ADVERTISEMENT

ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ಆರೋಪ: ಶಿಕ್ಷಕನ ವಿರುದ್ಧ ಎಫ್‌ಐಆರ್

ಬಿಇಒ ಪಕ್ಷಪಾತ ಧೋರಣೆಗೆ ಶಿಕ್ಷಕರ ವಲಯದಲ್ಲಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 14:24 IST
Last Updated 2 ಏಪ್ರಿಲ್ 2019, 14:24 IST

ಹೂವಿನಹಡಗಲಿ: ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಾಗರಾಜ ಶಿಕ್ಷಕರೊಬ್ಬರ ಮೇಲೆ ಸೋಮವಾರ ರಾತ್ರಿ ಎಫ್‌.ಐ.ಆರ್. ದಾಖಲಿಸಿದ್ದಾರೆ.

ಅಡವಿಮಲ್ಲನಕೆರೆ ತಾಂಡಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿ.ಬಿ.ಜಗದೀಶ್ ವಿರುದ್ಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಶಿಕ್ಷಕ ಜಗದೀಶ ಈ ಹಿಂದೆ ನ್ಯಾಯಾಲಯದಲ್ಲಿ ಸರ್ಕಾರದ ವಿರುದ್ಧ ಸುಳ್ಳು ಸಾಕ್ಷಿ ಹೇಳಿದ ಆರೋಪದಲ್ಲಿ ಅಮಾನತುಗೊಂಡಿದ್ದರು. ಅದನ್ನು ಈಗ ಸೇವಾ ಪುಸ್ತಕದಲ್ಲಿ ನಮೂದು ಮಾಡುತ್ತಿರುವ ವೇಳೆ ಮದ್ಯ ಸೇವಿಸಿ ಬಂದು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಸೇವಾ ಪುಸ್ತಕದಲ್ಲಿ ನಮೂದು ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ನನಗೆ ಪ್ರಾಣ ಬೆದರಿಕೆ ಹಾಕಿದ್ದಾರೆ’ ಎಂದು ಬಿ.ಇ.ಒ. ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ನಾನೊಬ್ಬ ಮೇಲಾಧಿಕಾರಿ ಎಂಬುದನ್ನು ಮರೆತು ಶಿಕ್ಷಕ ಜಗದೀಶ ಅವಾಚ್ಯವಾಗಿ ನಿಂದಿಸಿ, ಹದ್ದು ಮೀರಿ ವರ್ತಿಸಿದರು. ಆದ್ದರಿಂದ ಅವರ ವಿರುದ್ಧ ಕ್ರಮ ಜರುಗಿಸುವಂತೆ ದೂರು ನೀಡಿರುವೆ’ ಎಂದು ಬಿ.ಇ.ಒ. ನಾಗರಾಜ ಹೇಳಿದರು.

ಅಧಿಕಾರಿಯ ಪಕ್ಷಪಾತ ಧೋರಣೆ:

ಕಳೆದ ತಿಂಗಳು ತಾಲ್ಲೂಕಿನ ತಮಲಾಪುರ ಶಾಲೆಗೆ ಬಿ.ಇ.ಒ. ಅನಿರೀಕ್ಷಿತ ಭೇಟಿ ನೀಡಿದ್ದ ಸಂದಭರ್ದಲ್ಲಿ ತಮ್ಮನ್ನು ಅವಾಚ್ಯವಾಗಿ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಶಿಕ್ಷಕ ಎಲ್.ವಿ. ಗುಡ್ಯಾ ನಾಯ್ಕ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದರು.

ನಂತರ ಒಂದೇ ವಾರದಲ್ಲಿ ಅವರನ್ನು ಮರು ನಿಯೋಜನೆ ಮಾಡಿದ್ದರಿಂದ ಶಿಕ್ಷಕರ ವಲಯದಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಶಿಕ್ಷಕ ಗುಡ್ಯಾನಾಯ್ಕ ಪ್ರಾಣ ಬೆದರಿಕೆ ಹಾಕಿದ್ದರೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸದ ಅಧಿಕಾರಿ, ಈಗ ಶಿಕ್ಷಕ ಜಗದೀಶ್ ವಿರುದ್ಧ ದೂರು ದಾಖಲಿಸಿ ಪಕ್ಷಪಾತ ಧೋರಣೆ ನಡೆಸುತ್ತಿದ್ದಾರೆ ಎಂಬ ಆರೋಪ ಶಿಕ್ಷಕರ ವಲಯದಲ್ಲಿ ಕೇಳಿ ಬರುತ್ತಿದೆ.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ಅವರನ್ನು ಪ್ರಶ್ನಿಸಿದಾಗ ‘ಶಿಕ್ಷಕರ ಮೇಲೆ ಕ್ರಮ ಜರುಗಿಸುವುದು ನನ್ನ ವಿವೇಚನೆಗೆ ಬಿಟ್ಟದ್ದು. ನನ್ನ ಕರ್ತವ್ಯವನ್ನು ಯಾರೂ ಪ್ರಶ್ನಿಸುವಂತಿಲ್ಲ’ ಎಂದು ಹೇಳಿದರು.

‘ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೆಲವು ಶಿಕ್ಷಕರನ್ನು ಗುರಿಯಾಗಿಸಿ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡುತ್ತಾರೆ. ತಪ್ಪುಗಳನ್ನು ಹುಡುಕಿ ಶಿಕ್ಷೆಗೆ ಗುರಿಪಡಿಸುತ್ತಿದ್ದಾರೆ. ಕೆಲವು ಶಿಕ್ಷಕರು ಎಂಥದ್ದೇ ತಪ್ಪು ಮಾಡಿದರೂ ವಿನಾಯಿತಿ ನೀಡುತ್ತಾರೆ. ಕೆಲವರ ಮೇಲಷ್ಟೇ ಕ್ರಮ ಜರುಗಿಸುತ್ತಿದ್ದಾರೆ. ಇದರಿಂದ ಇಲ್ಲಿ ಕೆಲಸ ಮಾಡಲು ಭಯವಾಗುತ್ತಿದೆ’ ಎಂದು ನೊಂದು ಶಿಕ್ಷಕರು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.