ಹಗರಿಬೊಮ್ಮನಹಳ್ಳಿ: ‘ರೈಲ್ವೆ ಗೇಟ್ ತೆರೆದಿದ್ದರೆ ನನ್ನ ಮಗನನ್ನು ಬದುಕಿಸಿಕೊಳ್ಳುಬಹುದಿತ್ತು, ಆಸ್ಪತ್ರೆಗಳು ತೆರೆದಿದ್ದರೂ ರೈಲ್ವೆ ಗೇಟ್‌ಗಳು ಮುಚ್ಚಿದ್ದವು, ಅನಾರೋಗ್ಯ ಪೀಡಿತ ಮಗನನ್ನು ಆಂಬುಲೆನ್ಸ್‌ನಲ್ಲಿ ಸಕಾಲಕ್ಕೆ ಕರೆದುಕೊಂಡು ಹೋಗಲು ಸಾಧ್ಯವಾಗದೆ ಇದ್ದೊಬ್ಬ ಪುತ್ರನನ್ನು ಕಳೆದುಕೊಳ್ಳಬೇಕಾಯಿತು’...
ಇದು ಪಟ್ಟಣದಲ್ಲಿ ಈಚೆಗೆ ರೈಲ್ವೆಗೇಟ್ ಅರ್ಧಗಂಟೆಗೂ ಹೆಚ್ಚು ಮುಚ್ಚಿದ್ದರಿಂದ ಆಂಬುಲೆನ್ಸ್ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಸಕಾಲಕ್ಕೆ ಸಿಗದ ಚಿಕಿತ್ಸೆಯಿಂದಾಗಿ ಈ ಭಾಗದಲ್ಲಿ ಮೇಲ್ಸೇತುವೆ ಇರದೆ ನವೀನ್ ಎನ್ನುವ ಮಗುವೊಂದನ್ನು ಕಳೆದುಕೊಂಡ ನೊಂದ ತಂದೆಯೊಬ್ಬರ ಮಾತಿದು, ಇಂಥಹ ಘಟನೆಗಳು ಹತ್ತಾರಿವೆ.
ಪಟ್ಟಣದಲ್ಲಿರುವ ಎರಡು ರೈಲ್ವೆ ಗೇಟ್‌ಗಳು ಮುಚ್ಚಿದರೆ ಇಡೀ ನಗರಕ್ಕೆ ದ್ವಾರಬಾಗಿಲು ಹಾಕಿದಂತಾಗಿ ಪಟ್ಟಣ ದ್ವಿಭಾಗವಾದಂತಿರುತ್ತದೆ. ಹೊಸಪೇಟೆ- ಹರಿಹರ ರಾಜ್ಯ ಹೆದ್ದಾರಿಯಲ್ಲಿರುವ ರೈಲ್ವೆ ಗೇಟ್‌ನಿಂದಾಗಿ ಪ್ರಯಾಣಿಕರು ರೋಸಿ ಹೋಗಿದ್ದಾರೆ. ರಾಮನಗರ, ಅರಳಿಹಳ್ಳಿ-ಕುರುದಗಡ್ಡಿ, ಹೌಸಿಂಗ್ ಬೋರ್ಡ್ ಕಾಲೊನಿ, ರೈತರ ಓಣಿ, ಸೋನಿಯಾಗಾಂಧಿ ನಗರ, ಶಿಕ್ಷಕರ ಕಾಲೊನಿ, ಕೆವಿಓಆರ್ ಕಾಲೊನಿ ಮಿಲಿಟರಿ ಬಯಲು, ಎಪಿಎಂಸಿ ಒಂದು ಭಾಗದಲ್ಲಿದ್ದರೆ ಮತ್ತೊಂದು ಭಾಗದಲ್ಲಿ ಬಸವೇಶ್ವರ ವೃತ್ತ, ಹಳೇ ಊರು, ಎಂ.ಬಿ.ಕಾಲೋನಿ. ಸರ್ಕಾರಿ ಪಿಯು, ಪ್ರಥಮ ದರ್ಜೆ ಕಾಲೇಜು, ಐಟಿಐ ಕಾಲೇಜು ಮತ್ತು ಬಹುತೇಕ ಸರ್ಕಾರಿ ಕಾಲೇಜ್‌ಗಳು ಮತ್ತೊಂದು ಭಾಗದಲ್ಲಿದೆ.
ಹೊಸಪೇಟೆಯಿಂದ ದಾವಣಗೆರೆಗೆ ಪರಸ್ಪರ ರ್‍ವೆಲ್ವೆ ಮಾರ್ಗದಲ್ಲಿ ಪ್ರತಿ ದಿನ 6 ಪ್ರಯಾಣಿಕರ ಮತ್ತು 10ಕ್ಕೂ ಹೆಚ್ಚು ಗೂಡ್ಸ್ ರೈಲುಗಳು ಓಡಾಡುತ್ತಿವೆ. ಬೆಳಿಗ್ಗೆ ಕಚೇರಿ ಮತ್ತು ಶಾಲೆ ಕಾಲೇಜು ಸಮಯಕ್ಕೆ ಬರುವ ಗೂಡ್ಸ್ ಮತ್ತು ಪ್ರಯಾಣಿಕರ ರೈಲಿನಿಂದಾಗಿ ಕ್ರಾಸಿಂಗ್ ಆಗುತ್ತದೆ, ಆಗ ಸಾರ್ವಜನಿಕರು, ನೌಕರರು, ವಿದ್ಯಾರ್ಥಿಗಳ ಪಾಡು ಹೇಳತೀರದು. ಅನಿವಾರ್ಯವಾಗಿ ಅರ್ಧ ಗಂಟೆ ಕಾಯಲೇಬೇಕು, ಅನ್ಯ ಭಾಗದಲ್ಲಿ ರಸ್ತೆಯ ಸಂಪರ್ಕ ಇಲ್ಲ.
