ADVERTISEMENT

ಹಗರಿಬೊಮ್ಮನಹಳ್ಳಿ | ಉತ್ತಮ ಮಳೆ: ರೈತರ ಚಿತ್ತ ಬಿತ್ತನೆಯತ್ತ

ಅಗತ್ಯ ಬಿತ್ತನೆ ಬೀಜ, ರಸಾಯನಿಕ ಗೊಬ್ಬರಗಳ ದಾಸ್ತಾನು

ಸಿ.ಶಿವಾನಂದ
Published 6 ಜೂನ್ 2025, 4:20 IST
Last Updated 6 ಜೂನ್ 2025, 4:20 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು ಗ್ರಾಮದಲ್ಲಿ ಜೋಳ ಬಿತ್ತನೆಯಲ್ಲಿ ತೊಡಗಿರುವ ರೈತರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು ಗ್ರಾಮದಲ್ಲಿ ಜೋಳ ಬಿತ್ತನೆಯಲ್ಲಿ ತೊಡಗಿರುವ ರೈತರು   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಉತ್ತಮ ಮುಂಗಾರು ಪ್ರವೇಶವಾಗಿದೆ, ರೈತರ ಮೊಗದಲ್ಲಿ ಸಂತಸ ತುಂಬಿಕೊಂಡಿದೆ. ಕಡುಬೇಸಿಗೆ ಮೇ ತಿಂಗಳಲ್ಲೇ ಆರಂಭಗೊಂಡ ಮುಂಗಾರು ಪೂರ್ವದ ಮಳೆ ಹರ್ಷದ ಹೊಳೆಯನ್ನೇ ಹರಿಸಿದೆ. ರೈತರು ಭೂಮಿಯನ್ನು ಮೊದಲೇ ಮಾಗಿ ಮಾಡಿಕೊಂಡು ಬಿತ್ತನೆಗೆ ಸಜ್ಜಾಗಿದ್ದರು. ಈ ಮುಂಗಾರು ಹಂಗಾಮಿನ ಕುರಿತು ರೈತರು ಭಾರಿ ಫಸಲಿನ ನಿರೀಕ್ಷೆಯಲ್ಲಿದ್ದಾರೆ, ಈಗ ತಾಲ್ಲೂಕಿನ ಎಲ್ಲಡೆ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ.

ಒಟ್ಟು ಈ ಬಾರಿ 43,612 ಹೆಕ್ಟೇರ್ ಬಿತ್ತನೆ ಗುರಿ ಇದೆ, 15 ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶವಿದೆ. ಈಗಾಗಲೇ ಮಳೆಯಾಶ್ರಿತ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ ಬಿತ್ತನೆಗೆ ರೈತರು ಮುಂದಾಗಿದ್ದಾರೆ. ಬಿತ್ತನೆ ಬೀಜ ಕೊರತೆಯಾಗದಂತೆ ತಾಲ್ಲೂಕಿನ 3 ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ.

ರೈತರಿಗೆ ಅನುಕೂಲವಾಗುವಂತೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆವರಣ ಮತ್ತು ತಾಲ್ಲೂಕಿನ ಮೋರಿಗೇರಿಯಲ್ಲಿ ಹೆಚ್ಚುವರಿ ಬೀಜವಿತರಣೆ ಕೇಂದ್ರ ಸ್ಥಾಪಿಸಲಾಗಿದೆ.

ADVERTISEMENT

ಪಟ್ಟಣದಲ್ಲಿ ಯೂರಿಯ 635.1 ಮೆಟ್ರಿಕ್ ಟನ್, ಡಿಎಪಿ 28.1 ಮೆ.ಟನ್, ಎಂಒಪಿ 192.25 ಮೆ.ಟನ್, ಎನ್‍ಪಿಕೆಎಸ್ 1731.66 ಮೆ.ಟನ್, ಎಸ್‍ಎಸ್‍ಪಿ 82.05 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ, ರೈತರು ಯಾವುದೇ ಗೊಂದಲವಿಲ್ಲದೆ ಸರ್ಕಾರ ನಿಗದಿಪಡಿಸಿದ ಬೆಲೆಯಲ್ಲಿ ಖರೀದಿಸಬಹುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ ಜತೆಗೆ ರೋಹಿಣಿ ಮಳೆಯೂ ಪ್ರವೇಶವಾಗಿದೆ. ಇದು ಜೋಳ ಬಿತ್ತನೆಗೆ ಸದಾವಕಾಶವಾಗಿದೆ. ಆದ್ದರಿಂದ ಜೋಳ ಬಿತ್ತನೆ ಮಾಡುತ್ತಿದ್ದು ಉತ್ತಮ ಫಸಲಿನ ನಿರೀಕ್ಷೆ ಇದೆ
ಕೊಟ್ರೇಶಪ್ಪ. ಕಡಲಬಾಳು ರೈತ

‘ಅಗತ್ಯ ದಾಸ್ತಾನು ಇದೆ’

ತಾಲ್ಲೂಕಿನಲ್ಲಿ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸದಂತೆ ಮಾರಾಟಗಾರರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಅಗತ್ಯ ದಾಸ್ತಾನು ಮಾಡಲಾಗಿದೆ. ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಅಧಿಕೃತ ಮಾರಾಟ ಮಳಿಗೆಗಳಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ಸುನೀಲ್‍ಕುಮಾರ ನಾಯ್ಕ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.