಸಿನಕಾಯಿ ಬೆಳೆಯುವ ಪ್ರದೇಶಗಳಾದ ಹಾವೇರಿ, ಗದಗ, ಧಾರವಾಡ, ರಾಯಚೂರು ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಸಿಂಹ ಪಾಲು ಬಳ್ಳಾರಿಯದ್ದೇ ಆಗಿದೆ. ಭಾರತದ ಅತೀ ದೊಡ್ಡ ಒಣಮೆಣಸಿನಕಾಯಿ ಮಾರುಕಟ್ಟೆ ಕೇಂದ್ರ ಬ್ಯಾಡಗಿಯಲ್ಲಿದ್ದರೂ ಅಲ್ಲಿ ಬೆರಳಣಿಕೆಯಷ್ಟು ಕೋಲ್ಡ್ ಸ್ಟೋರೇಜ್‌ಗಳಿವೆ. ಆದರೆ ಬಳ್ಳಾರಿ ಜಿಲ್ಲೆಯೊಂದರಲ್ಲೇ 40 ಕೋಲ್ಡ್ ಸ್ಟೋರೇಜ್‌ಗಳಿವೆ. ಇಳುವರಿಯೂ ಅಗಾಧ ಪ್ರಮಾಣದಲ್ಲಿದೆ’ ಎಂದು ತಿಳಿಸಿದ್ದಾರೆ.
‘ಬೆಲೆ ಕುಸಿತ ಪಾವತಿ ಯೋಜನೆ’ಯ ‘ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ’ಯಡಿಯಲ್ಲಿ ಬೆಂಬಲ ಬೆಲೆಯನ್ನು ಒಣಮೆಣಸಿನಕಾಯಿಗೆ ಘೋಷಣೆ ಮಾಡಬೇಕೆಂದು ರೈತರು ಆಗ್ರಹಿಸಿದ್ದರು. ರಾಜ್ಯದ ಮನವಿಯ ಮೇರೆಗೆ ಕೇಂದ್ರ ಸರ್ಕಾರವು ಕ್ವಿಂಟಲ್ ಒಣಮೆಣಸಿನಕಾಯಿಗೆ ₹10,589.20 ಗಳಂತೆ ದರ ನಿಗದಿ ಮಾಡಿದೆ. ಆದರೆ, ಇ–ಟೆಂಡರ್ ಮೂಲಕವೇ ಮಾರಾಟ ಮಾಡಬೇಕಾಗಿರುವುದರಿಂದ ಬಳ್ಳಾರಿ ರೈತರು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಆದ್ದರಿಂದ ಸರ್ಕಾರ ಇ–ಟೆಂಡರ್ ಇರುವ ಜಿಲ್ಲೆಗಳಲ್ಲಿ ಬಳ್ಳಾರಿ ರೈತರು ಒಣಮೆಣಸಿನಕಾಯಿ ಮಾರಾಟ ಮಾಡಲು ಅನುವು ಮಾಡಿಕೊಡಬೇಕು. ಜತೆಗೆ ಬಳ್ಳಾರಿಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು’ ಎಂದು ಮಾಧವ ರೆಡ್ಡಿ ಒತ್ತಾಯಿಸಿದ್ದಾರೆ.
ಜುಲೈ 1ರಿಂದಲೇ ನೀರು ಬಿಡಿ ತುಂಗಭದ್ರಾ ಜಲಾಶಯದಿಂದ ಜುಲೈ 1ರಿಂದಲೇ ಕಾಲುವೆಗಳಿಗೆ ನೀರನ್ನು ಹರಿಸಿದರೆ ರೈತರು ಗದ್ದೆಗಳಲ್ಲಿ ಸಸಿಗಳನ್ನು ಮಡಿ ಮಾಡಿಕೊಳ್ಳಲು ಸಮಯ ಸಿಗುತ್ತದೆ. ಅಲ್ಲದೆ ಈ ವರ್ಷ ಎಲ್ಲಾ ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸುವ ಕಾಮಗಾರಿ ಆರಂಭವಾಗುವುದರಿಂದ ಎರಡನೇ ಬೆಳೆಗೆ ನೀರು ಲಭ್ಯವಾಗುವುದು ಅನುಮಾನ. ಹಾಗಾಗಿ ರೈತರು ಪೂರ್ವಭಾವಿಯಾಗಿ ಗದ್ದೆಗಳನ್ನು ಹದಗೊಳಿಸಿಕೊಳ್ಳಲು ಕಾಲುವೆಗಳಿಗೆ ಜುಲೈ 1ರಿಂದಲೇ ನೀರು ಹರಿಸಬೇಕು. ಸಲಹಾ ಸಮಿತಿಯು ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ರೈತ ಸಂಘ ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.