ADVERTISEMENT

ಸಮಾನತೆಯಿಂದ ದೇಶದ ಅಭಿವೃದ್ಧಿ ಸಾಧ್ಯ: ಮೂಡ್ನಾಕೂಡು ಚಿನ್ನಸ್ವಾಮಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 10:42 IST
Last Updated 14 ಏಪ್ರಿಲ್ 2019, 10:42 IST
ಕಾರ್ಯಕ್ರಮದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿದರು   

ಹೊಸಪೇಟೆ: ‘ಧರ್ಮಾಚರಣೆ ಎಂಬುದು ನೀತಿ ಸಂಹಿತೆಯಾಗಬೇಕು. ಒಡೆದು ಆಳುವ ನಿಯಮ ಹೊಂದಿರಬಾರದು’ ಎಂದು ಚಿಂತಕ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ದಲಿತ ಅಧ್ಯಯನ ಪೀಠವು ಭಾನುವಾರ ವಿ.ವಿ.ಯಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಬಾಬು ಜಗಜೀವನರಾಂ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

‘ಅಂಬೇಡ್ಕರ್‌, ಜಗಜೀವನರಾಂ ಅವರ ಆಶಯ ಸಮಾನತೆ ಆಗಿತ್ತು. ಸಮಾನತೆಯ ತತ್ವ ಆಚರಣೆಗೆ ಬರದಿದ್ದರೆ ದೇಶ ಮುಂದುವರೆಯುವುದು ಕಷ್ಟ’ ಎಂದು ಹೇಳಿದರು.

ADVERTISEMENT

ಕುಲಪತಿ ಪ್ರೊ. ಸ.ಚಿ.ರಮೇಶ, ‘ಒಬ್ಬ ವ್ಯಕ್ತಿಯ ಶ್ರೀಮಂತಿಕೆ ಇರುವುದು ಆತನ ಪಾಂಡಿತ್ಯದಲ್ಲಿ ಅಂತಹ ಪಾಂಡಿತ್ಯವನ್ನು ಅಂಬೇಡ್ಕರ್ ಅವರು ಹೊಂದಿದ್ದರು’ ಎಂದರು.

‘ಅಂಬೇಡ್ಕರ ಮೂಲತಃ ಜ್ಞಾನದಾಹಿ. ಅವರು ತಮ್ಮ 23-24ನೇ ವಯಸ್ಸಿನಲ್ಲಿ ಬರೆದಿರುವ ಸಂಶೋಧನೆಯ ಬರವಣಿಗೆಗಳು ಅವರ ಆಳವಾದ ಪಾಂಡಿತ್ಯ ಮತ್ತು ಪ್ರತಿಭೆಗೆ ದೊಡ್ಡ ಸಾಕ್ಷಿ. ಅವರು ಯಾವುದೇ ವಿಷಯವನ್ನು ಅಧ್ಯಯನಕ್ಕೆ ಆರಿಸಿಕೊಂಡರೂ ಅದರ ಆಳ-ಅಗಲಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡುತ್ತಿದ್ದರು’ ಎಂದು ಹೇಳಿದರು.

ಕುಲಸಚಿವ ಅಶೋಕಕುಮಾರ ರಂಜೇರೆ ಮಾತನಾಡಿ, ‘ನಾನು ಮಾಡಿದ ಹೋರಾಟದ ರಥವನ್ನು ಸಾಧ್ಯವಾದರೆ ಮುಂದುವರೆಸಿ, ಇಲ್ಲವಾದರೆ ಅಲ್ಲಿಯೇ ನಿಲ್ಲಿಸಿ. ಆದರೆ, ಯಾವುದೇ ಕಾರಣಕ್ಕೂ ಹಿಂದಕ್ಕೆ ಕೊಂಡೊಯ್ಯಬಾರದು ಎಂದು ಅಂಬೇಡ್ಕರ್‌ ಅವರು ಕರೆ ಕೊಟ್ಟಿದ್ದರು’ ಎಂದು ನೆನಪಿಸಿದರು.

ಸಹ ಪ್ರಾಧ್ಯಾಪಕ ಎಸ್.ಎ.ಗೋವರ್ಧನ್, ‘ಧಾರ್ಮಿಕ ಹಾಗೂ ಜಾತಿ ನೆಲೆಯಲ್ಲಿ ವ್ಯಕ್ತಿಯನ್ನು ಗುರುತಿಸುತ್ತಿರುವುದು ದುರದೃಷ್ಟಕರ ಸಂಗತಿ. ಅನ್ನ, ಬಟ್ಟೆ ಹೊಂದಿರುವವರು ನೈಜ ಸ್ವಾತಂತ್ರ್ಯವನ್ನು ಹೊಂದಿರುವವರು ಎಂದು ಬಾಬು ಜಗಜೀವನ್‍ರಾಂ ಅವರು ಬಲವಾಗಿ ನಂಬಿದ್ದರು. ದಲಿತರ ಮತ್ತು ದಲಿತೇತರರ ವಿಮೋಚನೆಗಾಗಿ ಹಗಲಿರುಳು ಹೋರಾಟ ನಡೆಸಿದ್ದರು. ಹಸಿವು, ಆರೋಗ್ಯ, ಅಭಿವೃದ್ಧಿ ಎಲ್ಲರಿಗೂ ಒಂದೇ ಎಂದು ಹೇಳಿದ್ದರು’ ಎಂದು ತಿಳಿಸಿದರು.

ಸಂಶೋಧನಾವಿದ್ಯಾರ್ಥಿ ಕೆಂಚಪ್ಪ ಬಡಿಗೇರ್, ಬಾಬಾ ಸಾಹೇಬರ ಚಿತ್ರ ಬಿಡಿಸಿದರು. ಅದನ್ನು ಕುಲಪತಿಗೆ ಉಡುಗೊರೆಯಾಗಿ ನೀಡಿದರು.ಪೀಠದ ಸಂಚಾಲಕ ವೆಂಕಟಗಿರಿ ದಳವಾಯಿ, ಸಂಶೋಧನಾ ವಿದ್ಯಾರ್ಥಿಗಳಾದ ಸಾವಿತ್ರಿ ಮಠಪತಿ, ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.