ಇ.ಡಿ
ಬಳ್ಳಾರಿ: ಜಿಲ್ಲೆಯ ಸಂಸದರು ಮತ್ತು ಮೂವರು ಶಾಸಕರ ಮನೆಗಳ ಮೇಲೆ ಬುಧವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಕೆಲ ದಾಖಲೆಪತ್ರಗಳನ್ನು ಒಯ್ದಿದ್ದಾರೆ.
ಬುಧವಾರ ಬೆಳಿಗ್ಗೆ 6ಕ್ಕೆ ದಾಳಿ ಆರಂಭಿಸಿದ್ದ ಅಧಿಕಾರಿಗಳು, ಸಂಸದ ಮತ್ತು ಶಾಸಕರನ್ನು ದಾಖಲೆಗಳನ್ನು ಮುಂದಿಟ್ಟು ವಿಚಾರಣೆ ನಡೆಸಿದರು. ಚುನಾವಣೆ ವೆಚ್ಚದ ಕುರಿತ ಚೀಟಿಯೊಂದರ ಬಗ್ಗೆ ಪ್ರಶ್ನಿಸಿದರು. ರಾತ್ರಿ 9.30ಕ್ಕೆ ಎಲ್ಲರ ಮನೆಗಳಿಂದ ನಿರ್ಗಮಿಸಿದ ಅಧಿಕಾರಿಗಳು ತಮ್ಮೊಂದಿಗೆ ಕೆಲ ದಾಖಲೆಗಳನ್ನು ಕೊಂಡೊಯ್ದರು ಎಂದು ಮೂಲಗಳು ತಿಳಿಸಿವೆ.
ಸಂಸದ ಇ. ತುಕಾರಾಂ ಅವರಿಂದ ₹ 1 ಲಕ್ಷ ವಶಕ್ಕೆ ಪಡೆದ ಬಗ್ಗೆ ಸುದ್ದಿ ಹರಿಡಿತ್ತಾದರೂ, ಇದು ಖಚಿತವಾಗಿಲ್ಲ. ‘ಇ.ಡಿ ಅಧಿಕಾರಿಗಳಿಗೆ ಸತ್ಯವನ್ನು ವಿವರಿಸಿದ್ದೇನೆ. ವಾಲ್ಮೀಕಿ ನಿಗಮದ ಹಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ದಾಳಿ ರಾಜಕೀಯ ಪ್ರೇರಿತ ಎನ್ನಲಾರೆ’ ಎಂದು ತುಕಾರಾಂ ಸುದ್ದಿಗಾರರಿಗೆ ತಿಳಿಸಿದರು.
ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ‘ನನ್ನ ಮನೆಯಿಂದ ಒಂದೇ ಒಂದು ಕಾಗದದ ಚೂರನ್ನು ಇ.ಡಿ ಅಧಿಕಾರಿಗಳು ಒಯ್ದಿಲ್ಲ. ಬೇಕಿದ್ದರೆ, ಮಹಜರ್ ವರದಿ ನಾನು ಕೊಡಬಲ್ಲೆ’ ಎಂದರು.
ಶಾಸಕ ಜೆ.ಎನ್ ಗಣೇಶ್ ಅವರು, ‘ಲೋಕಸಭಾ ಚುನಾವಣೆ, ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ನಿಮಗೆ ಏನಾದರೂ ತಿಳಿದಿದೆಯೇ ಎಂದು ಅಧಿಕಾರಿಗಳು ಕೇಳಿದರು. ಆದರೆ, ಇದರ ಬಗ್ಗೆ ನಮಗೇನೂ ಮಾಹಿತಿ ಇಲ್ಲ ಎಂದು ತಿಳಿಸಿದ್ದೇನೆ. ತನಿಖೆಗೆ ಸಹರಿಸಿದ್ದೇನೆ’ ಎಂದರು.
‘ಹನ್ನೊಂದು ವರ್ಷದಲ್ಲಿ ಕೇಂದ್ರ ಸರ್ಕಾರ ವಿರೋಧ ಪಕ್ಷದ ನಾಯಕರ ವಿರುದ್ಧ 193 ಪ್ರಕರಣ ದಾಖಲಿಸಿದೆ. ಇದರಲ್ಲಿ ಶೇ 98ರಷ್ಟು ಮಂದಿ ಕಾಂಗ್ರೆಸ್ ನಾಯಕರೇ ಆಗಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಆರೋಪಿಸಿದ್ದಾರೆ.
ಸದ್ದು ಮಾಡುತ್ತಿರುವ ಚೀಟಿ:
ಜಿಲ್ಲೆಯ ಮಾಜಿ ಶಾಸಕರೊಬ್ಬರು ಅವರಿವರಿಗೆ ನೀಡಿದ ಲಕ್ಷಾಂತರ ರೂಪಾಯಿ ಹಣದ ಲೆಕ್ಕವಿರುವ ಚೀಟಿಯೊಂದು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
2024ರ ಫೆಬ್ರುವರಿ 10ರಂದು ಮಾಜಿ ಶಾಸಕರು ಸಹಿ ಮಾಡಿರುವುದು ಈ ಚೀಟಿಯಲ್ಲಿದೆ. ಕನಿಷ್ಠ ₹2 ಲಕ್ಷದಿಂದ ಗರಿಷ್ಠ ₹60 ಲಕ್ಷದ ವರೆಗೆ ಹಣ ನೀಡಿರುವ ಲೆಕ್ಕಗಳು ಅದರಲ್ಲಿವೆ. ಈ ವಿಷಯವಾಗಿ ಜಿಲ್ಲೆಯ ಶಾಸಕರನ್ನು ಇ.ಡಿ ಅಧಿಕಾರಿಗಳು ವಿಚಾರಿಸಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನೂ ಯಾರೂ ಖಚಿತಪಡಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.