ಬಳ್ಳಾರಿ: ದ್ವಿತೀಯ ಪಿಯು ಫಲಿತಾಂಶಗಳನ್ನು ಗಮನಿಸಿದರೆ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಈ ವರ್ಷ 9,286 (ಶೇ 35.59) ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಕಣ್ಣಿಗೆ ರಾಚುತ್ತಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ.
ಎರಡೂ ಜಿಲ್ಲೆಗಳಿಂದ 27,048 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಪರೀಕ್ಷೆ ಬರೆದವರು 26,093. ಈ ಪೈಕಿ 16,807 ಪಾಸಾಗಿದ್ದು, 9,286 ಫೇಲಾಗಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 12,799 ವಿದ್ಯಾರ್ಥಿಗಳಲ್ಲಿ 4,199, ವಿಜಯನಗರದಲ್ಲಿ ಪರೀಕ್ಷೆ ಬರೆದ 13,294 ವಿದ್ಯಾರ್ಥಿಗಳಲ್ಲಿ 5,087 ವಿದ್ಯಾರ್ಥಿಗಳು ಫೇಲಾಗಿದ್ದಾರೆ.
ಗಂಡು ಮಕ್ಕಳೇ ಹೆಚ್ಚು ಫೇಲ್: ಎರಡೂ ಜಿಲ್ಲೆಗಳಲ್ಲಿ 12,446 ಗಂಡು ಮಕ್ಕಳು ಪರೀಕ್ಷೆ ಬರೆದಿದ್ದರು. ಆದರೆ, 5,728 ವಿದ್ಯಾರ್ಥಿಗಳು ಫೇಲಾಗಿದ್ದಾರೆ. ಇದು ಶೇ 53ಕ್ಕೂ ಅಧಿಕ ಎಂಬುದು ಆಘಾತಕಾರಿ ಸಂಗತಿ. ಪರೀಕ್ಷೆ ಬರೆದ 13,647 ಹೆಣ್ಣುಮಕ್ಕಳ ಪೈಕಿ 3,558 ವಿದ್ಯಾರ್ಥಿಗಳು ಫೇಲಾಗಿದ್ದಾರೆ.
ಕಲೆ ಸುಲಭವಲ್ಲವೇ?:
ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಅಂಕ ಬಂದವರಿಗೆ ಸಾಮಾನ್ಯವಾಗಿ ನೀಡಲಾಗುವ ಸವಕಲು ಸಲಹೆ ಎಂದರೆ ‘ಆರ್ಟ್ಸ್ ತಗೊ...ಸುಲಭ’ ಎಂಬುದು. ಆದರೆ, ಕಲಾ ವಿಭಾಗದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳು ಫೇಲಾಗಿದ್ದಾರೆ.
ಕಲಾ ವಿಭಾಗದಲ್ಲಿ ಒಟ್ಟು 9,493 ಮಂದಿ ಪರೀಕ್ಷೆ ಬರೆದಿದ್ದರೆ 4,242 ಮಂದಿ ಫೇಲಾಗಿದ್ದಾರೆ. ಇದು ಶೇ 44ಕ್ಕೂ ಅಧಿಕ. ಕಬ್ಬಿಣದ ಕಡಲೆ ಎಂದೇ ಹೇಳಲಾಗುವ ವಿಜ್ಞಾನ ವಿಭಾಗದಲ್ಲಿ ಒಟ್ಟು 10,090 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇಲ್ಲಿ 2,433 ವಿದ್ಯಾರ್ಥಿಗಳು ಫೇಲಾಗಿದ್ದಾರೆ. ಪಾಸಾದವರ ಪ್ರಮಾಣ ಶೇ 70ಕ್ಕಿಂತಲೂ ಅಧಿಕ. ವಾಣಿಜ್ಯ ವಿಭಾಗದಲ್ಲಿ 6,510 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 2,611 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ.
ಫೇಲ್‌ಗೆ ಕಾರಣವೇನು
ಜಿಲ್ಲೆಯ ಪಿಯು ಕಾಲೇಜುಗಳಲ್ಲಿ ಬೋಧಕ ವರ್ಗದ ತೀವ್ರ ಕೊರತೆ ಕಾಡುತ್ತಿದೆ. ಕೆಲವು ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರು, ಪ್ರಾಂಶುಪಾಲರು ಇಲ್ಲ ಎನ್ನಲಾಗಿದೆ. ಇಲ್ಲಿ ಅತಿಥಿ ಉಪನ್ಯಾಸಕರೇ ಎಲ್ಲವೂ ಆಗಿದ್ದಾರೆ. ಇದು ಫಲಿತಾಂಶದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಅಷ್ಟು ಉತ್ತಮವಾಗಿಲ್ಲ. ಶೇ 50ಕ್ಕಿಂತಲೂ ಕಡಿಮೆ ಹಾಜರಾತಿ ಇರುವ ಸಾವಿರಾರು ವಿದ್ಯಾರ್ಥಿಗಳು ಜಿಲ್ಲೆಯಲ್ಲಿದ್ದಾರೆ.
