ADVERTISEMENT

ಸಿರುಗುಪ್ಪ: ಜಾನುವಾರು, ಪಕ್ಷಿಗಳಿಗೆ ನೀರಿನ ಅರವಟಿಕೆ

ಟಿಪ್ಪು ಸುಲ್ತಾನ ವೃತ್ತದಲ್ಲಿ ಸಿಮೆಂಟ್ ತೊಟ್ಟಿ ನಿರ್ಮಿಸಿ ನೀರು ಸಂಗ್ರಹ

ಪ್ರಜಾವಾಣಿ ವಿಶೇಷ
Published 17 ಏಪ್ರಿಲ್ 2024, 5:24 IST
Last Updated 17 ಏಪ್ರಿಲ್ 2024, 5:24 IST
ಸಿರುಗುಪ್ಪ ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಸಮಾಜ ಸೇವಕ ಚೌಧರಿ ಹಾರುನ್ ಸಾಬ್‌ ಅವರು ಬಿಡಾಡಿ ದನಕರಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಅರವಟಿಗೆ ಮೂಲಕ ಕುಡಿಯುವ ನೀರು ಒದಗಿಸುತ್ತಿದ್ದಾರೆ
ಸಿರುಗುಪ್ಪ ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಸಮಾಜ ಸೇವಕ ಚೌಧರಿ ಹಾರುನ್ ಸಾಬ್‌ ಅವರು ಬಿಡಾಡಿ ದನಕರಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಅರವಟಿಗೆ ಮೂಲಕ ಕುಡಿಯುವ ನೀರು ಒದಗಿಸುತ್ತಿದ್ದಾರೆ   

ಸಿರುಗುಪ್ಪ: ಈ ವರ್ಷ ತೀವ್ರ ಬರಗಾಲ ಎದುರಾಗಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ನೀರು ಒದಗಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ ಚೌಧರಿ ಹಾರುನ್ ಸಾಬ್ ಅವರು.

ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಸಿಮೆಂಟ್ ತೊಟ್ಟಿ ನಿರ್ಮಿಸಿ ನೀರು ಸಂಗ್ರಹಿಸಿ ರಸ್ತೆಯ ಬದಿ ಇರುವ ಬಿಡಾಡಿ ದನಕರಗಳಿಗೆ, ಬೀದಿ ನಾಯಿಗಳಿಗೆ, ಪಕ್ಷಿ ಸಂಕುಲಗಳಿಗೆ ನೀರು ಒದಗಿಸುವ ಮೂಲಕ ಕುಡಿಯುವ ನೀರಿನ ಅರವಟಿಕೆ ಕೇಂದ್ರವನ್ನು ಪ್ರಾರಂಭಿಸಿ ಸಾಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ.

ಬೇಸಿಗೆ ಬಂತೆಂದರೆ ತಾಲ್ಲೂಕಿನ ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಜಲಮೂಲಗಳು, ಆವರಗಳು ಬರಿದಾಗಿ, ಜನಜಾನುವಾರು, ಪಕ್ಷಿ ಕೀಟಗಳು ಪರಿತಪಿಸುವುದು ಸಾಮಾನ್ಯ.

ADVERTISEMENT

ತಮ್ಮ ಸ್ವಂತ ಖರ್ಚಿನಿಂದ ಸಿಮೆಂಟಿನ ತೊಟ್ಟಿಗಳನ್ನು ಖರೀದಿ, ನಿತ್ಯ ₹300 ವ್ಯಯಿಸಿ ನೀರನ್ನು ಸಂಗ್ರಹಿಸಲಾಗುತ್ತದೆ. ಬಿದಿರಿನ ತಟ್ಟೆಯನ್ನು ನೀರಿನ ತೊಟ್ಟಿಯ ಸುತ್ತಾ ನಿರ್ಮಿಸಿರುವುದರಿಂದ ನೀರು ತಂಪಾಗಿಸಲು ಸಾಧ್ಯವಾಗುತ್ತದೆ.

ಈ ಬಾರಿ ಬಿರು ಬಿಸಿಲಿನಿಂದ ಅಣೆಕಟ್ಟೆಗಳಲ್ಲಿ, ಕೆರೆ ಕಟ್ಟೆಗಳಲ್ಲಿ ನೀರು ಇಲ್ಲ. ತಾಪಕ್ಕೆ ಪ್ರಾಣಿ, ಪಕ್ಷಿಗಳು ಪರಿತಪಿಸುತ್ತಿವೆ. ಆಹಾರ ಸಿಗದೆ ಪರದಾಡುತ್ತಿವೆ. ಅವುಗಳ ರಕ್ಷಣೆಗೆ ಎಲ್ಲರೂ ಮಾನವೀಯ ದೃಷ್ಟಿಯಿಂದ ಆದ್ಯತೆ ನೀಡಬೇಕು. ಇದರಿಂದ ಅವುಗಳ ಸಂಕುಲ ಉಳಿಯುವುದು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.

ಬಿಸಿಲ ಧಗೆಯಿಂದ ಬಾಯಾರಿ ಬಂದ ದನಕರುಗಳು, ನಾಯಿಗಳು, ಪಕ್ಷಿಗಳು ಇಲ್ಲಿ ಸ್ವಲ್ಪ ಹೊತ್ತು ತಂಗಿ, ಇಲ್ಲಿ ಇಡಲಾದ ತಂಪಾದ ಕುಡಿಯುವ ನೀರು ಸೇವಿಸಿ ದಾಹ ತಣಿಸಿಕೊಳ್ಳುತ್ತಿವೆ.

ಮನುಷ್ಯರು ವಿವಿಧ ಬಗೆಯ ತಂಪು ಪಾನಿಯಗಳ ಮೋರೆ ಹೋಗುತ್ತಾರೆ ಆದರೆ ಪ್ರಾಣಿ ಮತ್ತು ಪಕ್ಷಿಗಳ ಸಂಕಷ್ಟ ನಿವಾರಿಸಲು ಅಳಿಲು ಸೇವೆ ಕೈಗೊಂಡಿದ್ದೇವೆ

-ಚೌಧರಿ ಹಾರುನ್ ಸಾಬ್ ಸಾಮಾಜ ಸೇವಕ ಸಿರುಗುಪ್ಪ

ಬಿಡಾಡಿ ದನಕರುಗಳಿಗೆ ಮತ್ತು ಪಕ್ಷಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಮಾಜ ಸೇವೆಯು ಇಂದಿನ ಯುವಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಆದರ್ಶವಾಗಿದೆ

-ರಾಮಣ್ಣ ಪ್ಯಾಟೇ ಆಂಜನೇಯ ದೇವಸ್ಥಾನದ ಗೋ ಶಾಲೆಯ ನಿರ್ವಾಹಕ ಸಿರುಗುಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.