ಕೂಡ್ಲಿಗಿ: ಪಟ್ಟಣದ ಉಪನ್ಯಾಸಕ ನಾಗರಾಜ ಕೊಟ್ರಪ್ಪಗಳ ಅವರ ಪುತ್ರಿ ಕೆ.ಎನ್.ಹಿಮಜ ಅವರು ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಪ್ರಸ್ತುತ ಮೂಡುಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮದಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಕೆ.ಎನ್.ಹಿಮಜ, ಜೂನ್ 7ರಂದು ವಿಯೆಟ್ನಾಂ ದೇಶದ ಹೊಚಿಮಿನ್ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಹಿಮಜ, ಟ್ರಡಿಷನಲ್ ಯೋಗಾಸನದ ಜೂನಿಯರ್ ಗರ್ಲ್ಸ್ ವಿಭಾಗದ ಸಾಂಪ್ರದಾಯಿಕ ಯೋಗಾಸನದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಸ್ಫರ್ಧೆಯಲ್ಲಿ 19 ದೇಶದಿಂದ ಸುಮಾರು 400ಕ್ಕೂ ಹೆಚ್ಚು ಯೋಗ ಪಟುಗಳು ಸ್ಪರ್ಧಿಸಿದ್ದರು. ಕೆ.ಎನ್. ಹಿಮಜ ಅವರ ಕಳೆದ 3 ವರ್ಷಗಳ ಸಾಧನೆ ಪರಿಗಣಿಸಿ ಅಂತಾರಾಷ್ಟ್ರೀಯ ಜಾಗತಿಕ ಯೋಗ ಶ್ರೇಷ್ಠ ಪ್ರಶಸ್ತಿ 2025 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಟ್ಟಣದ ಶ್ರೀ ಶಾರದ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ಹಿಮಜ, ಚಿಕ್ಕ ವಯಸ್ಸಿನಿಂದಲೇ ಅಜ್ಜಿ ಗೌರಮ್ಮ ಬ್ಯಾಳಿ ಇವರ ಪ್ರೇರಣೆಯಿಂದ ಯೋಗಾಭ್ಯಾಸ ಕೈಗೊಂಡು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಹಲವು ಕಡೆ ಯೋಗ ಪ್ರದರ್ಶನ ನೀಡಿ ಬಹುಮಾನ ಪಡೆದು, ಪ್ರಾಣಾಯಾಮ, ಯೋಗ ಅಭ್ಯಾಸ ಮಾಡಿದ್ದು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದಾರೆ.
ಯೋಗ ತರಬೇತಿದಾರರಾದ ನಿರ್ಮಲ ಸುಭಾಷ್ ಕೊಡ್ಲಿಕರ್, ಪ್ರೇಮ್ ಕುಮಾರ್ ಮುದ್ದಿ ಅವರ ತರಬೇತಿಯಲ್ಲಿ ಸಾಧನೆ ಮಾಡಿದ ಹಿಮಜ ಅವರಿಗೆ ಶ್ರೀ ಶಾರದಾ ಪ್ರಾಥಮಿಕ ಶಾಲೆಯ ಸಿಬ್ಬಂದಿ, ಅಳ್ವಾಸ್ ಶಿಕ್ಷಣ ಸಂಸ್ಥೆ ಸಿಬ್ಬಂದಿ ತಂದೆ ನಾಗರಾಜ ಕೊಟ್ರಪ್ಪಗೋಳ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.