ಬಳ್ಳಾರಿ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕದ ನಿರ್ವಹಣೆಯಲ್ಲಿನ ಅಕ್ರಮದ ಚರ್ಚೆಯೇ ಜೋರಾಗಿ ನಡೆಯಿತು. ಇಡೀ ಸಭೆಯನ್ನು ಇದೇ ವಿಷಯ ಆವರಿಸಿತು.
ಇದೇ ವಿಚಾರವಾಗಿ ಪಾಲಿಕೆ ಸದಸ್ಯರು, ಮೇಯರ್, ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.
ಚರ್ಚೆ ವೇಳೆ ಮಾತು ಆರಂಭಿಸಿದ ಪಾಲಿಕೆ ಸದಸ್ಯ ಎಂ.ಪ್ರಭಂಜನಕುಮಾರ, ‘ನಗರದ ಹದ್ದಿನಗುಂಡು ಬಳಿ ಪಾಲಿಕೆ ವತಿಯಿಂದ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸಾಗಿದೆ. ಆದರೆ, ಕಳೆದ ಎರಡು ವರ್ಷದಿಂದ ಸಮರ್ಪಕವಾಗಿ ಘಟಕ ನಿರ್ವಹಣೆಯಾಗಿಲ್ಲ. ಅಲ್ಲದೆ, ಕೊಳಚೆ ನೀರನ್ನು ಶುದ್ಧಿಕರಿಸದೇ ಹೊರಗೆ ಬಿಡಲಾಗುತ್ತಿದ್ದು, ನಗರಕ್ಕೆ ಪೂರೈಕೆಯಾಗುತ್ತಿರುವ ತರಕಾರಿಯ ಪೈಕಿ ಶೇ. 40ರಷ್ಟನ್ನು ಇದೇ ನೀರಿನಿಂದಲೇ ಬೆಳೆಯಲಾಗುತ್ತಿದೆ. ಇದಲ್ಲದೆ, ಎರಡು ವರ್ಷದಿಂದ ನಿರ್ವಹಣೆ ನಡೆಸದ ಆಹಮಬಾದ್ ಕಂಪನಿಗೆ ₹2.11 ಕೋಟಿ ಹಣ ಪಾವತಿಸಲಾಗಿದೆ. ಇದರಲ್ಲಿ ಅಧಿಕಾರಿಗಳು ಅಕ್ರಮ ಎಸಗಿರುವುದು ಬಹಿರಂಗವಾಗಿದೆ. ಈ ಕುರಿತು ನಾನು ಲೋಕಾಯುಕ್ತಕ್ಕೆ ದೂರು ನೀಡುವೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಇದಕ್ಕೆ ವಿರೋಧ ಪಕ್ಷದ ನಾಯಕ ಇಬ್ರಾಹಿಂ ಬಾಬು ಅವರು ಧ್ವನಿಗೂಡಿಸಿದರು. ‘ಜನಪ್ರತಿನಿಧಿಗಳಿಗೆ ಹಣ ಪಾವತಿ ಅಧಿಕಾರ ಇರುವುದಿಲ್ಲ. ಅಧಿಕಾರಿಗಳಿಗೆ ಮಾತ್ರ ಆ ಅಧಿಕಾರ ಇದೆ. ಆದರೆ, ಅಧಿಕಾರಿಗಳೇ ಹೀಗೆ ಮಾಡಿದರೆ ನಮ್ಮನ್ನು ದೇವರೇ ಕಾಪಾಡಬೇಕು. ಪ್ರಭಂಜನ್ ಈ ವಿಚಾರ ಪ್ರಸ್ತಾಪ ಮಡದೇ ಹೋಗಿದಿದ್ದರೆ ವಿಚಾರ ಸತ್ತು ಹೋಗುತ್ತಿತ್ತು’ ಎಂದರು.
ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ನಿರ್ವಹಣೆಯಲ್ಲಿ ಲೋಪವಾಗಿರುವ ಬಗ್ಗೆ, ₹2.11 ಕೋಟಿ ಅಕ್ರಮವಾಗಿರುವ ಆರೋಪದ ತನಿಖೆಗೆ ಸಮಿತಿ ರಚಿಸಿ ವರದಿ ಪಡೆಯಲಾಗುವುದು. ಸಮಿತಿಗೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರನ್ನು ಹೆಸರಿಸಲಾಗುವುದು. ನಿಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಮೇಯರ್, ಸದಸ್ಯ ವಾಗ್ವಾದ: ಕೊಳಚೆ ನೀರು ಸಂಸ್ಕ್ರರಣ ಘಟಕ ಅಕ್ರಮದ ಬಗ್ಗೆ ಸದಸ್ಯ ಎಂ.ಪ್ರಭಂಜನಕುಮಾರ ಹಾಗೂ ಮೇಯರ್ ಮುಲ್ಲಂಗಿ ನಂದೀಶ್ ನಡುವೆ ವಾಗ್ವಾದ ನಡೆಯಿತು. ಮೇಯರ್ ಅನುಮತಿಯಂತೆ ಬೇರೆ ವಿಷಯ ಪ್ರಸ್ತಾಪಿಸಲು ಅಧಿಕಾರಿ ಮುಂದಾದಾಗ ಅಧಿಕಾರಿ ಹಾಗೂ ಮೇಯರ್ ಮೇಲೆ ಪ್ರಭಂಜನ ಕೋಪಗೊಂಡರು.
ಮುಂಡ್ಲೂರು ರಾಮಪ್ಪ ಹೆಸರು: ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಗೆ ಮಾಜಿ ಸಚಿವ ‘ಮುಂಡ್ಲೂರು ರಾಮಪ್ಪ ರಸ್ತೆ’ ಎಂದು ನಾಮಕರಣ ಮಾಡಲು ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು.
ಶಾಸಕರಾದ ಬಿ.ನಾಗೇಂದ್ರ, ನಾರಾ ಭರತರೆಡ್ಡಿ, ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸೀರ್ ಹುಸೇನ್, ಉಪ ಮೇಯರ್ ಡಿ.ಸುಕುಂ, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಇದ್ದರು.
ಸಮಯ ಪ್ರಜ್ಞೆ ಎಲ್ಲಿ?
ಸಭೆ 11ಕ್ಕೆ ನಿಗದಿಯಾಗಿತ್ತು. ಆದರೆ, ಸದಸ್ಯರು ತಡವಾಗಿ ಹಾಜರಾದರು. ಹೀಗಾಗಿ ಒಂದು ಗಂಟೆ ತಡವಾಗಿ ಸಭೆ ಆರಂಭವಾಯಿತು. ಶಾಸಕರಾದ ಬಿ.ನಾಗೇಂದ್ರ, ನಾರಾಭರತ ರೆಡ್ಡಿ, ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸೀರ್ ಹುಸೇನ್ ಸಭೆಗೆ ಬಂದಿದ್ದೇ ಮಧ್ಯಾಹ್ನಕ್ಕೆ. ಆ ಹೊತ್ತಿಗಾಗಲೇ ಪ್ರಮುಖ ಚರ್ಚೆಗಳು ನಡೆದು ಹೋಗಿದ್ದವು.
ಹೆಣ ಬಿದ್ರೂ ಕೇಳಲ್ಲ: ಆಕ್ರೋಶ
ನಗರಕ್ಕೆ ಕುಡಿಯುವ ನೀರು ಪೂರೈಸುವ ಅಲ್ಲಿಪುರ ಕೆರೆಯಲ್ಲಿ ಬಿದ್ದು ವ್ಯಕ್ತಿಯೊಬ್ಬರು ಇತ್ತೀಚೆಗೆ ಮೃತಪಟ್ಟಿದ್ದರು. ದೇಹವನ್ನು ಹೊರೆತೆಗೆಯಿರಿ ಎಂದು ಹೇಳಿದರೆ ಅದು ನಮ್ಮ ಕೆಲಸ ಅಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಸರ್ಕಾರಿ ಹುದ್ದೆಯಲ್ಲಿರಲು ಇವರೆಲ್ಲ ಅನರ್ಹರು ಎಂದು ಪಾಲಿಕೆಯ ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ನೂರ್ ಮೊಹಮದ್ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಸಮಜಾಯಿಷಿ ನೀಡಿದ ಅಧಿಕಾರಿಗಳು, ವಿಷಯ ತಿಳಿದ ಕೂಡಲೇ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಯಿತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.