ADVERTISEMENT

ಹಗರಿಬೊಮ್ಮನಹಳ್ಳಿ | ಕುಡಿಯುವ ನೀರಿನ ಸೌಲಭ್ಯ ಮರೀಚಿಕೆ

ಅಂಕಸಮುದ್ರ ಪಕ್ಷಿಧಾಮದಲ್ಲಿ ದೂಳು ತಿನ್ನುತ್ತಿರುವ ಯಂತ್ರಗಳು

ಸಿ.ಶಿವಾನಂದ
Published 18 ಮೇ 2025, 6:16 IST
Last Updated 18 ಮೇ 2025, 6:16 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮದ ವೀಕ್ಷಣ ಗೋಪುರದ ಕೊಠಡಿಯಲ್ಲಿ ದೂಳು ತಿನ್ನುತ್ತಿರುವ ಶುದ್ಧ ನೀರಿನ ಘಟಕದ ಯಂತ್ರಗಳು ಮತ್ತು ಸಲಕರಣೆಗಳು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮದ ವೀಕ್ಷಣ ಗೋಪುರದ ಕೊಠಡಿಯಲ್ಲಿ ದೂಳು ತಿನ್ನುತ್ತಿರುವ ಶುದ್ಧ ನೀರಿನ ಘಟಕದ ಯಂತ್ರಗಳು ಮತ್ತು ಸಲಕರಣೆಗಳು   

ಹಗರಿಬೊಮ್ಮನಹಳ್ಳಿ: ರಾಮ್‍ಸಾರ್ ತಾಣ ಖ್ಯಾತಿಯ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮಕ್ಕೆ ಪಕ್ಷಿಗಳನ್ನು ವೀಕ್ಷಿಸಲು ಬರುವ ಪಕ್ಷಿ ಪ್ರಿಯ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಮರೀಚಿಕೆಯಾಗಿದೆ.

ಅರಣ್ಯ ಮತ್ತು ಜೆಸ್ಕಾಂ ಇಲಾಖೆಯ ಅಧಿಕಾರಿಗಳ ಪರಸ್ಪರ ಸಂಪರ್ಕದ ಕೊರತೆಯಿಂದಾಗಿ ಸಾವಿರಾರು ರೂಪಾಯಿ ಬೆಲೆಬಾಳುವ ಶುದ್ಧ ನೀರಿನ ಘಟಕದ ಯಂತ್ರ ಮತ್ತು ಸಲಕರಣೆಗಳು ಪಕ್ಷಿ ವೀಕ್ಷಣಾ ಗೋಪುರದ ಕೊಠಡಿಯ ಮೂಲೆ ಸೇರಿ ದೂಳು ಹಿಡಿದಿವೆ. ಯಂತ್ರಗಳನ್ನು ಖರೀದಿಸಿ ಈಗಾಗಲೇ ಆರು ತಿಂಗಳ ಮೇಲಾಗಿದೆ.

ಬೇಸಿಗೆ ಕಾಲದಲ್ಲಿಯೂ ಪಕ್ಷಿಧಾಮದಲ್ಲಿ ಅಂದಾಜು 100 ಪ್ರಭೇದಗಳ ಪಕ್ಷಿಗಳು ಬದುಕು ಕಂಡುಕೊಂಡಿವೆ, ಸಂತಾನೋತ್ಪತ್ತಿ ನಡೆಸುತ್ತವೆ.

ADVERTISEMENT

ಮರಿಗಳೊಂದಿಗೆ ಚಿಲಿಪಿಲಿ ಆಡುತ್ತಿರುವ ಸಾವಿರಾರು ಸಂಖ್ಯೆಯ ಬಣ್ಣದ ಕೊಕ್ಕರೆ (ಪೇಂಟೆಡ್ ಸ್ಟಾರ್ಕ್), ಬಾಯ್ಕಳಕ (ಓಪನ್ ಬಿಲ್ ಸ್ಟಾರ್ಕ್), ಗ್ಲೋಸಿ ಐಬೀಸ್ (ಮಿಂಚು ಕೆಂಬರಲು), ನೀರುಕಾಗೆ (ಕಾರ್ಮೋರೆಂಟ್) ಸೇರಿದಂತೆ ಹಲವು ಪಕ್ಷಿಗಳ ಕಲರವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆ ಅಲ್ಲದೆ ಬೇರೆ ಕಡೆಗಳಿಂದ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಪಕ್ಷಿಧಾಮದಲ್ಲಿ ಮೊದಲಬಾರಿಗೆ ಉತ್ತರಭಾರತದಿಂದ ವಲಸೆ ಬಂದಿರುವ ದೊಡ್ಡಗಾತ್ರದ ಶಿಳ್ಳೆಬಾತು(ಪುಲ್ವೆಸ್ ವಿಸಿಲಿಂಗ್ ಡಕ್) 25ಕ್ಕೂ ಹೆಚ್ಚು ಸಂಖ್ಯೆಯಲ್ಲಿ ವಿರಮಿಸತೊಡಗಿವೆ.

