ADVERTISEMENT

ಹಳ್ಳಿ ಶಾಲೆಯ ಶತಕದ ಸಾಧನೆ

ಉಪನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಖಾಸಗಿ ಶಾಲೆಯ ಕಲಿಕಾ ವಾತಾವರಣ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 15:51 IST
Last Updated 7 ಡಿಸೆಂಬರ್ 2018, 15:51 IST
ಹೂವಿನಹಡಗಲಿ ತಾಲ್ಲೂಕು ಉಪನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಗುಂಪು ಅಧ್ಯಯನದಲ್ಲಿ ತೊಡಗಿರುವುದು
ಹೂವಿನಹಡಗಲಿ ತಾಲ್ಲೂಕು ಉಪನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಗುಂಪು ಅಧ್ಯಯನದಲ್ಲಿ ತೊಡಗಿರುವುದು   

ಹೂವಿನಹಡಗಲಿ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ವಾತಾವರಣದ ನಡುವೆ ತಾಲ್ಲೂಕಿನ ಉಪನಾಯಕನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದೆ.

2010–11ರಲ್ಲಿ ಪ್ರಾರಂಭವಾಗಿರುವ ಈ ಸರ್ಕಾರಿ ಪ್ರೌಢಶಾಲೆ ಗುಣಾತ್ಮಕ ಶಿಕ್ಷಣಕ್ಕೆ ಹೆಸರಾಗಿದೆ. ಶಾಲೆಯಿಂದ ಹೊರ ಹೋಗಿರುವ ಏಳು ಎಸ್ಸೆಸ್ಸೆಲ್ಸಿ ಬ್ಯಾಚುಗಳ ಪೈಕಿ ಐದು ಬ್ಯಾಚುಗಳು ಶೇ 100ರಷ್ಟು ಸಾಧನೆ ಮಾಡಿವೆ. ಸತತವಾಗಿ ನೂರಕ್ಕೆ ನೂರು ಫಲಿತಾಂಶ ಪಡೆದ ಸರ್ಕಾರಿ ಶಾಲೆ ಎಂಬುದು ಈ ಹಳ್ಳಿ ಶಾಲೆಯ ಹೆಗ್ಗಳಿಕೆ.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿಯಲ್ಲಿ ಸರ್ಕಾರ ಈ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಿದೆ. ಶಾಲೆಯ ಹೊರನೋಟ ಸುಂದರವಾಗಿರುವಂತೆ ತರಗತಿಗಳ ಒಳಗೂ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಮುಖ್ಯಶಿಕ್ಷಕ ಸಿ.ಗುರುಬಸವರಾಜ ನೇತೃತ್ವದಲ್ಲಿ ಎಂಟು ಜನ ಕ್ರಿಯಾಶೀಲ ಶಿಕ್ಷಕರು ಮಕ್ಕಳಿಗೆ ಭವಿಷ್ಯ ಕಟ್ಟಿಕೊಡಲು ತಂಡದ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ.

ADVERTISEMENT

ಶಾಲೆಯ ನೀತಿ, ನಿಯಮಗಳು ಖಾಸಗಿ ಶಾಲೆಗಳನ್ನು ಮೀರಿಸುವಂತಿವೆ. ಎಂಟನೇ ತರಗತಿಯಿಂದಲೇ ಶಿಕ್ಷಕರು ವಿದ್ಯಾರ್ಥಿಯ ಹಾಜರಾತಿ ಕಡೆ ಗಮನಹರಿಸುತ್ತಿದ್ದಾರೆ. ವಿದ್ಯಾರ್ಥಿ ಒಂದು ದಿನ ಗೈರು ಹಾಜರಿಯಾದರೂ ಶಾಲೆಯಿಂದ ಪೋಷಕರಿಗೆ ಕರೆ ಹೋಗುತ್ತದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡಿರುವ ಶಿಕ್ಷಕರು ಅಭ್ಯಾಸದ ಅವಧಿಯನ್ನು ನಿಗದಿಗೊಳಿಸಿದ್ದಾರೆ. ಪ್ರತಿದಿನ ಬೆಳಗಿನ ಜಾವ ಐದು ಗಂಟೆಗೆ ವಿದ್ಯಾರ್ಥಿ ಆಯಾ ಶಿಕ್ಷಕರಿಗೆ ಮಿಸ್ಡ್‌ ಕಾಲ್‌ ಕೊಡುವುದು ರೂಢಿಯಲ್ಲಿದೆ. ಐದು ನಿಮಿಷ ತಡವಾದರೆ ಶಿಕ್ಷಕರೇ ವಿದ್ಯಾರ್ಥಿಗೆ ಕರೆ ಮಾಡಿ ಎಚ್ಚರಗೊಳಿಸುತ್ತಾರೆ.

