ADVERTISEMENT

ಅರ್ಹರು ‘ಗ್ಯಾರಂಟಿ’ಯಿಂದ ವಂಚಿತರಾಗದಿರಿ

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಸದಸ್ಯ ಹೆಗ್ಡಾಳ್ ಪರಶುರಾಂ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 15:20 IST
Last Updated 23 ಏಪ್ರಿಲ್ 2025, 15:20 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿಯ ಸದಸ್ಯ ಹೆಗ್ಡಾಳ್ ಪರಶುರಾಂ ಮಾತನಾಡಿದರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿಯ ಸದಸ್ಯ ಹೆಗ್ಡಾಳ್ ಪರಶುರಾಂ ಮಾತನಾಡಿದರು   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹಂಪಾಪಟ್ಟಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ‘ಗ್ಯಾರಂಟಿ ಯೋಜನೆಗಳ ನಡೆ ಗ್ರಾಮ ಪಂಚಾಯಿತಿ ಕಡೆ’ ಎರಡನೇ ದಿನದ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಸದಸ್ಯ ಹೆಗ್ಡಾಳ್ ಪರಶುರಾಂ ಮಾತನಾಡಿ, ‘ಅರ್ಹ ಫಲಾನುಭವಿಗಳು ಪಂಚ ಗ್ಯಾರಂಟಿ ಯೋಜನೆಯ ಸೌಲಭ್ಯಗಳಿಂದ ವಂಚಿತರಾಗಬಾರದು, ಸರ್ಕಾರ ಎಲ್ಲ ಜಾತಿ ಜನಾಂಗದ ಬಡವರು, ಶೋಷಿತರ ಪರ ಎಂದು ಸಾಬೀತು ಪಡಿಸಿದೆ. ಯಾರಾದರೂ ಸೌಲಭ್ಯಗಳಿಂದ ವಂಚಿತರಾಗಿದ್ದರೆ, ತಾಂತ್ರಿಕ ದೋಷ ಇದ್ದರೆ ಸಮಿತಿಯ ಗಮನಕ್ಕೆ ತರಬೇಕು’ ಎಂದರು.

ತಾಲ್ಲೂಕು ಸಮಿತಿಯ ಅಧ್ಯಕ್ಷ ಸೊನ್ನದ ಗುರುಬಸವರಾಜ ಮಾತನಾಡಿ, ‘ತಾಲ್ಲೂಕಿನಲ್ಲಿ ಶೇ 97ರಷ್ಟು ಫಲಾನುಭವಿಗಳು ಯೋಜನೆಗಳ ಸೌಲಭ್ಯ ಪಡೆಯುತ್ತಿದ್ದಾರೆ, ಇನ್ನುಳಿದ ಶೇ 3ರಷ್ಟು ಫಲಾನುಭವಿಗಳು ಸೌಲಭ್ಯ ವಂಚಿತರಾಗಿದ್ದಾರೆ. ತಾಲ್ಲೂಕಿನಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸಬೇಕು, ಈ ಕುರಿತು ಸಮಿತಿ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಮೊದಲ ಹಂತದಲ್ಲಿ ಏಳು ಗ್ರಾಮ ಪಂಚಾಯಿತಿಗಳಲ್ಲಿ ಸಭೆ ನಡೆಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ಮಹಿಳೆಯರೊಂದಿಗೆ ಸಂವಾದ ನಡೆಯಿತು. ಗೃಹಲಕ್ಷ್ಮಿಯ ಮೊತ್ತವನ್ನು ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ತಪಾಸಣೆ, ಹೊಲಿಗೆಯಂತ್ರ ಖರೀದಿಸಿ ಸ್ವಾವಲಂಬಿ ಬದುಕು ಕಂಡುಕೊಂಡಿದ್ದು, ಹಸು ಖರೀದಿಸಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದನ್ನು ಮಹಿಳೆಯರು ಸಭೆಯ ಗಮನಕ್ಕೆ ತಂದರು.

ತಾಲ್ಲೂಕು ಯೋಜನಾಧಿಕಾರಿ ನಾಗರಾಜನಾಯ್ಕ ಮಾತನಾಡಿದರು. ಸಮಿತಿಯ ಸದಸ್ಯರಾದ ಗೌರಜ್ಜನವರ ಗಿರೀಶ್, ವೆಂಕಟೇಶನಾಯ್ಕ, ಉಪ್ಪಾರ ಕಾರ್ತೀಕ್, ಪಿಡಿಒ ಖಾಜಾಬನ್ನಿ, ಕಾರ್ಯದರ್ಶಿ ಶಂಕರಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.