ADVERTISEMENT

ನಡುರಸ್ತೆಯಲ್ಲೇ ಬಸವ ಕಾಲುವೆ ತ್ಯಾಜ್ಯ!

ಜನ, ವಾಹನ ಸಂಚಾರ ಸ್ಥಗಿತ; ಎಲ್ಲೆಡೆ ದುರ್ಗಂಧ, ಸೊಳ್ಳೆ ಕಾಟ–ನೀರಾವರಿ ಇಲಾಖೆಯ ಕೆಲಸಕ್ಕೆ ಕಿಡಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 8 ಜನವರಿ 2019, 19:46 IST
Last Updated 8 ಜನವರಿ 2019, 19:46 IST
ಮೂರಂಗಡಿ ವೃತ್ತಕ್ಕೆ ಹೋಗುವ ದಾರಿಯಲ್ಲಿ ಬಸವ ಕಾಲುವೆಯ ತ್ಯಾಜ್ಯ ಸುರಿದಿರುವುದು
ಮೂರಂಗಡಿ ವೃತ್ತಕ್ಕೆ ಹೋಗುವ ದಾರಿಯಲ್ಲಿ ಬಸವ ಕಾಲುವೆಯ ತ್ಯಾಜ್ಯ ಸುರಿದಿರುವುದು   

ಹೊಸಪೇಟೆ:ಸಣ್ಣ ನೀರಾವರಿ ಇಲಾಖೆಯುಇಲ್ಲಿನ ಬಸವ ಕಾಲುವೆಯ ತ್ಯಾಜ್ಯವನ್ನು ನಡು ರಸ್ತೆಯಲ್ಲೇ ಸುರಿದು ಹೋಗಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ಗಂಧ ಹರಡಿದೆ.

ಅಮರಾವತಿಯನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ತಿರುವಿನಿಂದ ಮೂರಂಗಡಿ ವೃತ್ತದ ವರೆಗೆ ಕಾಲುವೆಯನ್ನು ಇಲಾಖೆ ಸ್ವಚ್ಛಗೊಳಿಸಿದೆ. ಕಾಲುವೆಯಲ್ಲಿ ಭರ್ತಿಯಾಗಿದ್ದ ಅಪಾರ ಪ್ರಮಾಣದ ತ್ಯಾಜ್ಯವನ್ನು ರಸ್ತೆಯ ಮೇಲೆ ಹಾಕಲಾಗಿದೆ. ಮೂರು ದಿನಗಳಾದರೂ ತ್ಯಾಜ್ಯವನ್ನು ಬೇರೆಡೆ ಸ್ಥಳಾಂತರಿಸುವ ಕೆಲಸವಾಗಿಲ್ಲ.

ತ್ಯಾಜ್ಯ ಸುರಿದಿರುವ ಕಾರಣ ಜನ ಹಾಗೂ ವಾಹನ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. ಎಲ್ಲೆಡೆ ದುರ್ಗಂಧ ಹರಡಿ, ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇದರಿಂದ ಕಾಲುವೆಯ ಅಕ್ಕಪಕ್ಕದ ಜನರ ನೆಮ್ಮದಿ ಸಂಪೂರ್ಣ ಹಾಳಾಗಿದೆ. ಅಷ್ಟೇ ಅಲ್ಲ, ನಡುರಸ್ತೆಯಲ್ಲೇ ತ್ಯಾಜ್ಯ ಬಿಟ್ಟು ಹೋಗಿರುವುದರಿಂದ ಜನ ಸುತ್ತು ಬಳಸಿ ಓಡಾಡುವಂತಾಗಿದೆ.