ರಾಮನಗರ ಮತ್ತು ಎಸ್‌ಬಿಐ ಬಳಿಯ ರ್‍ವೇಲ್ವೆ ಗೇಟ್ ಗಳ ಎರಡೂ ಭಾಗಗಳಲ್ಲಿ ನೂರಾರು ವಾಹನಗಳು ಅಡ್ಡಾದಿಡ್ಡಿ ನಿಲುಗಡೆಯಾಗುತ್ತವೆ. ಅಲ್ಲಿ ವಾಹನಗಳ ಸವಾರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಹರಸಾಹಸ ಮಾಡಬೇಕಾಗುತ್ತದೆ, ಸವಾರರು ಪರಸ್ಪರ ಕೈಕೈ ಮಿಲಾಯಿಸಿದ ಘಟನೆಗಳು ನಡೆದಿವೆ.
ನಂದಿಪುರದ ಮಹೇಶ್ವರ ಸ್ವಾಮೀಜಿ ನೇತೃತ್ವದ ರೈಲ್ವೆ ಹೋರಾಟ ಸಮಿತಿಯ ನಿಯೋಗ ಹಲವು ಬಾರಿ ಹುಬ್ಬಳಿಯ ರೈಲ್ವೆ ಪ್ರಧಾನ ಕಚೇರಿಗೆ ಭೇಟಿ ನೀಡಿ ವ್ಯವಸ್ಥಾಪಕರಿಗೆ ರಾಮನಗರ ಗೇಟ್‌ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದರೂ ಇದುವರೆಗೂ ಬೇಡಿಕೆ ಈಡೇರಿಲ್ಲ. ಈಚೆಗೆ ಬ್ಯಾಲಾಳು ಕೆರೆಯ ಬಳಿ ಎಲ್-೩೫ ಮೇಲ್ಸೇತುವೆ ಕಾಮಗಾರಿಗೆ ಸಂಸದ ಇ.ತುಕಾರಾಂ ಮತ್ತು ಶಾಸಕ ಕೆ.ನೇಮರಾಜನಾಯ್ಕ ೩೫ಕೋಟಿ ರೂಪಾಯಿ ಅಂದಾಜು ಮೊತ್ತದಲ್ಲಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ್ದಾರೆ, ಆದರೆ ಇದಕ್ಕೂ ಮೊದಲು ಸಾರ್ವಜನಿಕರಿಗೆ ಅನುಕೂಲವಾಗಬೇಕಿದ್ದ ರಾಮನಗರ ಗೇಟ್‌ನ ಮೇಲ್ಸೇತುವೆ ನಿರ್ಮಾಣ ಮಾಡಬೇಕಿತ್ತು ಎನ್ನುತ್ತಾರೆ ಸಾರ್ವಜನಿಕರು.
ಆಗಸ್ಟ್ ತಿಂಗಳಲ್ಲಿ ರಾಮನಗರ ಬಸ್ ನಿಲ್ದಾಣದ ಬಳಿ ಇರುವ ರೈಲ್ವೆ ಗೇಟ್ ಎಲ್-37 ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗುವುದು
- ಇ.ತುಕಾರಾಂ ಸಂಸದ
ಮೊದಲು ರಾಮನಗರ ಬಸ್ ನಿಲ್ದಾಣ ಬಳಿ ರೈಲ್ವೆ ಗೇಟ್ ಮೇಲ್ಸೇತುವೆ ನಿರ್ಮಾಣ ಮಾಡಬೇಕಿತ್ತು ಇದರಿಂದ ಅನೇಕ ಅವಘಡಗಳಾಗುವುದು ತಪ್ಪುತ್ತಿತ್ತು ಬಳಿಕ ಬ್ಯಾಲಾಳು ಕೆರೆ ಬಳಿಯ ಕಾಮಗಾರಿ ಕೈಗೆತ್ತಿಕೊಳ್ಳಬಹುದಿತ್ತು
-ಕೊಟ್ರೇಶ್ ಸೋನಿಯಾಗಾಂಧಿ ನಗರ ನಿವಾಸಿ
ಹೂವಿನಹಡಗಲಿಯಲ್ಲಿ ಕೆಲಸ ಮಾಡುತ್ತಿದ್ದೇನೆ ರೈಲ್ವೆ ಗೇಟ್‌ಗಳನ್ನು ಹಾಕುವುದಿರಿಂದ ಒಂದು ಗಂಟೆ ಮೊದಲೇ ಬಸ್ ಸ್ಟ್ಯಾಂಡ್‌ಗೆ ಹೋಗಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಮೇಲ್ಸೇತುವೆ ನಿರ್ಮಿಸುವ ಜರೂರು ಇದೆ
-ಪಿ.ವೆಂಕಟೇಶ್ ಸ್ಥಳೀಯ ನಿವಾಸಿ
‘ಸಮಸ್ಯೆ ಮನವರಿಕೆ’ ‘ಹಗರಿಬೊಮ್ಮನಹಳ್ಳಿಯ ರಾಮನಗರ ಬಸ್ ನಿಲ್ದಾಣದ ಬಳಿ ಮೇಲ್ಸೇತುವೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಶೀಘ್ರವೇ ಮೊತ್ತೊಮ್ಮೆ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ರೈಲ್ವೆ ಇಲಾಖೆಯ ಪ್ರಧಾನ ವ್ಯವಸ್ಥಾಪಕರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಮನವರಿಕೆ ಮಾಡಲಾಗುವುದು’ ಎಂದು ನಂದಿಪುರದ ಮಹೇಶ್ವರ ಸ್ವಾಮೀಜಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.