ಆದರೆ ಇಲ್ಲಿ ಪ್ರವಾಸಿಗರಿಗೆ ಬಹುಮುಖ್ಯವಾದ ಶುದ್ಧ ನೀರಿನ ವ್ಯವಸ್ಥೆ ಇಲ್ಲ, ಇಲ್ಲಿಗೆ ಬರುವ ಪಕ್ಷಿ ಪ್ರಿಯರು ತಮ್ಮೊಂದಿಗೆ ನೀರು ತರುವುದನ್ನು ಮರೆತರೆ ಮತ್ತೆ 2 ಕಿ.ಮೀ ದೂರದ ಗ್ರಾಮಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ, ವಿದ್ಯುತ್ ಇದ್ದರೆ ಜಮೀನುಗಳಲ್ಲಿನ ಕೊಳವೆ ಬಾವಿಗಳಿಗೆ ಹೋಗಿ ಬಾಯಾರಿಕೆಯನ್ನು ತಣಿಸಿಕೊಳ್ಳಬೇಕು.

ಪಕ್ಷಿಧಾಮಕ್ಕೆ ವಿದ್ಯುತ್ ಸಂಪರ್ಕ ಇಲ್ಲ, ಈ ಹಿಂದೆ ವಿದ್ಯುತ್ ಗುತ್ತಿಗೆದಾರರೊಬ್ಬರಿಗೆ ವಿದ್ಯುತ್ ಸಂಪರ್ಕ ಕೊಡಿಸುವ ಹೊಣೆ ನೀಡಿ ಆರು ತಿಂಗಳಾದರೂ ಅರೆಬರೆ ಕೆಲಸಗಳಾಗಿವೆ, ವಿದ್ಯುತ್ ಕಂಬದಿಂದ ವೀಕ್ಷಣಾ ಗೋಪುರದವರೆಗೂ ವಿದ್ಯುತ್ ಲೇನ್‍ಗಳನ್ನು ಎಳೆಯಲಾಗಿದೆ.  ಆದರೆ ಅಧಿಕೃತವಾಗಿ ಸಂಪರ್ಕ ಪಡೆದುಕೊಳ್ಳಲು ನೋಂದಣಿಯಾಗಿಲ್ಲ, ಮೀಟರ್ ಅಳವಡಿಸಿಲ್ಲ.

ಹಗರಿಬೊಮ್ಮನಹಳ್ಳಿ ಪಕ್ಷಿಧಮದಲ್ಲಿ ಶುದ್ಧ ನೀರಿನ ಘಟಕಕ್ಕೆ ನೀರಿನ ಟ್ಯಾಂಕರ್ ಇಡುವ ಕಬ್ಬಿಣದ ಸ್ಟ್ಯಾಂಡ್ ಬಳಕೆಯಾಗದೆ ತುಕ್ಕು ಹಿಡಿಯುತ್ತಿದೆ
ಅಂಕಸಮುದ್ರ ಪಕ್ಷಿಧಾಮಕ್ಕೆ ಶುದ್ಧ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕುರಿತು ಇಲಾಖೆಯಿಂದ ಪ್ರಸ್ತಾವ ಬಂದರೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು
- ಕೆ.ನಾಗರಾಜ ಎಇಇ ಜೆಸ್ಕಾಂ ಇಲಾಖೆ
ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದ ಬಳಿಕವಷ್ಟೆ ಶುದ್ಧ ನೀರಿನ ಘಟಕ ಸ್ಥಾಪಿಸುವುದಕ್ಕೆ ಚಾಲನೆ ನೀಡಲಾಗುವುದು.
- ರೇಣುಕಮ್ಮ ವಲಯ ಅರಣ್ಯಾಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.