ADVERTISEMENT

ಸಿರುಗುಪ್ಪ | ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ: ತೊಂದರೆ

ನಿತ್ಯ ಸಂಚಾರಕ್ಕೆ ಜನರ ಪರದಾಟ; ಅಪಘಾತದ ಆತಂಕದಲ್ಲೇ ಸಂಚಾರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 4:22 IST
Last Updated 6 ಜೂನ್ 2025, 4:22 IST
ಸಿರುಗುಪ್ಪ ನಗರದಲ್ಲಿ ಹಾದು ಹೋಗಿರುವ ಬೀದರ್ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150ಎ ರಲ್ಲಿ ಗುಂಡಿಗಳು ಬಿದ್ದಿವೆ
ಸಿರುಗುಪ್ಪ ನಗರದಲ್ಲಿ ಹಾದು ಹೋಗಿರುವ ಬೀದರ್ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150ಎ ರಲ್ಲಿ ಗುಂಡಿಗಳು ಬಿದ್ದಿವೆ   

ಸಿರುಗುಪ್ಪ: ನಗರದ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟು ಪ್ರಯಾಣಿಕರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಗುಂಡಿಗಳ ನರ್ತನ, ಬೇಸಿಗೆಯಲ್ಲಿ ಧೂಳಿನ ಮಜ್ಜನ ಎಂಬಂತಾಗಿದೆ. ಜನರು ನಿತ್ಯ ಸಂಚಾರಕ್ಕೆ ಪರದಾಡುವಂತಾಗಿದೆ.

ವೈಷ್ಣವಿ ಹೋಟೆಲ್, ಬಸ್ ಡಿಪೋ, ಕೋರ್ಟ್, ಬಜಾಜ್ ಶೋರೂಮ್, ಎಪಿಎಂಸಿ, ಶಿವಶಕ್ತಿ ಕಲ್ಯಾಣ ಮಂಟಪ, ಟ್ರೆಂಡ್ಸ್, ಗ್ರಾಮೀಣ ಬ್ಯಾಂಕ್, ಪೊಲೀಸ್ ಠಾಣೆಯ, ಮಹಾತ್ಮ ಗಾಂಧೀಜಿ ವೃತ್ತ, ನಗರಸಭೆ, ಅಂಬೇಡ್ಕರ್ ವೃತ್ತ, ಬಾಬು ಜಗಜೀವನ್ ರಾಂ ವೃತ್ತ, ಟಿಪ್ಪು ಸುಲ್ತಾನ್ ವೃತ್ತ, ಅಂಕಲಿ ಮಠದ ಮುಂದೆ 1ರಿಂದ2 ಅಡಿಗಳಷ್ಟು ತಗ್ಗು ನಿರ್ಮಾಣವಾಗಿದ್ದು, ದಾರಿ ಹುಡುಕುತ್ತಾ ಪ್ರಯಾಣ ನಡೆಸುವಂತಹ ಸ್ಥಿತಿ ಉದ್ಭವಿಸಿದೆ.

ಮಳೆಯ ನೀರು ಗುಂಡಿಯಲ್ಲಿ ತುಂಬಿಕೊಂಡು ರಸ್ತೆಯಲ್ಲಿ ಹೊಂಡಗಳ ನಿರ್ಮಾಣದಿಂದ ವಾಹನ ಸವಾರರು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ. ಬೈಕ್ ಸವಾರರು ಬಿದ್ದು ಕೈಕಾಲು ಮುರಿದುಕೊಳ್ಳುವುದು ನಿತ್ಯ ಸಾಮಾನ್ಯ ಎನ್ನುವಂತಾಗಿದೆ. ಅಪಘಾತಗಳು ಸಂಭವಿಸಿದ ನಿದರ್ಶನಗಳೂ ಸಾಕಷ್ಟಿವೆ. 

