ಸಿರುಗುಪ್ಪ/ ತೆಕ್ಕಲಕೋಟೆ : ಸಿರುಗುಪ್ಪ ತಾಲ್ಲೂಕಿನ ಬಗ್ಗೂರು ಗ್ರಾಮದಲ್ಲಿನ ರಸ್ತೆ ಕಾಮಗಾರಿ ಅರೆಬರೆಯಾಗಿರುವ ಕುರಿತು ‘ಪ್ರಜಾವಾಣಿ’ ವರದಿ ಈಚೆಗೆ ವರದಿ ಪ್ರಕಟಿಸಿದ್ದಕ್ಕೆ ಮುಖ್ಯಮಂತ್ರಿ ಕಚೇರಿ ಸ್ಪಂದಿಸಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಮುಖ್ಯಮಂತ್ರಿ ಕಚೇರಿಯ ಕುಂದು ಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿ ‘ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ’ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
‘ಈ ರಸ್ತೆಯು ಬಗ್ಗೂರು ಕ್ರಾಸ್‌ನಿಂದ ಅರಳಿಗನೂರು ಗ್ರಾಮದವರೆಗೆ 5.24 ಕಿ.ಮೀ ಉದ್ದವಿದೆ. ಆರಂಭದ ಸರಪಳಿಯಿಂದ 0.30 ಕಿ.ಮೀ ವರೆಗೆ ರಸ್ತೆಯನ್ನು ಈ ಹಿಂದೆ ಮಾಡಲಾಗಿದೆ. ಉಳಿದ ರಸ್ತೆ ಮಾರ್ಗದಲ್ಲಿ ಸಮಸ್ಯೆಯಿದ್ದು, ಖಾಸಗಿ ಜಮೀನಿನಲ್ಲಿ ಹಾದು ಹೋಗುವ ಕಾರಣ ಕಾಮಗಾರಿಯನ್ನು ಕೈಗೊಳ್ಳದಂತೆ ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿ ಮರು ಪರಿಶೀಲನೆ ನಡೆಸಲಾಗಿದ್ದು, ಈ ಭಾಗದ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲು ಈಚೆಗೆ ಸರ್ವೆ ಮಾಡಲಾಗಿದೆ. ಉಳಿದಂತೆ ರಸ್ತೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಬಳ್ಳಾರಿ ಯೋಜನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.