ADVERTISEMENT

ಮತ್ತೆ ಕಂಗೊಳಿಸಲಿದೆ ಹಂಪಿ ಮುಖ ಮಂಟಪ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 9 ಫೆಬ್ರುವರಿ 2019, 14:19 IST
Last Updated 9 ಫೆಬ್ರುವರಿ 2019, 14:19 IST
ಹಂಪಿ ಸುಖನಾಸಿ ಮುಖ ಮಂಟಪದ ಜೀರ್ಣೊದ್ಧಾರ ಮಾಡುತ್ತಿರುವುದುಚಿತ್ರ: ಆರ್‌.ಎಸ್‌. ಸ್ಥಾವರಿಮಠ
ಹಂಪಿ ಸುಖನಾಸಿ ಮುಖ ಮಂಟಪದ ಜೀರ್ಣೊದ್ಧಾರ ಮಾಡುತ್ತಿರುವುದುಚಿತ್ರ: ಆರ್‌.ಎಸ್‌. ಸ್ಥಾವರಿಮಠ   

ಹೊಸಪೇಟೆ: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎ.ಎಸ್‌.ಐ.) ಹಂಪಿ ವಿರೂಪಾಕ್ಷೇಶ್ವರ ದೇಗುಲ ಗರ್ಭಗುಡಿ ಎದುರಿನ ಸುಖನಾಸಿ ಮುಖ ಮಂಟಪ ಜೀರ್ಣೊದ್ಧಾರಕ್ಕೆ ಮುಂದಾಗಿದೆ.

ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡಿರುವ ಮಂಟಪದ ಒಳಭಾಗದಲ್ಲಿ ಸುಂದರ ಶಿಲ್ಪಗಳು ಹಾಗೂ ಶ್ರೀಮಂತ ಚಿತ್ರಕಲೆಗಳಿವೆ. ಈ ಹಿಂದೆ ದೇಗುಲದ ಪರಿಸರದಲ್ಲಿ ಅಡುಗೆ ಮಾಡುತ್ತಿದ್ದ ಕಾರಣ ಹೊಗೆ ಮತ್ತು ದೂಳು ಅದರ ಮೇಲೆ ಆವರಿಸಿಕೊಂಡು ಅಂದಗೆಟ್ಟಿತ್ತು. ಅದನ್ನು ಮತ್ತೆ ಮೂಲಸ್ವರೂಪಕ್ಕೆ ತರಲು ಎ.ಎಸ್‌.ಐ. ಕ್ರಮ ಕೈಗೊಂಡಿದೆ.

ಎ.ಎಸ್‌.ಐ.ನ ರಸಾಯನ ವಿಭಾಗದ ನುರಿತ ಕಾರ್ಮಿಕರಿಗೆ ಜೀರ್ಣೊದ್ಧಾರದ ಹೊಣೆ ವಹಿಸಲಾಗಿದ್ದು, ಮೂರ್ನಾಲ್ಕು ದಿನಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಶಿಲ್ಪಗಳು, ಚಿತ್ರಕಲೆಗಳು ಅಂದಗೆಡದಂತೆ ರಸಾಯನಿಕಗಳಿಂದ ಅವುಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ.

ADVERTISEMENT

‘ಹಂಪಿ ಸ್ಮಾರಕಗಳ ಜೀರ್ಣೊದ್ಧಾರದ ಭಾಗವಾಗಿ ಈ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಮುಖ ಮಂಟಪಕ್ಕೆ ಮಹತ್ವದ ಸ್ಥಾನವಿದೆ. ಈ ಮಂಟಪದಲ್ಲಿ ಅಪರೂಪದ ಚಿತ್ರಕಲೆ ಇದೆ. ಅದನ್ನು ಎಲ್ಲರೂ ನೋಡಬೇಕು. ಅದರ ಮಹತ್ವ, ಇತಿಹಾಸ ಅರಿಯಬೇಕು ಎನ್ನುವ ಉದ್ದೇಶದಿಂದ ಜೀರ್ಣೊದ್ಧಾರ ಮಾಡಲಾಗುತ್ತಿದೆ’ ಎಂದು ಎ.ಎಸ್‌.ಐ. ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹಳ ನಾಜೂಕಿನ ಕೆಲಸ ಆಗಿರುವುದರಿಂದ ನುರಿತ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ನಾನು ಸೇರಿದಂತೆ ಇತರೆ ಮೇಲಧಿಕಾರಿಗಳ ಸಲಹೆ ಮೇರೆಗೆ ಕೆಲಸ ನಡೆಯುತ್ತಿದೆ’ ಎಂದು ಹೇಳಿದರು.

