ಬಳ್ಳಾರಿ: ‘ರಾಜ್ಯ ಸರ್ಕಾರ 2002ರಲ್ಲಿ ಜಾರಿಗೆ ತಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ಬಳ್ಳಾರಿ ಮಹಾನಗರ ಪಾಲಿಕೆಯು ಅಸಮರ್ಪಕವಾಗಿ ಜಾರಿಗೆ ತಂದಿದೆ’ ಎಂದು 2023–24ನೇ ಸಾಲಿನ ಲೆಕ್ಕ ಪರಿಶೋಧನಾ ಕರಡು ವರದಿಯಲ್ಲಿ ಹೇಳಲಾಗಿದೆ. ಈಚೆಗೆ ಪಾಲಿಕೆಯಲ್ಲಿ ಬಹಿರಂಗವಾದ ಚಲನ್ ಅಕ್ರಮದ ಬಗ್ಗೆಯೂ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಪದ್ಧತಿಯಲ್ಲಿ ತೆರಿಗೆ ಪಾವತಿದಾರರೇ ತಮ್ಮ ಆಸ್ತಿಯ ತೆರಿಗೆಯ ಬಗ್ಗೆ ಸ್ವಯಂಘೋಷಣೆ ಮಾಡಿಕೊಂಡು, ಪಾಲಿಕೆಗೆ ರಿಟರ್ನ್ಸ್ ಸಲ್ಲಿಸಬೇಕು. ಆಸ್ತಿ ತೆರಿಗೆ ಪಾವತಿ ಮಾಡಿ ರಿಟರ್ನ್ಸ್ ಸಲ್ಲಿಸದ ತೆರಿಗೆದಾರರಿಗೆ ₹100 ದಂಡ ವಿಧಿಸಲು ಅವಕಾಶವಿದೆ. ಒಂದು ವೇಳೆ ತಪ್ಪಾಗಿ ಅಥವಾ ಅಪೂರ್ಣವಾದ ರಿಟರ್ನ್ಸ್ ಸಲ್ಲಿಸಿದ್ದರೆ ವ್ಯತ್ಯಾಸದ ಮೊತ್ತದ ಎರಡರಷ್ಟನ್ನು ದಂಡವಾಗಿ ವಸೂಲಿ ಮಾಡಲು ಅವಕಾಶವಿದೆ.
ಆದರೆ, ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಒಂದು ಬಾರಿ ತೆರಿಗೆದಾರರು ತಮ್ಮ ಆಸ್ತಿಗೆ ಸಂಬಂಧಿಸಿದ ತೆರಿಗೆಯನ್ನು ಸ್ವಯಂಘೋಷಣೆ ಮಾಡಿ ತೆರಿಗೆ ಪಾವತಿಸಿದ ನಂತರ ಅದು ಸರಿಯಾಗಿದೆಯೇ ಇಲ್ಲವೇ, ಎಂಬುದರ ಬಗ್ಗೆ ಪರಿಶೀಲನೆಯೇ ನಡೆದಿಲ್ಲ. ಪಾವತಿಯಾದ ತೆರಿಗೆಯನ್ನೂ ಡಿ.ಸಿ.ಬಿ. ವಹಿಯಲ್ಲಿ ದಾಖಲಿಸಿಲ್ಲ.
‘ಸ್ವಯಂಘೋಷಿತ ಆಸ್ತಿತೆರಿಗೆ ಪದ್ಧತಿಯನ್ನು ಬಳ್ಳಾರಿ ಪಾಲಿಕೆಯಲ್ಲಿ ಅಪೂರ್ಣವಾಗಿ ಅನುಷ್ಠಾನ ಮಾಡಲಾಗಿದೆ. ಇದು ಮಹಾನಗರ ಪಾಲಿಕೆಗೆ ಬರಬೇಕಾದ ಆದಾಯ ತಪ್ಪಿಸಿದೆ’ ಎಂದು ಲೆಕ್ಕ ಪರಿಶೋಧಕರು ಹೇಳಿದ್ದಾರೆ.