ಶಿಕ್ಷಕರು ಮನೆ ಭೇಟಿ ಕಾರ್ಯಕ್ರಮದ ಮೂಲಕ ಮಕ್ಕಳ ಕಲಿಕೆಗೆ ಮಾರ್ಗದರ್ಶನ ಮಾಡುತ್ತಾರೆ. ಘಟಕ ಪರೀಕ್ಷೆಯ ಬಳಿಕ ಪಾಲಕರ ಸಭೆ ಆಯೋಜಿಸಿ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ತಿಳಿಸುತ್ತಾರೆ.

ವಿಶೇಷ ತರಗತಿ:ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಪ್ರತಿದಿನ ವಿಶೇಷ ತರಗತಿ ನಡೆಸುತ್ತಾರೆ. ಶಾಲೆ ಪ್ರಾರಂಭವಾಗುವ ಮುಂಚೆ ಬೆಳಿಗ್ಗೆ ವಿಶೇಷ ತರಗತಿ ನಡೆಸಿದರೆ, ಸಂಜೆ 4.40 ರಿಂದ ಅಧ್ಯಯನ ಅವಧಿ ಎಂದು ಮೀಸಲಿಟ್ಟಿದ್ದಾರೆ. ವಿಶೇಷವಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಬೋಧನೆ ಮಾಡಲಾಗುತ್ತಿದೆ.

ಪರೀಕ್ಷಾ ಭಯ ದೂರ ಮಾಡಲು ಘಟಕ ಪರೀಕ್ಷೆ, ಸರಣಿ ಪರೀಕ್ಷೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಶಿಕ್ಷಕರು ಪ್ರೇರೇಪಿಸುತ್ತಿದ್ದಾರೆ. ಈ ಎಲ್ಲ ಅಂಶಗಳಿಂದ ಶಾಲೆಯ ಗ್ರಾಮೀಣ ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾಗುತ್ತಿದ್ದಾರೆ. ಹೀಗಾಗಿ ಕಳೆದ ಆರು ವರ್ಷಗಳಿಂದ ಈ ಸರ್ಕಾರಿ ಶಾಲೆಯ ಫಲಿತಾಂಶ ತಾಲ್ಲೂಕಿಗೆ ಮಾದರಿಯಾಗಿದೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಸರ್ಕಾರಿ ಶಾಲೆಗಳ ಬಗ್ಗೆ ಇರುವ ಅಸಡ್ಡೆಯ ಮನೋಭಾವವನ್ನು ಈ ಶಾಲೆ ಹೋಗಲಾಡಿಸಿದೆ. ಸತತವಾಗಿ ನೂರಕ್ಕೆ ನೂರು ಫಲಿತಾಂಶ ಪಡೆದಿದ್ದಕ್ಕಾಗಿ ಈ ಶಾಲೆಯ ಎಲ್ಲ ಶಿಕ್ಷಕರನ್ನು ಈಚೆಗೆ ಜಿಲ್ಲಾಡಳಿತ ದೆಹಲಿ ಪ್ರವಾಸಕ್ಕೆ ಕಳಿಸಿಕೊಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.