ADVERTISEMENT

‘ದಿವಾಳಿಯಾದರೂ ಅಂಬಾನಿ ಆಸ್ತಿ ದುಪ್ಪಟ್ಟು’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 11:41 IST
Last Updated 23 ಅಕ್ಟೋಬರ್ 2019, 11:41 IST
ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ಎಸ್‌. ಪ್ರಭಾಕರ್‌ ಮಾತನಾಡಿದರು
ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ಎಸ್‌. ಪ್ರಭಾಕರ್‌ ಮಾತನಾಡಿದರು   

ಹೊಸಪೇಟೆ: ‘ಒಂದೆಡೆ ದೇಶದ ಆರ್ಥಿಕತೆ ದಿವಾಳಿಯತ್ತ ಸಾಗಿದರೆ, ಅಂಬಾನಿ, ಅದಾನಿಯವರ ಆಸ್ತಿ ಮೂರು ಪಟ್ಟು ಹೆಚ್ಚಳವಾಗಿದೆ’ ಎಂದು ಪತ್ರಕರ್ತ ಕೊಡಿಪಾಳ್ಯ ನರಸಿಂಹಮೂರ್ತಿ ತಿಳಿಸಿದರು.

ಗೌರಿ ಲಂಕೇಶ್‌–ನ್ಯಾಯಪಥ ಪತ್ರಿಕಾ ಬಳಗವು ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಹೊಸ ರೀತಿಯ ಮಾಧ್ಯಮದ ಸಾಧ್ಯತೆ’ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

‘ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆದರೆ, ಇನ್ನೊಂದೆಡೆ ಕೆಲವೇ ಕೆಲವು ಉದ್ಯಮಪತಿಗಳ ಆಸ್ತಿ ಏಕಾಏಕಿ ಬಹಳ ಹೆಚ್ಚಾಗಿದೆ. ಕಾರ್ಪೊರೇಟ್‌ ಪರವಾದ ನೀತಿಗಳಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

ADVERTISEMENT

‘ಸರ್ಕಾರವೇ ವ್ಯವಸ್ಥಿತವಾಗಿ ಬಿ.ಎಸ್‌.ಎನ್‌.ಎಲ್‌. ಹಾಳು ಮಾಡಿದೆ. ದೇಶದ ಪ್ರತಿಯೊಂದು ಸಣ್ಣ ಹಾಗೂ ದೊಡ್ಡ ನಗರಗಳಲ್ಲಿ ಬಿ.ಎಸ್‌.ಎನ್‌.ಎಲ್‌. ಆಸ್ತಿ ಹೊಂದಿದೆ. ಅದನ್ನು ಸುವ್ಯವಸ್ಥಿತವಾಗಿ ಬೆಳೆಸಬಹುದಿತ್ತು. ಆದರೆ, ಮುಕೇಶ್‌ ಅಂಬಾನಿಯವರ ಜಿಯೋ ಬೆಳೆಸಿದರು. ಸರ್ಕಾರಿ ಸ್ವಾಮ್ಯದ ಪ್ರತಿಯೊಂದು ಸಂಸ್ಥೆಗಳನ್ನು ಹಾಳು ಮಾಡಿ ಅವುಗಳನ್ನು ಖಾಸಗಿಯವರಿಗೆ ಲಾಭ ಮಾಡಿಕೊಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಬುದ್ಧ, ಬಸವಣ್ಣ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ವಿಚಾರಧಾರೆಗಳ ಕುರಿತು ಚರ್ಚೆಗಳು ನಡೆಯಬೇಕು. ಆದರೆ, ವೀರ ಸಾವರ್ಕರ್‌ ಕುರಿತು ಚರ್ಚೆಗಳು ನಡೆದಿವೆ. ಸಾವರ್ಕರ್‌ಗೆ ನಾಥೂರಾಮ್‌ ಗೋಡ್ಸೆ ಗುರುವಾಗಿದ್ದರು. ಇಂತಹವರ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗಳಾಗುತ್ತಿರುವುದು ದುರದೃಷ್ಟಕರ ಸಂಗತಿ. ಮಾಧ್ಯಮಗಳು ಕಾರ್ಪೊರೇಟ್‌ ಕುಳಗಳ ನಿಯಂತ್ರಣದಲ್ಲಿ ಇರುವುದರಿಂದ ಹೀಗಾಗುತ್ತಿದೆ. ಆದಕಾರಣ ಪರ್ಯಾಯ ಮಾಧ್ಯಮಗಳ ಅಗತ್ಯ ಬಹಳಷ್ಟಿದೆ’ ಎಂದು ಹೇಳಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ದುರುಗಪ್ಪ ಪೂಜಾರ ಮಾತನಾಡಿ, ‘ದೇಶದಲ್ಲಿ ನಿರುದ್ಯೋಗ, ಬಡತನ, ಹಸಿವಿನಂತಹ ಗಂಭೀರ ಸ್ವರೂಪದ ಸಮಸ್ಯೆಗಳಿವೆ. ಆದರೆ, ದೇಶಭಕ್ತಿ, ಯುದ್ದೋನ್ಮಾದದ ಹೆಸರಿನಲ್ಲಿ ಅವುಗಳನ್ನು ಮರೆ ಮಾಚಲಾಗುತ್ತಿದೆ. ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ಗುರಿ ಮಾಡಲಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ತಿಳಿಸಿದರು.