‘ಸ್ವಯಂಘೋಷಿತ ಆಸ್ತಿ ತೆರಿಗೆ ಅಡಿಯಲ್ಲಿ ತೆರಿಗೆದಾರರ ಪಾವತಿಯ ಬಗ್ಗೆ ಖಚಿತತೆ ಕಂಡು ಬಂದಿಲ್ಲ. ಸಂಬಂಧಪಟ್ಟ ತೆರಿಗೆ ಪಾವತಿದಾರರು ತೆರಿಗೆಯನ್ನು ‘ಬಳ್ಳಾರಿ ಒನ್’ ಕೇಂದ್ರದಲ್ಲಿ ಪಾವತಿಸಿದ್ದಾರೆ. ಈ ಪಾವತಿಗೆ ಪ್ರತಿಯಾಗಿ ನೀಡಲಾದ ಚಲನ್‌ಗಳನ್ನು ಪರಿಶೀಲಿಸಿದಾಗ ಪಾವತಿಸಿದ ಮೊತ್ತವು ಮಹಾನಗರ ಪಾಲಿಕೆ ಖಾತೆಗೆ ಜಮಾ ಆಗದಿರುವುದು ಕಂಡು ಬಂದಿದೆ. ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಸಂಸ್ಥೆಯ ಆದಾಯವನ್ನು ಹೆಚ್ಚಿಸಲು ಕ್ರಮ ವಹಿಸಬೇಕು’ ಎಂದು ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಆಸ್ತಿ ರಿಜಿಸ್ಟರ್ ಮಾಹಿತಿ ನೀಡದ ಪಾಲಿಕೆ ಪಾಲಿಕೆ ವ್ಯಾಪ್ತಿಯ ಕಟ್ಟಡ ಭೂಮಿ ಅಥವಾ ಎರಡಕ್ಕೂ ಸಂಬಂಧಿಸಿದಂತೆ ಆಸ್ತಿ ತೆರಿಗೆ ರಿಜಿಸ್ಟರನ್ನು ನಿರ್ವಹಿಸಬೇಕು. ಅದರಲ್ಲಿ ಆಸ್ತಿ ಮತ್ತು ಅದರ ಮಾಲೀಕರಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳೂ ಇರುತ್ತವೆ. ಆದರೆ ಪಾಲಿಕೆಯು ರಿಜಿಸ್ಟರ್‌ಗಳನ್ನು ನಿರ್ವಹಿಸಿದ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಕೊಟ್ಟೇ ಇಲ್ಲ. ಹೀಗಾಗಿ ಆಸ್ತಿ ರಿಜಿಸ್ಟರ್ ಮೇಲೆ ಅಭಿಪ್ರಾಯ ನೀಡಲು ಲೆಕ್ಕ ಪರಿಶೋಧಕರಿಗೆ ಸಾಧ್ಯವಾಗಿಲ್ಲ. ಕಾನೂನುಬಾಹಿರ ಕಟ್ಟಡಗಳಿಗೆ ದಂಡ ವಿಧಿಸಿದ ತೆರಿಗೆ ವಿನಾಯಿತಿ ಹೊಂದಿರುವ ಕಟ್ಟಡಗಳ ಮೇಲೆ ಸೇವಾ ಶುಲ್ಕ ಸಂಗ್ರಹಿಸಿದ ತೆರಿಗೆ ಪಾವತಿಯಿಂದ ತಪ್ಪಿಸಿಕೊಂಡಿರುವ ಮಾಲೀಕರನ್ನು ಗುರುತಿಸಿದ ಖಾಲಿ ಭೂಮಿ ಮೇಲೆ ತೆರಿಗೆಯನ್ನು ಸಂಗ್ರಹಿಸಿದ ವಿವರಗಳನ್ನು ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳು ನೀಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಸಮೀಕ್ಷೆ ಇಲ್ಲ
ಪಾಲಿಕೆ ವ್ಯಾಪ್ತಿಯ ಕಟ್ಟಡಗಳು ಭೂಮಿ ಅಥವಾ ಎರಡಕ್ಕೂ ಸಂಬಂಧಿಸಿದಂತೆ ಸಮೀಕ್ಷೆ ನಡೆಸುವಂತೆ ಆಯುಕ್ತರು ನಿರ್ದೇಶಿಸಬಹುದು. ಸಮೀಕ್ಷೆ ನಡೆಸಲು ಮತ್ತು ಆಸ್ತಿಗಳ ರಿಜಿಸ್ಟರ್ ತಯಾರಿಸಲು ಅರ್ಹ ವ್ಯಕ್ತಿಗಳ ಅಥವಾ ಸಂಸ್ಥೆಗಳ ಸೇವೆಯನ್ನು ಪಡೆಯಬಹುದು. ಅದರೆ ಪಾಲಿಕೆಯು ಆಸ್ತಿಗಳ ಸಮೀಕ್ಷೆ ಮಾಡಿಲ್ಲ. ಸಮೀಕ್ಷೆ ಮಾಡಿದ್ದರೆ ಎಲ್ಲ ಆಸ್ತಿಗಳನ್ನೂ ತೆರಿಗೆ ಜಾಲದ ಅಡಿಯಲ್ಲಿ ತರಬಹುದಿತ್ತು. ಆಸ್ತಿಗಳ ದತ್ತಾಂಶ ಸೃಷ್ಟಿಸಬಹುದಿತ್ತು. ತೆರಿಗೆ ಸಂಗ್ರಹಣೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಖಾತ್ರಿಪಡಿಸಿಕೊಳ್ಳಬಹುದಿತ್ತು ಎಂದು ಕರಡು ವರದಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.