ADVERTISEMENT

ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದ ಮಾರೆಮ್ಮ ದೇವಸ್ಥಾನದಿಂದ ಹಳೆಕೋಟೆ ಗ್ರಾಮದ ಮಾರೆಮ್ಮ ದೇವಸ್ಥಾನದವರೆಗೆ ಕಳೆದ 2, 3 ವರ್ಷಗಳಿಂದ ₹130ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಆಮೆಗತಿಯಲ್ಲಿ ಸಾಗಿದೆ. ಭತ್ತದ ನಾಡು ಎಂದು ಪ್ರಸಿದ್ಧಿ ಪಡೆದ ತಾಲ್ಲೂಕು ಕೇಂದ್ರಕ್ಕೆ ರಾಜ್ಯ ಮತ್ತು ಅಂತರರಾಜ್ಯದಿಂದ ನಿತ್ಯ ನೂರಾರು ಭತ್ತ ಮತ್ತು ಅಕ್ಕಿಯ ಸರುಕು ತುಂಬಿದ ಭಾರಿ ಗಾತ್ರದ ವಾಹನಗಳು ಓಡಾಟದಿಂದಾಗಿ ರಸ್ತೆಯು ಸಂಪೂರ್ಣ ಹಾಳಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಲು ಕಲ್ಲು ಸಿಮೆಂಟ್ ಮಿಶ್ರಿತ ಮಣ್ಣನ್ನು ತಗ್ಗುಗಳಿಗೆ ತುಂಬಿಸಿದ್ದಾರೆ. ಇದರಿಂದ ವಾಹನಗಳು ಸಂಚರಿಸುವಾಗ ವಿಪರೀತ ಧೂಳು ಏಳುತ್ತಿದೆ. ತಾಲ್ಲೂಕು ಕೇಂದ್ರದಿಂದ ರಾಜ್ಯ ಮತ್ತು ಅಂತರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಾಗಿದೆ. ನೂರಾರು ಅಕ್ಕಿಗಿರಣಿಗಳಿಗೆ ಸಾವಿರಾರು ಕೂಲಿ ಕಾರ್ಮಿಕಕರು ಕೆಲಸ ಕಾರ್ಯಗಳಿಗೆ ದ್ವಿಚಕ್ರ ವಾಹನಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ.

ಸಿರುಗುಪ್ಪ ನಗರದ ರಾಷ್ಟ್ರೀಯ ಹೆದ್ದಾರಿ ಮುಕ್ತಿ ಯಾವಾಗ ಎಂದು ನಿತ್ಯ ಸಾವಿರಾರು ಜನರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಸಿರುಗುಪ್ಪ ನಗರಕ್ಕೆ ರಾಷ್ಟ್ರೀಯ ಹೆದ್ದಾರಿ ಶಾಪವಾಗಿದೆ. ರಸ್ತೆಯಲ್ಲಿನ ಕುಣಿಗಳು ಮತ್ತು ಇಲ್ಲಿನ ಧೂಳಿಗೆ ಹೆದರಿ ದೂರದ ಊರಿಂದ ಬರುವವರು ಹಿಂಜರಿಯುತ್ತಿದ್ದಾರೆ. ಜೀವದ ಭಯದಲ್ಲಿ ನಿತ್ಯ ಓಡಾಡುವ ಪರಿಸ್ಥಿತಿಯಿದೆ
ನಾಗರಾಜ ವಾಹನ ಚಾಲಕ ಸಿರುಗುಪ್ಪ
ನಗರದಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಚರಂಡಿಗಳಲ್ಲಿ ತ್ಯಾಜ್ಯ ತುಂಬಿದ ಕಾರಣ ಮಳೆ ನೀರು ಹೆದ್ದಾರಿಯ ಮೇಲೆ ಹರಿದು ಬರುತ್ತಿದೆ. ಇದರಿಂದ ಹೆದ್ದಾರಿ ಕೆಟ್ಟು ಹೋಗಿದೆ. ನಗರಸಭೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು
ಶಾಕೀರ್ ಹುಸೇನ್, ಎ.ಇ.ಇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹೊಸಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.