ADVERTISEMENT

ಬಳ್ಳಾರಿ | ಅಕ್ರಮ ಮರಳುಗಾರಿಕೆ ಆರೋಪ: ತನಿಖೆ

​ಪ್ರಜಾವಾಣಿ ವಾರ್ತೆ
Published 27 ಮೇ 2025, 15:44 IST
Last Updated 27 ಮೇ 2025, 15:44 IST
ಯಾಳ್ಪಿ ಮತ್ತು ತೊಲಮಾಮಿಡಿ ಎಂಬಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂದು ಆರೋಪಿಸಲಾದ ಮರಳು 
ಯಾಳ್ಪಿ ಮತ್ತು ತೊಲಮಾಮಿಡಿ ಎಂಬಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂದು ಆರೋಪಿಸಲಾದ ಮರಳು    

ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ ಅಸುಂಡಿಯಲ್ಲಿ ಸರ್ಕಾರದಿಂದ ಮರಳು ಯಾರ್ಡ್‌ ಗುತ್ತಿಗೆ ಪಡೆದಿರುವ ಗುತ್ತಿಗೆದಾರರೊಬ್ಬರ ವಿರುದ್ಧ ಅಕ್ರಮ ಮರಳುಗಾರಿಕೆಯ ಆರೋಪ ಕೇಳಿ ಬಂದಿದ್ದು, ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಇದರ ಆಧಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಗುತ್ತಿಗೆದಾರ ತನ್ನ ಗುತ್ತಿಗೆ ಪ್ರದೇಶವನ್ನು ಹೊರತುಪಡಿಸಿ, ಬೇರೆ ಕಡೆಯಿಂದ ಅಕ್ರಮವಾಗಿ ಮರಳನ್ನು ತಂದು ತೊಲಮಾಮಿಡಿ ಮತ್ತು ಯಾಳ್ಪಿ ಗ್ರಾಮದ ಜಮೀನುಗಳಲ್ಲಿ ಸಂಗ್ರಹಿಸಿಟ್ಟಿರುವುದಾಗಿ ಅಸುಂಡಿ ಗ್ರಾಮದ ವಿಜಯ ಎಂಬುವವರು ದೂರು ನೀಡಿದ್ದರು. ಈ ದೂರು ಆಧರಿಸಿ ಸದ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ತನಿಖೆ ಕೈಗೊಂಡಿದೆ ಎಂದು ಗೊತ್ತಾಗಿದೆ. 

ದೂರಿನಲ್ಲಿ ಏನಿದೆ: ‘ಅಸುಂಡಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳ 11.15 ಎಕರೆಯಲ್ಲಿ ಬಳ್ಳಾರಿ ನಗರದ ರಾಮಕೃಷ್ಣ ರಾವ್‌ ಎಂಬುವವರಿಗೆ ಮರಳು ಯಾರ್ಡ್‌ ಮಂಜೂರಾಗಿದೆ. ಆದರೆ, ಈ ಸ್ಥಳದಲ್ಲಿ ಈಗ ಮರಳು ದಾಸ್ತಾನು ಖಾಲಿಯಾಗಿದೆ. ಆದ್ದರಿಂದ ವೇದಾವತಿ ನದಿಯಿಂದ ಮರಳನ್ನು ತಂದು ತಮ್ಮ ಜಮೀನುಗಳಲ್ಲಿ ಅಕ್ರಮವಾಗಿ ಶೇಖರಿಸಿಟ್ಟು, ಬಳಿಕ ತಮ್ಮ ಗುತ್ತಿಗೆಯಿಂದ ಮಾರಾಟ ಮಾಡುತ್ತಿದ್ದಾರೆ’ ಎಂದು ವಿಜಯ್‌ ಆರೋಪಿಸಿದ್ದಾರೆ. 

ADVERTISEMENT

ತಂಡ ರಚನೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ದೂರಿನ ತನಿಖೆಗೆ ಮುಂದಾಗಿದ್ದು, ಅದಕ್ಕಾಗಿ ಅಧಿಕಾರಿಗಳ ತಂಡ ರಚಿಸಿದೆ. ಮರಳಿನ ಪರೀಕ್ಷೆ ನಡೆಸುತ್ತಿದೆ. ಡ್ರೋಣ್‌ಗಳ ಮೂಲಕ ಸರ್ವೆ ಮಾಡಿಸುತ್ತಿದೆ. ತನಿಖಾ ತಂಡ ವರದಿ ಆಧರಿಸಿ ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಇಲಾಖೆಯು ಅಲ್ಲಿಯ ವರೆಗೆ ಮರಳು ಸಾಗಣೆ ಮಾಡದಂತೆ ಗುತ್ತಿಗೆದಾರನಿಗೆ ತಾಕೀತು ಮಾಡಿದೆ. 

ಸ್ಥಳದಲ್ಲಿ ಅಂದಾಜು 30 ಸಾವಿರ ಟನ್‌ನಷ್ಟು ಮರಳು ದಾಸ್ತಾನಿರಬಹುದು ಎಂದು ಬಲ್ಲ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.