ಬಳ್ಳಾರಿ: ‘12ನೇ ಶತಮಾನದ ಅನುಭವ ಮಂಟಪದಲ್ಲಿ ವಚನಕಾರರಾಗಿದ್ದ ನುಲಿಯ ಚಂದಯ್ಯ ಅವರು ಕಾಯಕ ಯೋಗಿಯಾಗಿದ್ದರು’ ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಿಗಿ ನಾಗರಾಜ್ ಹೇಳಿದರು.
ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಚನಕಾರರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಮಾತನಾಡಿ, ‘ನುಲಿಯ ಚಂದಯ್ಯ ತಮ್ಮ ವೃತ್ತಿಯ ಬಗ್ಗೆ ಅಪಾರ ಗೌರವ ಹೊಂದಿದ್ದವರು. ವೃತ್ತಿಯಿಂದ ಬಂದ ಆದಾಯದಲ್ಲಿ ಉಳಿದ ಹಣದಲ್ಲಿ ಜಂಗಮರ ದಾಸೋಹಕ್ಕೆ ಮೀಸಲಿಟ್ಟಿದ್ದರು’ ಎಂದರು.
ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪನ್ಯಾಸಕ ಗಂಗಾಧರ ಎಲ್. ಮಾತನಾಡಿ, ‘ಕಲ್ಯಾಣದ ಕೆರೆಗಳಲ್ಲಿ ಸಿಗುವ ನಾರುಗಳಿಂದ ಹಗ್ಗ ಹೊಸೆದು ಮಾರಾಟ ಮಾಡುತ್ತಿದ್ದ ಚಂದಯ್ಯ, ಅದರಿಂದ ಬಂದ ಹಣದಿಂದ ಜಂಗಮರಿಗೆ ದಾಸೋಹ ನಡೆಸುತ್ತಿದ್ದರು. 1,160ರಲ್ಲಿ ನಡೆಯುತ್ತಿದ್ದ ಅನುಭವ ಗೋಷ್ಠಿಗಳಲ್ಲಿ ಇವರು ಚಂದೇಶ್ವರ ಲಿಂಗ ಎಂಬ ಅಂಕಿತನಾಮದಲ್ಲಿ ಸುಮಾರು 48 ವಚನ ರಚಿಸಿದ್ದಾರೆ’ ಎಂದು ಹೇಳಿದರು.
ಕೊರವ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀರಾಮುಲು, ಗೌರವಾಧ್ಯಕ್ಷ ಶಂಕರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.