ADVERTISEMENT

ಕೋಳಿ ಮೊಟ್ಟೆ ಸಾಕಾಣಿಕೆದಾರರ ಪ್ರತಿಭಟನೆ

ನಿರ್ವಹಣೆ ವೆಚ್ಚ, ಜಿ.ಎಸ್‌.ಟಿ. ಹೊರೆಯಿಂದ ನಷ್ಟದಲ್ಲಿ ಮೊಟ್ಟೆ ಉದ್ಯಮ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 9:58 IST
Last Updated 23 ಆಗಸ್ಟ್ 2019, 9:58 IST
ಕರ್ನಾಟಕ ಮೊಟ್ಟೆ, ಕೋಳಿ ಸಾಕಾಣಿಕೆದಾರರ ಸಂಘದವರು ಗುರುವಾರ ಸಂಜೆ ಹೊಸಪೇಟೆಯಲ್ಲಿನ  ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‍.ಇ.ಸಿ.ಸಿ.) ವಲಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಕರ್ನಾಟಕ ಮೊಟ್ಟೆ, ಕೋಳಿ ಸಾಕಾಣಿಕೆದಾರರ ಸಂಘದವರು ಗುರುವಾರ ಸಂಜೆ ಹೊಸಪೇಟೆಯಲ್ಲಿನ  ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‍.ಇ.ಸಿ.ಸಿ.) ವಲಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ: ಸೂಕ್ತ ರೀತಿಯಲ್ಲಿ ಕೋಳಿ ಮೊಟ್ಟೆ ದರ ನಿಗದಿಪಡಿಸಲುಆಗ್ರಹಿಸಿ ಕರ್ನಾಟಕ ಮೊಟ್ಟೆ, ಕೋಳಿ ಸಾಕಾಣಿಕೆದಾರರ ಸಂಘದವರು ಗುರುವಾರ ಸಂಜೆ ನಗರದ ಬಸವೇಶ್ವರ ಬಡಾವಣೆಯ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‍.ಇ.ಸಿ.ಸಿ.) ವಲಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಳಿಕ ಎನ್‍.ಇ.ಸಿ.ಸಿ. ವಲಯ ಅಧಿಕಾರಿ ಎಂ.ಎಸ್.ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು. ‘ಸದ್ಯ ಒಂದು ಮೊಟ್ಟೆಗೆ ₹3 ಇದೆ. ಇದರಿಂದಾಗಿ ಒಂದು ಮೊಟ್ಟೆಗೆ ₹1.75 ನಷ್ಟವಾಗುತ್ತಿದೆ. ಮಕ್ಕೆಜೋಳ, ಸೋಯಾ ಹಿಂಡಿ ದರ ಏರಿಕೆ ಆಗಿದೆ. ಆದರೆ, ಎನ್‍.ಇ.ಸಿ.ಸಿ. ದರ ನಿಗದಿ ಮಾಡುವಲ್ಲಿ ವಿಫಲವಾಗಿದೆ. ಈ ಕುರಿತು ಹೇಳಿದರೆ ಅಧಿಕಾರಿಗಳು ತಲೆಗೆ ಹಾಕಿಕೊಳ್ಳುತ್ತಿಲ್ಲ. ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ’ ಎಂದು ಸಂಘದ ಅಧ್ಯಕ್ಷ ಟಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

‘ಸತತ ಮೂರು ವರ್ಷಗಳಿಂದ ಕೋಳಿ ಪೌಲ್ಟ್ರಿ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಈ ವಲಯಕ್ಕೆ 1.75 ಲಕ್ಷ ಕೋಳಿಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ದಿನಕ್ಕೆ 1.58 ಲಕ್ಷ ಮೊಟ್ಟೆಗಳು ಉತ್ಪತ್ತಿ ಮಾಡಲಾಗುತ್ತಿದೆ. ಆದರೆ, ನಷ್ಟದಿಂದ ಸಂಕಷ್ಟ ಎದುರಿಸುವಂತಾಗಿದೆ’ ಎಂದು ಗೋಳು ತೋಡಿಕೊಂಡರು.

ADVERTISEMENT

‘ಕೋಳಿ ಪೌಲ್ಟ್ರಿ ನೆಚ್ಚಿಕೊಂಡು ಸುಮಾರು 50 ಸಾವಿರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಈಗ ನಷ್ಟ ಆಗುತ್ತಿರುವುದರಿಂದ ಕುಟುಂಬಗಳು ಅಭದ್ರತೆಗೆ ಸಿಲುಕಿವೆ. ಮಾರುಕಟ್ಟೆಯಲ್ಲಿ ಆಗುವ ಬದಲಾವಣೆ, ಅದರ ನಿರ್ವಹಣೆ ವೆಚ್ಚ ಸರಿದೂಗುವಂತೆ ಕಾಲ ಕಾಲಕ್ಕೆ ಮೊಟ್ಟೆ ದರವನ್ನು ನಿಗದಿ ಮಾಡಬೇಕು. ಕೋಳಿ ಪೌಲ್ಟ್ರಿಯಲ್ಲಿ ಬಳಕೆ ಮಾಡುವ ಆಹಾರ ಸಾಮಾಗ್ರಿಗಳಿಗೆ ವಿಧಿಸಿರುವ ಜಿ.ಎಸ್‍.ಟಿ. ತಗೆದು ಹಾಕಬೇಕು. ಮೊಟ್ಟೆಗೆ ಬೆಂಬಲ ಬೆಲೆ ನೀಡಬೇಕು. ಪ್ರತಿ ಮೊಟ್ಟೆಗೆ ₹5.50 ದರ ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷ ಎಸ್.ತ್ರಿನಾಥ ರೆಡ್ಡಿ, ಮುಖಂಡರಾದ ಎಂ.ಕೃಷ್ಣರೆಡ್ಡಿ, ಆರ್.ಜಿ.ಹಾದಿಮನಿ, ಟಿ.ನಾಗರಾಜ ರೆಡ್ಡಿ, ಬಿ.ಬ್ರಹ್ಮಾನಂದ ರೆಡ್ಡಿ, ವಿಜಯಕುಮಾರ, ಪಿ.ವೆಂಕಟೇಶ ರೆಡ್ಡಿ, ಜಿ.ಶ್ರೀನಿವಾಸ, ಆರ್.ವೆಂಕಟೇಶ, ಕೆ.ಟಿ.ಕೇಶವರೆಡ್ಡಿ, ಎಂ.ರಮೇಶ ಸೇರಿದಂತೆ ಬಳ್ಳಾರಿ, ರಾಯಚೂರು, ಕೊಪ್ಪಳ, ದಾವಣಗೆರೆ, ಹುಬ್ಬಳ್ಳಿ, ಬಾಗಲಕೋಟೆ, ಚಿತ್ರದುರ್ಗ, ಮೈಸೂರು, ಬೆಂಗಳೂರಿನ ಕೋಳಿ ಪೌಲ್ಟ್ರಿ ಮಾಲೀಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.