ಮುಖ ಮಂಟಪ ಜೀರ್ಣೊದ್ಧಾರಕ್ಕೆ ಮುಂದಾಗಿರುವುದನ್ನು ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ ಸ್ವಾಗತಿಸಿದ್ದಾರೆ. ‘ಹಂಪಿಯಲ್ಲಿ ಸಾಹಿತ್ಯ, ವಾಸ್ತುಶಿಲ್ಪ ಒಂದು ಬಗೆಯದಾದರೆ ಚಿತ್ರಕಲೆಗೆ ಬೇರೆಯದೇ ಸ್ಥಾನವಿದೆ. ಅದು ಒಂದು ನೆಲೆಯ ಸಾಕ್ಷ್ಯವನ್ನು ಹೇಳುತ್ತದೆ. ಅದನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಅಂದಗೆಟ್ಟಿದ್ದ ಅದನ್ನು ಜೀರ್ಣೊದ್ಧಾರಗೊಳಿಸುತ್ತಿರುವುದು ಒಳ್ಳೆಯ ಸಂಗತಿ’ ಎಂದು ಹೇಳಿದರು.

‘ಚಿತ್ರಕಲೆಯಲ್ಲಿ ಧರ್ಮನಿಷ್ಠೆ, ಪೌರಾಣಿಕ ವಿಚಾರಗಳ ಪ್ರಸ್ತಾಪವಿದೆ. ಶಿವಪ್ರಧಾನವಾದ ಚಿತ್ರಗಳೂ ಇವೆ. ಅವುಗಳಿಗೆ ಯಾವುದೇ ರೀತಿಯಿಂದ ಧಕ್ಕೆಯಾಗದಂತೆ ಜತನದಿಂದ ಕೆಲಸ ಮಾಡಬೇಕು. ಗರ್ಭಗುಡಿ ಎದುರು ಈ ರೀತಿಯ ಸುಂದರ ಮಂಟಪ ಇರುವುದು ಬೇರೆಲ್ಲೂ ನೋಡಲು ಸಿಗುವುದಿಲ್ಲ. ಅದು ಅನೇಕ ತಲೆಮಾರಿನ ವರೆಗೆ ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿರೂಪಾಕ್ಷೇಶ್ವರ ದೇಗುಲದ ಬಿಷ್ಟಪ್ಪಯ್ಯ ಗೋಪುರವನ್ನು ಈಗಾಗಲೇ ಜೀರ್ಣೊದ್ಧಾರಗೊಳಿಸಿ, ಅದನ್ನು ಮೊದಲಿನ ಸ್ವರೂಪಕ್ಕೆ ತರಲಾಗಿದೆ. ದೇವಸ್ಥಾನದ ಪರಿಸರದಲ್ಲಿ ಕಟ್ಟಿದ್ದ ಕೊಠಡಿಗಳನ್ನು ತೆರವುಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಪುಷ್ಕರಣಿ ಪತ್ತೆಯಾಗಿದ್ದು, ದೇವಸ್ಥಾನಕ್ಕೆ ವಿಶೇಷ ಕಳೆ ಬಂದಿದೆ. ಈಗ ಮಂಟಪ ಕೂಡ ಜೀರ್ಣೊದ್ಧಾರ ಆಗುತ್ತಿರುವುದರಿಂದ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.