ADVERTISEMENT

ಒಳಚರಂಡಿ ಕಾಮಗಾರಿಗೆ ನಗರಸಭೆಯು ನಗರದ ಬಹುತೇಕ ರಸ್ತೆಗಳನ್ನು ಅಗೆದು ಹಾಳುಗೆಡವಿದೆ. ಗುಂಡಿಗಳು, ದೂಳಿನಿಂದ ಜನ ಕಂಗೆಟ್ಟಿ ಹೋಗಿದ್ದಾರೆ. ಈಗ ಸಣ್ಣ ನೀರಾವರಿ ಇಲಾಖೆಯ ಅವಾಂತರದಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇಲಾಖೆಯ ಈ ಕ್ರಮಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವಿಪರೀತ ದೂಳಿನಿಂದ ಮೊದಲೇ ಜನರ ನೆಮ್ಮದಿ ಹಾಳಾಗಿದೆ. ಅನೇಕ ಜನ ಶ್ವಾಸಕೋಶ ಸಂಬಂಧಿತ ಕಾಯಿಲೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈಗ ಜನ ಹಾಗೂ ವಾಹನ ಸಂಚರಿಸುವ ನಡು ರಸ್ತೆಯಲ್ಲೇ ಬಸವ ಕಾಲುವೆಯ ಹೊಲಸು ಸುರಿದು ಹೋಗಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ’ ಎಂದು ಸಾಮಾಜಿಕ ಹೋರಾಟಗಾರ ಯಲ್ಲಾಲಿಂಗ ಹೇಳಿದರು.

‘ಯಾವುದೇ ಕೆಲಸ ಮಾಡಿದರೂ ವೈಜ್ಞಾನಿಕ ರೀತಿಯಲ್ಲಿ ಮಾಡಬೇಕು. ಜನರಿಗೆ ಕಿರಿಕಿರಿ ಉಂಟು ಮಾಡಬಾರದು. ಹಂತ ಹಂತವಾಗಿ ಸ್ವಚ್ಛತೆ ಕೈಗೊಂಡು, ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕಿತ್ತು. ಆದರೆ, ಹಾಗೆ ಮಾಡದೆ ಇಲಾಖೆ ಬೇಜವಾಬ್ದಾರಿಯಿಂದ ವರ್ತಿಸಿದೆ’ ಎಂದು ಟೀಕಿಸಿದರು.

‘ಶೀಘ್ರ ತ್ಯಾಜ್ಯವನ್ನು ಬೇರೆಡೆ ಸ್ಥಳಾಂತರಿಸಿ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು. ಮೂರು ದಿನಗಳಿಂದ ತ್ಯಾಜ್ಯ ನಡು ರಸ್ತೆಯಲ್ಲೇ ಇರುವುದರಿಂದ ಎಲ್ಲೆಡೆ ದುರ್ಗಂಧ, ಸೊಳ್ಳೆಗಳ ಕಾಟ ಹೆಚ್ಚಾಗಿದೆ’ ಎಂದು ಹೇಳಿದರು.

‘ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡಿರುವ ಬಸವ ಕಾಲುವೆಯನ್ನು ನಿರ್ವಹಣೆ ಮಾಡುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ. ಈಗ ಏಕಾಏಕಿ ಹೊಲಸನ್ನು ರಸ್ತೆ ಮೇಲೆ ಸುರಿದು ಜನರಿಗೆ ತೊಂದರೆ ಆಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಇದು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ’ ಎಂದು ಸ್ಥಳೀಯ ನಿವಾಸಿ ಸ್ವಪ್ನಕುಮಾರಿ ಟೀಕಿಸಿದರು.

‘ನಗರಸಭೆ ಹಾಗೂ ಸಣ್ಣ ನೀರಾವರಿ ಇಲಾಖೆಗಳೆರಡೂ ಜನರ ನೆಮ್ಮದಿ ಹಾಳು ಮಾಡಲು ಪೈಪೋಟಿಗೆ ಇಳಿದಂತೆ ಮಾಡುತ್ತಿವೆ. ಜನರ ತಾಳ್ಮೆ ಪರೀಕ್ಷಿಸಬಾರದು. ಎಚ್ಚೆತ್ತುಕೊಂಡು ಕ್ರಮ ಜರುಗಿಸಬೇಕು’ ಎಂದು ಹೋರಾಟಗಾರ ತಾಯಪ್ಪ ನಾಯಕ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.