ADVERTISEMENT

ಮುಚ್ಚಿದ ಬಯಲಿನಲ್ಲಿ ತೆರೆದ ನಗು!

ಕೇಂದ್ರ ಕಾರಾಗೃಹದಲ್ಲಿ ಸಂಗೀತ-ಹಾಸ್ಯಸುಧೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 13:33 IST
Last Updated 16 ಡಿಸೆಂಬರ್ 2018, 13:33 IST
ಸಂಗೀತ-ಹಾಸ್ಯಸುಧೆಯಲ್ಲಿ ಮಿಂದ ಕೇಂದ್ರ ಕಾರಾಗೃಹದ ಕೈದಿಗಳ ನಗೆಯ ಬಗೆ..
ಸಂಗೀತ-ಹಾಸ್ಯಸುಧೆಯಲ್ಲಿ ಮಿಂದ ಕೇಂದ್ರ ಕಾರಾಗೃಹದ ಕೈದಿಗಳ ನಗೆಯ ಬಗೆ..   

ಬಳ್ಳಾರಿ: ಮುಚ್ಚಿದ ಬಯಲಾದ ನಗರದ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ನಗು ತೆರೆದುಕೊಂಡಿತ್ತು. ಕೈದಿಗಳು ಮನಸಾರೆ ನಗುತ್ತಿದ್ದರು. ಅಲ್ಲಿ ಜೋಕುಗಳಿದ್ದವು. ನಗು ತರಿಸುವ ಹಾಡುಗಳಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಎಲ್ಲರೂ ಒಟ್ಟಾಗಿ ನಗಲು ಲಘು–ಬಗೆಯ ಅವಕಾಶ ದೊರಕಿತ್ತು.

ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದಸಂಗೀತ-ಹಾಸ್ಯ ಸುಧೆ ಕಾರ್ಯಕ್ರಮದಲ್ಲಿ ಕಲಾವಿದರು ಒಂದೂವರೆ ಗಂಟೆಗಳ ಕಾಲ ಕೈದಿಗಳ ನೋವನ್ನು ಮರೆಸಿದರು. ಎಲ್ಲ ಮರೆತು ನಗುವಂತೆ ಮಾತನಾಡಿದರು. ಹಾಡಿದರು. ನಗುವಿನ ಹೊಸ ಲೋಕವೊಂದನ್ನು ಅನಾವರಣ ಮಾಡಿದ್ದರು. ಬಯಲಿನಲ್ಲಿ ಬರೀ ನಗುವಿತ್ತು. ನಕ್ಕು ನಕ್ಕು ಕೆಲವರ ಕಣ್ಣಲ್ಲಿ ನೀರು ಬಂತು. ಕೆಲವರ ಎದೆತುಂಬಿ ಬಂತು..

ಶಿಕ್ಷಕ ಹಾಗೂ ಹಾಸ್ಯ ಕಲಾವಿದ ಎ.ಎರ್ರಿಸ್ವಾಮಿ ಪ್ರಸ್ತುತಪಡಿಸಿದ ಹಾಸ್ಯ ಪ್ರಸಂಗಗಳಿಗೆ ಕೈದಿಗಳು ಮನಸೋತು. ಮೈಮರೆತು ನಕ್ಕಿದ್ದೇ ನಕ್ಕಿದ್ದು. ಹಾಸ್ಯದ ನಡುವೆ ಕನ್ನಡ ಸಾಹಿತ್ಯದ ಗಟ್ಟಿತನ ಹಾಗೂ ಡಿ.ವಿ.ಜಿ ಸೇರಿದಂತೆ ಅನೇಕ ಸಾಹಿತಿಗಳ ಕಾವ್ಯಗಳ ಸಾಲುಗಳೂ ನಗೆಯ ಹಾದಿಯಲ್ಲಿ ತೇಲಿ ಹೋದವು.

ADVERTISEMENT

ಗಾಯಕರಾದ ಕೆ.ವಸಂತಕುಮಾರ್, ರಾಘವೇಂದ್ರ ಗುಡದೂರು ಹಾಗೂ ಪರಶುರಾಮ ಹಂದ್ಯಾಳು ಕನ್ನಡದ ಅನೇಕ ಭಾವಗೀತೆ, ತತ್ವಪದಗಳನ್ನು ಹಾಡಿ ಮನೋಲ್ಲಾಸದ ಜೊತೆಗೆ ಗಂಭೀರ ಚಿಂತನೆಗೂ ದಾರಿ ಮಾಡಿದರು.

ಕಾರಾಗೃಹದ ಅಧೀಕ್ಷಕ ಡಾ.ಪಿ.ರಂಗನಾಥಕಾರ್ಯಕ್ರಮಕ್ಕೆ ಚಾಲನೆ ನೀಡಿ ‘ಜೈಲುಗಳು ಮುಕ್ತವಾಗಿದ್ದರೆ ಮಾತ್ರ ಬಂಧಿಗಳ ಮನಸ್ಸು ಮುಕ್ತವಾಗಲು ಸಾಧ್ಯ ಹೀಗಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೈದಿಗಳಖಿನ್ನತೆಯನ್ನು ದೂರ ಮಾಡಲು ಸಾಹಿತ್ಯ, ಸಂಗೀತ ಹಾಗೂ ನಾಟಕಗಳನ್ನು ಆಯೋಜಿಸಲಾಗುತ್ತಿದೆ’ ಎಂದರು.

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ,ಜಿಲ್ಲಾ ಪಂಚಾಯಿತಿಯ ಜಿಲ್ಲಾ ಸೂಚನಾವಿಜ್ಞಾನಾಧಿಕಾರಿ ಶಿವಪ್ರಕಾಶ್ ವಸ್ತ್ರದ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸೊಂತ ಗಿರಿಧರ್ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.