ADVERTISEMENT

ಬಳ್ಳಾರಿ: ಕಾಣಿಸಿಕೊಂಡ ಚಿರತೆ, ಮುಳ್ಳು ಬೇಲಿ ತೆರವು, ಬೋನ್‌ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 13:38 IST
Last Updated 1 ಜನವರಿ 2019, 13:38 IST
ಕಂಪ್ಲಿ ತಾಲ್ಲೂಕು ದೇವಲಾಪುರದ ರಾಜನಮಟ್ಟಿ ಬಳಿ ಚಿರತೆ ಕಾಣಿಸಿಕೊಂಡಿದ್ದರಿಂದ ಸೋಮವಾರ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಅಳವಡಿಸಿದರು.
ಕಂಪ್ಲಿ ತಾಲ್ಲೂಕು ದೇವಲಾಪುರದ ರಾಜನಮಟ್ಟಿ ಬಳಿ ಚಿರತೆ ಕಾಣಿಸಿಕೊಂಡಿದ್ದರಿಂದ ಸೋಮವಾರ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಅಳವಡಿಸಿದರು.   

ಕಂಪ್ಲಿ: ತಾಲ್ಲೂಕಿನ ದೇವಲಾಪುರ ಗ್ರಾಮದ ವಿವಿಧೆಡೆ ಚಿರತೆ ಹಾವಳಿ ಮುಂದುವರಿದಿದ್ದು, ರಾಜನಮಟ್ಟಿಯ ಗೊಲ್ಲರ ದೊಡ್ಡ ಹೊನ್ನಯ್ಯನ ಹೊಲದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಬೋನ್‌ ಅಳವಡಿಸಿದರು.

‘ಹರಿಜನ ಮಾರೇಶ್‌ ಹೊಲದಲ್ಲಿ ಸೋಮವಾರ ಮಧ್ಯಾಹ್ನ ಮೆಣಸಿನಕಾಯಿ ಬಿಡಿಸುತ್ತಿದ್ದ ಸುಮಾರು 15 ಮಹಿಳಾ ಕಾರ್ಮಿಕರು ಚಿರತೆ ಕಾಣಿಸಿಕೊಳ್ಳುತ್ತಿದ್ದಂತೆ ಗಾಬರಿಯಿಂದ ಮಧ್ಯಾಹ್ನ ಮನೆಗೆ ಮರಳಿದರು’ ಎಂದು ಚಿರತೆ ನೋಡಿದ ತಳವಾರ ತಿಪ್ಪಯ್ಯ ತಿಳಿಸಿದರು.

‘ರಾಜನಮಟ್ಟಿ ಪ್ರದೇಶದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದು, ಸುತ್ತಲೂ ಮುಳ್ಳು ಬೇಲಿ ಬೆಳೆದು ಪೊದೆ ನಿರ್ಮಾಣವಾಗಿದ್ದರಿಂದ ಸೋಮವಾರ ಜೆಸಿಬಿ ಯಂತ್ರದಿಂದ ತೆರವುಗೊಳಿಸಲಾಯಿತು. ರಾಜನಮಟ್ಟಿಯಲ್ಲಿ ಬೀದಿ ದೀಪ ವ್ಯವಸ್ಥೆಗೆ ವಿದ್ಯುತ್‌ ಕಂಬ ಅಗತ್ಯವಿದ್ದು, ಜೆಸ್ಕಾಂ ಸಿಬ್ಬಂದಿ ಸರ್ವೆ ಮಾಡಿದ್ದಾರೆ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೌಡ್ರು ಸುರೇಶ್‌ಗೌಡ ತಿಳಿಸಿದರು.

ADVERTISEMENT

‘ಶ್ರೀರಾಮರಂಗಾಪುರ ಸರ್ಕಾರಿ ಪ್ರೌಢಶಾಲೆ ಬಳಿ ಹೊಲದಲ್ಲಿ ಚಿರತೆ ಮತ್ತು ಚಿರತೆ ಮರಿ ಹೆಜ್ಜೆ ಗುರುತುಗಳು ಮಂಗಳವಾರ ಕಂಡು ಬಂದಿವೆ. ಈ ಕಾರಣದಿಂದ ಶಾಲೆಗೆ ಮೂರು ದಿನ ರಜೆ ಘೋಷಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಶಾಲೆ ಬಳಿ ಬೋನ್‌ ಅಳವಡಿಸಲಾಗಿದೆ. ದೇವಲಾಪುರದಲ್ಲಿ ಚಿರತೆ ಸೆರೆಗೆ ವಿವಿಧೆಡೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಹೊಸಪೇಟೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಎನ್. ಬಸವರಾಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.