‘ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು, ಅವುಗಳ ಮೂಲಕ ಸುಳ್ಳು ಹರಡಿ ಅಧಿಕಾರಕ್ಕೆ ಬಂದಿರುವ ಕೇಂದ್ರ ಸರ್ಕಾರಕ್ಕೆ ಈಗ ಅದೇ ಮುಳುವಾಗುತ್ತಿದೆ. ಹೀಗಾಗಿಯೇ ಸಾಮಾಜಿಕ ಜಾಲತಾಣಗಳ ಬಳಕೆ ಮೇಲೆ ಮಿತಿ ಹೇರಲು ಹೊರಟಿದೆ. ಸುಳ್ಳಿನಿಂದ ಏನನ್ನೂ ಸಾಧಿಸಲು ಆಗುವುದಿಲ್ಲ. ಈಗಾಗಲೇ ಅದು ಜನರಿಗೆ ಮನವರಿಕೆಯಾಗುತ್ತಿದೆ’ ಎಂದು ಪತ್ರಕರ್ತ ಸುನಿಲ್‌ ಶಿರಸಂಗಿ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ಎಸ್‌. ಪ್ರಭಾಕರ್‌ ಮಾತನಾಡಿ, ‘ಮುಖ್ಯವಾಹಿನಿಯ ಮಾಧ್ಯಮಗಳು ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸಲು ವಿಫಲವಾದಾಗ ಪರ್ಯಾಯ ಮಾಧ್ಯಮಗಳು ಹುಟ್ಟಿಕೊಂಡಿರುವ ನಿದರ್ಶನಗಳಿವೆ. ಅದಕ್ಕೆ ಲಂಕೇಶ್‌ ಹುಟ್ಟಿ ಹಾಕಿರುವ ಪತ್ರಿಕೆಯೇ ಸಾಕ್ಷಿ. ಮೂರು ದಶಕಕ್ಕೂ ಹೆಚ್ಚು ಕಾಲ ಆ ಪತ್ರಿಕೆ ಸಮರ್ಥವಾಗಿ ತನ್ನ ಜವಾಬ್ದಾರಿ ನಿರ್ವಹಿಸಿತ್ತು’ ಎಂದು ನೆನಪಿಸಿದರು.

ಪ್ರಾಧ್ಯಾಪಕ ಪಲ್ಲವ ವೆಂಕಟೇಶ್‌, ಮೀನಾಕ್ಷಿ ಜಂಗಮನೆ, ಸೌಭಾಗ್ಯಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.