ಹೂವಿನಹಡಗಲಿ: ಪಟ್ಟಣದಲ್ಲಿ ನಕಲಿ ಬೆಣ್ಣೆ, ತುಪ್ಪ ಮಾರಾಟ ಮಾಡುತ್ತಿದ್ದ ತಂಡದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ದಾಸ್ತಾನು ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿ ತಾಲ್ಲೂಕಿನ ಬೆಣಕಲ್ ಗ್ರಾಮದ ಶಿವಲಿಂಗಪ್ಪ ಯರಗುಡಿ, ತಿಪ್ಪೇಸ್ವಾಮಿ, ಗೋವಿಂದ, ಶಂಕರ್ ಎಂಬುವವರು ಪಟ್ಟಣದ ಮುಖ್ಯ ರಸ್ತೆಯ ಗಾಣಿಗೇರ ಓಣಿಯಲ್ಲಿ ಮೂರು ದಿನಗಳ ಹಿಂದೆ ಮನೆ ಬಾಡಿಗೆ ಪಡೆದು ಈ ದಂಧೆ ಪ್ರಾರಂಭಿಸಿದ್ದರು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಗೋವಿಂದ, ಶಂಕರ್ ಪರಾರಿಯಾಗಿದ್ದು, ನಕಲಿ ಬೆಣ್ಣೆಯ 40 ಪ್ಯಾಕೆಟ್, 5 ತುಪ್ಪದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕಚ್ಚಾ ವನಸ್ಪತಿ (ಡಾಲ್ಡಾ)ಯೊಂದಿಗೆ ಗೋಲ್ಡ್ ವಿನ್ನರ್ ವನಸ್ಪತಿ ಮಿಶ್ರಣ ಮಾಡಿ, ಅದನ್ನೇ ಬೆಣ್ಣೆ ಎಂದು ಮಾರಾಟ ಮಾಡಲಾಗುತಿತ್ತು. ಇದೇ ಮಿಶ್ರಣವನ್ನು ಕರಗಿಸಿ ತುಪ್ಪ ಎಂದು ಬಾಟಲಿಗಳಲ್ಲಿ ಮಾರಾಟಕ್ಕೆ ಕಳಿಸಲಾಗುತಿತ್ತು.
ಪಟ್ಟಣ ಹಾಗೂ ನೆರೆಯ ತಾಲ್ಲೂಕುಗಳ ಢಾಬಾ, ಹೋಟೆಲ್‌ಗಳಿಗೆ ಈ ನಕಲಿ ಉತ್ಪನ್ನ ಹೆಚ್ಚು ಮಾರಾಟವಾಗಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಗೊತ್ತಾಗಿದೆ. ಈ ಜಾಲ ರಾಜ್ಯದ ನಾನಾ ಭಾಗಗಳಲ್ಲೂ ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದೆ.
‘ಬೆಂಗಳೂರಿನಿಂದ ಖಾಸಗಿ ಬಸ್‌ನಲ್ಲಿ 15 ಕೆಜಿ ಕಚ್ಚಾ ವನಸ್ಪತಿಯ ಡಬ್ಬಾಗಳನ್ನು ತರಿಸಿಕೊಂಡು, ಅದಕ್ಕೆ ಗೋಲ್ಡ್ ವಿನ್ನರ್ ವನಸ್ಪತಿ ಮಿಶ್ರಣ ಮಾಡುತ್ತಿದ್ದೆವು. ಈ ಮಿಶ್ರಣದ ಬೆಣ್ಣೆಯನ್ನು ಪ್ರತಿ ಕೆಜಿಗೆ ₹ 500, ತುಪ್ಪವನ್ನು ₹350 ದರದಲ್ಲಿ ಮಾರಾಟ ಮಾಡಿದ್ದೇವೆ. ಈ ಭಾಗದ ಢಾಬಾಗಳಲ್ಲಿ ಬೇಡಿಕೆ ಇರುವುದರಿಂದ ಮಾರಾಟಕ್ಕೆ ಇಲ್ಲಿಗೆ ಬಂದಿದ್ದೇವೆ’ ಎಂದು ಶಿವಲಿಂಗಪ್ಪ ಅಧಿಕಾರಿಗಳೆದುರು ಒಪ್ಪಿಕೊಂಡಿದ್ದಾನೆ.
ವಿಜಯನಗರ ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿ ಉದಯ ಮುದ್ದೇಬಿಹಾಳ ನೇತೃತ್ವದಲ್ಲಿ ಪುರಸಭೆ ಪರಿಸರ ಎಂಜಿನಿಯರ್ ಅಮರೇಶ, ಆರೋಗ್ಯ ನಿರೀಕ್ಷಕ ಎಂ.ಸೋಮಶೇಖರ್ ದಾಳಿ ನಡೆಸಿದ್ದಾರೆ.
‘ಸ್ಥಳದಲ್ಲಿದ್ದ ಉತ್ಪನ್ನ ಮೇಲ್ನೋಟಕ್ಕೆ ನಕಲಿ ಬೆಣ್ಣೆ, ತುಪ್ಪ ಎಂದು ಗೊತ್ತಾಗಿದೆ. ಮಾದರಿಯನ್ನು ಸಂಗ್ರಹಿಸಿ ಕಲಬುರಗಿ ವಿಭಾಗೀಯ ಮುಖ್ಯ ಆಹಾರ ಪ್ರಯೋಗಾಲಯಕ್ಕೆ ಕಳಿಸುತ್ತಿದ್ದು, ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುವುದು. ನಕಲಿ ಉತ್ಪನ್ನ ಮಾರಾಟ ಮಾಡಿದದವರ ವೈಯಕ್ತಿಕ ಗುರುತಿನ ದಾಖಲೆ ವಶಕ್ಕೆ ಪಡೆದಿದ್ದೇವೆ ಎಂದು ಆಹಾರ ಸುರಕ್ಷತಾ ಅಧಿಕಾರಿ ಉದಯ ಮುದ್ದೇಬಿಹಾಳ ತಿಳಿಸಿದ್ದಾರೆ.
ಬಾಡಿಗೆ ಮನೆಯಲ್ಲಿ ದಂಧೆ ಆರಂಭಿಸಿದ್ದ ಆರೋಪಿಗಳ ನಕಲಿ ಬೆಣ್ಣೆಯ 40 ಪ್ಯಾಕೆಟ್, 5 ತುಪ್ಪದ ಬಾಟಲಿ ರಾಜ್ಯದ ನಾನಾ ಭಾಗಗಳಲ್ಲಿ ಜಾಲ ಸಕ್ರಿಯ: ಶಂಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.