ADVERTISEMENT

ಚರಿತ್ರೆಯ ವೈಭವೀಕರಣ ಸರಿಯಲ್ಲ: ನಂಜರಾಜ ಅರಸ್‌

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 12:06 IST
Last Updated 18 ಡಿಸೆಂಬರ್ 2019, 12:06 IST
ಕಾರ್ಯಕ್ರಮದಲ್ಲಿ ಕುಲಸಚಿವ ಎ. ಸುಬ್ಬಣ್ಣ ರೈ ಅವರು ಇತಿಹಾಸ ಚಿಂತಕ ನಂಜರಾಜ ಅರಸ್‌ ಅವರನ್ನು ಸನ್ಮಾನಿಸಿದರು
ಕಾರ್ಯಕ್ರಮದಲ್ಲಿ ಕುಲಸಚಿವ ಎ. ಸುಬ್ಬಣ್ಣ ರೈ ಅವರು ಇತಿಹಾಸ ಚಿಂತಕ ನಂಜರಾಜ ಅರಸ್‌ ಅವರನ್ನು ಸನ್ಮಾನಿಸಿದರು   

ಹೊಸಪೇಟೆ: ‘ಚರಿತ್ರೆ ದಾಖಲಿಸುವಾಗ ಅದರ ವೈಭವೀಕರಿಸುವುದಾಗಲಿ, ತುಚ್ಛೀಕರಿಸುವುದಾಗಲಿ ಮಾಡುವುದು ಸರಿಯಾದ ಲಕ್ಷಣವಲ್ಲ’ ಇತಿಹಾಸ ಚಿಂತಕ ನಂಜರಾಜ ಅರಸ್‌ ತಿಳಿಸಿದರು.

ಬುಧವಾರ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಓನಕೆ ಓಬವ್ವ ಅಧ್ಯಯನ ಪೀಠದಿಂದ ಹಮ್ಮಿಕೊಂಡಿದ್ದ ‘ಆಧುನಿಕ ಪೂರ್ವ ಸಂದರ್ಭ; ಆಡಳಿತ ನಿರ್ವಹಿಸಿದ ರಾಣಿಯರು’ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

‘ಚರಿತ್ರೆ ರಚನೆಯಲ್ಲಿ ತಾರತಮ್ಯ ನೀತಿ ಮತ್ತು ವೈಯಕ್ತಿಕ ಅಭಿಪ್ರಾಯಗಳನ್ನು ದೂರ ಇಟ್ಟಾಗ ಮಾತ್ರ ನಿಜವಾದ ಇತಿಹಾಸವನ್ನು ಅರಿತುಕೊಳ್ಳಲು ಸಾಧ್ಯ. ಯಾವುದೇ ಒಂದು ಘಟನೆಯನ್ನು ಇತಿಹಾಸದಲ್ಲಿ ದಾಖಲಿಸುವಾಗ ಅದರಲ್ಲಿ ವೈಯಕ್ತಿಕ ಅಭಿಪ್ರಾಯಗಳಿಗೆ ಒತ್ತು ಕೊಡಬಾರದು’ ಎಂದು ತಿಳಿಸಿದರು.

ADVERTISEMENT

‘ಇತಿಹಾಸವನ್ನು ಹಲವರು ಹಲವು ದೃಷ್ಟಿಕೋನ, ಮನೋಭಾವ, ಚಿಂತನೆಗೆ ತಕ್ಕಂತೆ ಪ್ರಸ್ತುತಪಡಿಸುತ್ತಾರೆ. ಯಾವುದೇ ಅಂಶದ ಬಗ್ಗೆ ನಿರ್ಣಯ ಕೊಡುವಾಗ ಅದರ ಬಗ್ಗೆ ಹಲವು ಸಲ ಪರಿಶೀಲನೆ ನಡೆಸಬೇಕು. ಇತಿಹಾಸ ಮತ್ತು ಪುರಾಣವನ್ನು ಓದಿ. ಆದರೆ, ಸ್ವಂತ ನಿರ್ಧಾರ ಮಾಡಿ’ ಎಂದರು.

ವಿಶ್ವವಿದ್ಯಾಲಯದ ಕುಲಸಚಿವ ಎ. ಸುಬ್ಬಣ್ಣ ರೈ, ‘ಒಂದು ಕಡೆ ಇತಿಹಾಸದ ಕೆಲವು ಸಂದರ್ಭಗಳಲ್ಲಿ ಮಹಿಳೆಯರನ್ನು ಪೂಜ್ಯತಾ ಭಾವನೆಯಿಂದ ನೋಡುವುದು, ಅವರು ಪುರುಷರಿಗೆ ಸಮಾನವಾಗಿ ಕಾರ್ಯನಿರ್ವಹಿಸುವುದು ಕಂಡು ಬಂದರೆ, ಮತ್ತೊಂದು ಕಡೆ ಮಹಿಳೆಯರನ್ನು ಶೋಷಿಸುವ ವೈಚಾರಿಕ ಪ್ರಜ್ಞೆಯು ಕಾಣಬಹುದು. ಹೀಗೆ ಹಲವು ವೈರುಧ್ಯಗಳ ನಡುವೆ ಮಹಿಳೆಯರ ಸಾಧನೆಯನ್ನು ವಿಚಾರ ಮಾಡಬೇಕಾದ ಅಗತ್ಯವಿದೆ’ ಎಂದು ಹೇಳಿದರು.

ಕುಲಪತಿ ಪ್ರೊ. ಸ.ಚಿ. ರಮೇಶ, ಪೀಠದ ಸಂಚಾಲಕಿ ಪ್ರೊ. ಶೈಲಜಾ ಹಿರೇಮಠ, ಸಂಶೋಧನಾ ವಿದ್ಯಾರ್ಥಿಯಾದ ಹುಲುಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.