ಬಳ್ಳಾರಿ: ‘ಕರ್ನಾಟಕದಿಂದ ₹884 ಕೋಟಿ ಮೊತ್ತದ 29 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ಹೊರತೆಗೆದು ಮಾರಾಟ ಮಾಡಿರುವ ಜನಾರ್ದನ ರೆಡ್ಡಿ ನೇತೃತ್ವದ ಓಬುಳಾಪುರಂ ಮೈನಿಂಗ್ ಕಂಪನಿ (ಒಎಂಸಿ) ಮತ್ತು ಅದರ ಸಹಚರ ಕಂಪನಿಗಳ ವಿರುದ್ಧ ಸರ್ಕಾರ ಕೂಡಲೇ ವಸೂಲಾತಿ ಕ್ರಮ ಜರುಗಿಸಬೇಕು’ ಎಂದು ಗಣಿ ಉದ್ಯಮಿ ಮತ್ತು ಹೋರಾಟಗಾರ ಟಪಾಲ್ ಗಣೇಶ್ ಒತ್ತಾಯಿಸಿದ್ದು, ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
‘ಆಂಧ್ರಪ್ರದೇಶದಲ್ಲಿ ಪಡೆದ ಗಣಿ ಗುತ್ತಿಗೆಯ ಪರವಾನಗಿಯನ್ನು ಬಳಸಿಕೊಂಡು ಜನಾರ್ದನ ರೆಡ್ಡಿ ಅವರ ನೇತೃತ್ವದ ಒಎಂಸಿಯು ಕರ್ನಾಟಕದಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಗಣಿಗಾರಿಕೆ ಮಾಡಿ ಸಾಗಿಸಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಓಬುಳಾಪುರಂ ಮೈನಿಂಗ್ ಕಂಪನಿ ಮತ್ತು ಅದರ ಸಹಚರ ಕಂಪನಿಗಳು ಸಂಡೂರಿನಿಂದ ಸುಮಾರು 29 ಲಕ್ಷ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ಗಣಿಗಾರಿಕೆ ಮಾಡಿ ಸಾಗಿಸಿವೆ ಎಂದು ವಿವಿಧ ವಿಚಾರಣೆಗಳು, ವರದಿಗಳು ಮತ್ತು ನ್ಯಾಯಾಲಯದ ತೀರ್ಪಿನಿಂದ ಸಾಬೀತಾಗಿದೆ. ಈ ಅಕ್ರಮದ ಒಟ್ಟು ಮೊತ್ತ ₹884 ಕೋಟಿ’ ಎಂದು ಗಣೇಶ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) 2011ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿ, ಲೋಕಾಯುಕ್ತ ವರದಿ, ಅಕ್ರಮ ಗಣಿಗಾರಿಕೆ ಕುರಿತ ಪ್ರಕರಣವೊಂದರಲ್ಲಿ ಮೇ ತಿಂಗಳಲ್ಲಿ ಹೈದರಾಬಾದ್‌ನ ಸಿಬಿಐ ನ್ಯಾಯಾಲಯ ನೀಡಿದ ತೀರ್ಪಿನ ಪ್ರತಿಯನ್ನೂ ಅವರು ತಮ್ಮ ಪತ್ರಕ್ಕೆ ಪೂರಕವಾಗಿ ಲಗತ್ತಿಸಿ ಮುಖ್ಯ ಕಾರ್ಯದರ್ಶಿಗೆ ತಲುಪಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿರುವ ಗಣೇಶ್, ‘ಜನಾರ್ದನ ರೆಡ್ಡಿ ಅವರ ಅಕ್ರಮಕ್ಕೆ ಸಾಕಷ್ಟು ಪುರಾವೆಗಳಿವೆ. ಒಎಂಸಿ ಮತ್ತು ಹಿಂದ್ ಟ್ರೇಡರ್ಸ್ ಕಂಪನಿಗಳು ಅಕ್ರಮವಾಗಿ ಒಪ್ಪಂದ ಮಾಡಿಕೊಂಡಿವೆ. ಎರಡೂ ಕಂಪನಿಗಳ ವಿರುದ್ಧ ವಸೂಲಿ ಕ್ರಮ ಜರುಗಿಸಬೇಕು’ ಎಂದು ಹೇಳಿದರು.
‘ಇದು ಕೇವಲ ಆದಾಯ ನಷ್ಟದ ವಿಚಾರ ಮಾತ್ರವಲ್ಲ. ಕರ್ನಾಟಕದ ನೈಸರ್ಗಿಕ ಸಂಪನ್ಮೂಲದ ರಕ್ಷಣೆಗೆ ಸಂಬಂಧಿಸಿದ ವಿಚಾರ. ಸಾರ್ವಜನಿಕ ನಂಬಿಕೆಯನ್ನು ಕಾಪಾಡುವುದೂ ಇಲ್ಲಿ ಮುಖ್ಯವಾಗುತ್ತದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, ಅರಣ್ಯ ಕಾಯಿದೆಗಳು ಉಲ್ಲಂಘನೆಯಾಗಿರುವುದನ್ನು ಸರ್ಕಾರ ಗಮನಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.