ADVERTISEMENT

ಬಳ್ಳಾರಿ | ಒಣ ಮೆಣಸಿನಕಾಯಿ ಮಾರಾಟ: ನೋಂದಣಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 5:30 IST
Last Updated 19 ಜುಲೈ 2025, 5:30 IST

ಬಳ್ಳಾರಿ: ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿ ಒಣ ಮೆಣಸಿನಕಾಯಿ ಮಾರಾಟ ಮಾಡಲು ಜಿಲ್ಲೆಯ ರೈತರಿಂದ ನೋಂದಣಿಗೆ ಆಹ್ವಾನಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

2024-25 ನೇ ಸಾಲಿನಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿ ಒಣ ಮೆಣಸಿನಕಾಯಿ ಮಾರುಕಟ್ಟೆ ಮಧ್ಯಪ್ರವೇಶ ದರ ₹10,589.20 (ಪ್ರತಿ ಕ್ವಿಂಟಾಲ್) ನಿಗದಿಪಡಿಸಿದೆ. ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಕಾರ್ಯಾಲಯವು ನೋಂದಣಿ ಸ್ಥಳವಾಗಿದೆ.

ರೈತರು ಒಣ ಮೆಣಸಿನಕಾಯಿ ಉತ್ಪನ್ನವನ್ನು ಕಡ್ಡಾಯವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇ-ಟೆಂಡರ್ ಮೂಲಕ ಮಾರಾಟ ಮಾಡಿದಾಗ ಮಾತ್ರ ಯೋಜನೆ ಅನ್ವಯವಾಗಲಿದೆ. ನೋಂದಣಿ ಮಾಡಿಕೊಳ್ಳಲು 15 ದಿನಗಳ ವರೆಗೆ ಕಾಲಾವಕಾಶ ಇದೆ. 

ADVERTISEMENT

ಇ-ಆಡಳಿತ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ನೀಡಿರುವ ವಿವರಗಳನ್ನು ಭೂಮಿ, ಯುಐಡಿಎಐ ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ಹೊಂದಾಣಿಕೆ ಮಾಡಿ, ಅರ್ಹ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಯುಎಂಪಿ ತಂತ್ರಾಂಶದ ಮೂಲಕ ಇ-ಟೆಂಡರ್ ಮೂಲಕ ಮಾರಾಟ ಪ್ರಕ್ರಿಯೆ ನಡೆಯಲಿದೆ. ಈ ಯೋಜನೆಯಡಿ ಪ್ರತಿ ಎಕರೆಗೆ 15 ಕ್ವಿಂಟಾಲ್ ಇಳುವರಿಯಂತೆ ಪ್ರತಿ ರೈತರಿಂದ ಗರಿಷ್ಠ 30 ಕ್ವಿಂಟಾಲ್‌ಗೆ ಮಿತಿಗೊಳಿಸಲಾಗಿದೆ. 

ಬಳ್ಳಾರಿ ಜಿಲ್ಲೆಯಲ್ಲಿ ಯಾವ ಮಾರುಕಟ್ಟೆಯಲ್ಲಿಯೂ ಒಣ ಮೆಣಸಿನಕಾಯಿ ಹುಟ್ಟುವಳಿಗೆ ಇ-ಟೆಂಡರ್ ಪದ್ಧತಿ ಇಲ್ಲ. ಹೀಗಾಗಿ ಜಿಲ್ಲೆಯ ರೈತರು ಎನ್‌ಇಎಂಎಲ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು, ಇ-ಟೆಂಡರ್ ಪದ್ಧತಿ ಜಾರಿಯಲ್ಲಿರುವ ಬೇರೆ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಒಣ ಮೆಣಸಿನಕಾಯಿ ಮಾರಾಟ ಮಾಡಬಹುದು. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿದ ರಸೀದಿ ಪಡೆದಿದ್ದಲ್ಲಿ ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.

ಹಾಗಾಗಿ ರೈತರು ಫ್ರೂಟ್ಸ್ ಐಡಿ, ಆಧಾರ್ ಕಾರ್ಡ್, ಪಹಣಿಯೊಂದಿಗೆ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡು ಒಣ ಮೆಣಸಿನಕಾಯಿ ಮಾರಾಟ ಮಾಡಿ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ದೂ.08392-250435ಗೆ ಸಂಪರ್ಕಿಸಬಹುದು ಎಂದು ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.