ಗುಳೇ ಸಮಸ್ಯೆಯೂ ಪಿಯು ಪರೀಕ್ಷೆ ಮೇಲೆ ಪರಿಣಾಮ ಬೀರುತ್ತಿದೆ. ತಂದೆ–ತಾಯಿಯರು ದುಡಿಯಲೆಂದು ಬೇರೆ ಊರುಗಳಿಗೆ ಹೋಗಿರುತ್ತಾರೆ. ಮನೆಯಲ್ಲಿ ಉಳಿಯುವುದು ಅಜ್ಜಿ, ಅಜ್ಜಂದಿರು ಮಾತ್ರ. ಹೀಗಾಗಿ ವಿದ್ಯಾರ್ಥಿಗಳ ವ್ಯಾಸಂಗದ ಬಗ್ಗೆ ಮನೆಗಳಲ್ಲಿ ಪರಾಮರ್ಶೆ ಮಾಡುವವರೇ ಇಲ್ಲ ಎಂಬಂಥ ಸ್ಥಿತಿ ಹಲವು ಕುಟುಂಬಗಳಲ್ಲಿದೆ.
ಈಚಿನ ಮಕ್ಕಳಲ್ಲಿ ಮೊಬೈಲ್ ಗೀಳು ಅಧಿಕವಾಗಿದೆ. ಅಭ್ಯಾಸ, ಓದುವ ಹವ್ಯಾಸ, ಬರವಣಿಗೆ ಕಡೆ ಆಸಕ್ತಿ ಕಡಿಮೆ ಇರುವುದೂ ಫೇಲ್‌ಗೆ ಕಾರಣ ಎನ್ನುತ್ತಾರೆ ಉಪನ್ಯಾಸಕರು.
ಬಳ್ಳಾರಿಯಂಥ ಜಿಲ್ಲೆಯಲ್ಲಿ ಆರ್ಥಿಕವಾಗಿ ಮೇಲ್ವರ್ಗದಲ್ಲಿರುವ ಕುಟುಂಬಗಳು ತಮ್ಮ ಮಕ್ಕಳನ್ನು ಬೇರೆ ಜಿಲ್ಲೆಗಳ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿಸುತ್ತಿದ್ದಾರೆ. ಇದು ಜಿಲ್ಲೆಯ ಪ್ರತಿಭಾ ಪಲಾಯನಕ್ಕೆ ಕಾರಣವಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಇವರೇನಂತಾರೆ?
ವಿಶೇಷ ತರಗತಿ ನಡೆಯಲಿದೆ
ಬೋಧಕ ವರ್ಗದ ತೀವ್ರ ಕೊರತೆ ಜಿಲ್ಲೆಯನ್ನು ಭಾದಿಸುತ್ತಿದೆ. ಮಂಜೂರಾದ 400 ಹುದ್ದೆಗಳಲ್ಲಿ 200 ಮಂದಿ ಅತಿಥಿ ಉಪನ್ಯಾಸಕರೇ ಇದ್ದಾರೆ. ಆದರೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪೈಕಿ ಬಳ್ಳಾರಿ ಉತ್ತಮ ಸಾಧನೆ ಮಾಡಿದೆ. ಫಲಿತಾಂಶದ ಹಿನ್ನೆಲೆಯಲ್ಲಿ ಬುಧವಾರ ಪ್ರಾಂಶುಪಾಲರ ಸಭೆ ಮಾಡಿದ್ದೇವೆ. ಕೂಡಲೇ ವಿಶೇಷ ತರಗತಿಗಳನ್ನು ನಡೆಸಿ ಪರೀಕ್ಷೆ–2ಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಸೂಚಿಸಲಾಗಿದೆ. ಅನುತ್ತೀರ್ಣರಾದವರು ಕೂಡಲೇ ಅಭ್ಯಾಸ ಆರಂಭಿಸಬೇಕು. ಮಾನಸಿಕವಾಗಿ ಕುಸಿಯಬಾರದು. ದುಡುಕಿನ ನಿರ್ಧಾರ ಕೈಗೊಳ್ಳಬಾರದು – ಫಾಲಾಕ್ಷ, ಪದವಿ ಪೂರ್ವ ಶಿಕ್ಷಣ ಉಪ ನಿರ್ದೇಶಕರು, ಬಳ್ಳಾರಿ
ಫೇಲ್ ಎಂಬುದು ಅಂತ್ಯವಲ್ಲ
ಈಗಿನ ಮಕ್ಕಳಿಗೆ ಚಿತ್ತಚಾಂಚಲ್ಯ ಅಧಿಕ. ಮನಸ್ಟಿಟ್ಟು ಓದಬೇಕು. ಪರೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮಕ್ಕಳ ಬಗ್ಗೆ ಪೋಷಕರಿಗೆ ಶಿಕ್ಷಕರು ಭ್ರಮೆ ತುಂಬಬಾರದು. ವಾಸ್ತವ ತಿಳಿಸಬೇಕು. ವಿದ್ಯಾರ್ಥಿಗಳ ಸಾಮರ್ಥ್ಯ ಮೀರಿದ ಕೋರ್ಸ್‌ಗಳನ್ನು ಕೊಡಿಸುವ ಪರಿಪಾಠ ಈಚೆಗೆ ಅಧಿಕವಾಗಿದೆ. ಅವರಿಷ್ಟದ ಕೋರ್ಸ್‌ಗಳಲ್ಲಿ ಮಕ್ಕಳನ್ನು ತೊಡಗಿಸಬೇಕು. ಫೇಲ್ ಎಂಬುದು ಅಂತ್ಯವಲ್ಲ. ಅವಕಾಶಗಳು ಆಕಾಶದಷ್ಟು ವಿಶಾಲವಾಗಿವೆ. ವಿದ್ಯಾರ್ಥಿಗಳು ಓದುವುದರ ಜತೆಗೆ ಆಲೋಚನೆಗಳನ್ನು ಬಲಪಡಿಸಿಕೊಳ್ಳಬೇಕು – ಶ್ರೀನಿವಾಸುಲು, ಮನೋವೈದ್ಯರು ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.