ADVERTISEMENT

ಶ್ರದ್ಧಾ, ಭಕ್ತಿಯಿಂದ ನಾಗರಪಂಚಮಿ ಆಚರಣೆ

ನಾಗದೇವತೆಗೆ ಪೂಜೆ ಸಲ್ಲಿಸಿ, ಹಾಲು ಸಮರ್ಪಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 10:41 IST
Last Updated 4 ಆಗಸ್ಟ್ 2019, 10:41 IST
ನಾಗರಪಂಚಮಿ ಪ್ರಯುಕ್ತ ಭಕ್ತರು ಭಾನುವಾರ ಹೊಸಪೇಟೆ ರಾಣಿಪೇಟೆಯ ನಾಗಪ್ಪನಿಗೆ ಹಾಲಿನ ಅಭಿಷೇಕ ಮಾಡಿದರು–ಪ್ರಜಾವಾಣಿ ಚಿತ್ರ
ನಾಗರಪಂಚಮಿ ಪ್ರಯುಕ್ತ ಭಕ್ತರು ಭಾನುವಾರ ಹೊಸಪೇಟೆ ರಾಣಿಪೇಟೆಯ ನಾಗಪ್ಪನಿಗೆ ಹಾಲಿನ ಅಭಿಷೇಕ ಮಾಡಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ನಾಗರಪಂಚಮಿಯನ್ನು ಭಾನುವಾರ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಶ್ರದ್ಧಾ, ಭಕ್ತಿಯಿಂದ ಜನ ಆಚರಿಸಿದರು.

ಜನ ಬೆಳಿಗ್ಗೆಯಿಂದಲೇ ನಾಗಪ್ಪನ ದೇವಸ್ಥಾನಕ್ಕೆ ಹೋಗಿ ಹೂ, ಕಾಯಿ ಸಮರ್ಪಿಸಿ, ಹಾಲಿನ ಅಭಿಷೇಕ ಮಾಡುತ್ತಿದ್ದ ದೃಶ್ಯ ಕಂಡು ಬಂತು. ನಗರದ ರಾಣಿಪೇಟೆಯ ನಾಗಪ್ಪನ ದೇಗುಲಕ್ಕೆ ವಿವಿಧ ಕಡೆಗಳಿಂದ ನೂರಾರು ಜನ ಬಂದು ಪೂಜೆ ಸಲ್ಲಿಸಿದರು. ಹೂವಿನಿಂದ ನಾಗಪ್ಪನಿಗೆ ವಿಶೇಷ ಅಲಂಕಾರ ಮಾಡಿ, ಬಳಿಕ ಕುಟುಂಬ ಸದಸ್ಯರೆಲ್ಲರೂ ಸೇರಿಕೊಂಡು ಹಾಲಿನ ಅಭಿಷೇಕ ಮಾಡಿದರು.

ಟಿ.ಬಿ. ಡ್ಯಾಂ ರಸ್ತೆ ನಾಗಪ್ಪನ ಕಟ್ಟೆ, ಸಂಡೂರು ರಸ್ತೆಯ ನಾಗದೇವತೆ ದೇವಸ್ಥಾನದಲ್ಲೂ ಜನಜಂಗುಳಿ ಕಂಡು ಬಂತು. ಜನ ಶ್ರದ್ಧಾ, ಭಕ್ತಿಯಿಂದ ನಾಗಪ್ಪನಿಗೆ ಹಾಲು ಸಮರ್ಪಿಸುತ್ತಿರುವುದು ಕಂಡು ಬಂತು.

ADVERTISEMENT

ತಾಲ್ಲೂಕಿನ ಬುಕ್ಕಸಾಗರದ ಏಳು ಹೆಡೆ ನಾಗಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಏಳುಹೆಡೆ ನಾಗಪ್ಪ, ತಾಯಿ ಮುದ್ದಮ್ಮ ದೇವಸ್ಥಾನಕ್ಕೆ ಭಕ್ತರು ಭೇಟಿ ಕೊಟ್ಟು ದರ್ಶನ ಪಡೆದರು. ದೋಷ ಪರಿಹಾರಕ್ಕಾಗಿ ಭಕ್ತರು ನಾಗಪ್ಪನ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು.

ಶ್ರೇಷ್ಠ ಮತ್ತು ಆಶ್ಲೇಷ ನಕ್ಷತ್ರದಲ್ಲಿ ಭಕ್ತರು ಪೂಜೆ ಸಲ್ಲಿಸುವುದು ವಿಶೇಷ. ನಾಗದೋಷ, ಕುಜದೋಷ, ರಾಹುಕೇತು, ಆಶ್ಲೇಷ ಬಲಿ, ಸಂತಾನಫಲ, ಕಂಕಣಭಾಗ್ಯದ ಹರಕೆ ತೀರಿಸಿದರು.

ಜಿಲ್ಲೆ ಸೇರಿದಂತೆ ಕೊಪ್ಪಳ, ರಾಯಚೂರು, ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ, ಆಂಧ್ರ ಪ್ರದೇಶದ ಗುಂತಕಲ್‌, ಅನಂತಪುರ, ಕರ್ನೂಲ್‌ನಿಂದ ಭಕ್ತರು ಬಂದಿದ್ದರು. ದಿನವಿಡೀ ಜಾತ್ರೆಯ ವಾತಾವರಣ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.