ADVERTISEMENT

ಅಲೆಮಾರಿಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ರಚಿಸಿ

ಡಿ.ಸಿ. ಕಚೇರಿ ಎದುರು ಗುರು ನುಲಿಚಂದಯ್ಯ ಅಖಿಲ ಕರ್ನಾಟಕ ಕೊರಚ ಮಹಾಸಂಘದ ಪದಾಧಿಕಾರಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 14:49 IST
Last Updated 6 ಫೆಬ್ರುವರಿ 2019, 14:49 IST
ಬಳ್ಳಾರಿಯಲ್ಲಿ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರು ನುಲಿಚಂದಯ್ಯ ಅಖಿಲ ಕರ್ನಾಟಕ ಕೊರಚ ಮಹಾಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಬಳ್ಳಾರಿಯಲ್ಲಿ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರು ನುಲಿಚಂದಯ್ಯ ಅಖಿಲ ಕರ್ನಾಟಕ ಕೊರಚ ಮಹಾಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಬಳ್ಳಾರಿ:ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿಶ್ರೀ ಗುರು ನುಲಿಚಂದಯ್ಯ ಅಖಿಲ ಕರ್ನಾಟಕ ಕೊರಚ ಮಹಾಸಂಘದ ಪದಾಧಿಕಾರಿಗಳು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇದಕ್ಕೂ ಮುಂಚೆ ಇಲ್ಲಿನ ಗಡಿಗಿ ಚನ್ನಪ್ಪ ವೃತ್ತದಿಂದ ಮೆರವಣಿಗೆ ಮೂಲಕ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.

‘ಪರಿಶಿಷ್ಟ ಜಾತಿ, ಪಂಗಡದ ಅಲೆಮಾರಿ ಮತ್ತು ಅರೆಅಲೆಮಾರಿ, ಸೂಕ್ಷ್ಮ, ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ₹ 500 ಕೋಟಿ ಅನುದಾನ ಮೀಸಲಿಡಬೇಕು. ಅಲೆಮಾರಿ, ಅರೆ ಅಲೆಮಾರಿ ಕೋಶಕ್ಕೆ ಆಯೋಗವನ್ನು ರಚಿಸಬೇಕು’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೊಟ್ರೇಶ್ ಆಗ್ರಹಿಸಿದರು.

ADVERTISEMENT

‘ಸಮುದಾಯದ ಅಭಿವೃದ್ಧಿಗೆ ಈಗಾಗಲೇ ಕೋಶವನ್ನು ರಚಿಸಿದ್ದರೂ ಹೆಚ್ಚಿನ ಅಧಿಕಾರವಿಲ್ಲದೇ ಸಮಗ್ರ ಅಭಿವೃದ್ಧಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರತ್ಯೇಕ ಆಯೋಗ ರಚಿಸಬೇಕು. ಅಲ್ಲದೇ ಸಮುದಾಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪೂರಕ ಅಧ್ಯಯನಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಜನಾಂಗದ ಅಭಿವೃದ್ಧಿಗೆ ತಾಲ್ಲೂಕು ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಿಸಿಕೊಡಬೇಕು. ತಳ ಸಮುದಾಯಗಳಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಸೌಕರ್ಯ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸಮುದಾಯವು ರಾಜ್ಯದಲ್ಲಿ 2.50 ಲಕ್ಷ ಜನಸಂಖ್ಯೆಹೊಂದಿದ್ದರೂ 2011ರ ವರದಿ ಪ್ರಕಾರ 50 ಸಾವಿರ ಜನಸಂಖ್ಯೆ ಇರುವುದಾಗಿ ಸರ್ಕಾರಕ್ಕೆ ವರದಿ ನೀಡಿರುವುದು ಸರಿಯಲ್ಲ. ಸರಿಯಾದ ಕ್ರಮದಲ್ಲಿ ಜನಗಣತಿ ಮಾಡಿ ರಾಜ್ಯ ಸರ್ಕಾರ ವರದಿ ಪಡೆದುಕೊಳ್ಳಬೇಕಿದೆ’ ಎಂದು ಒತ್ತಾಯಿಸಿದರು.

ಸಂಘಟನೆಯ ಖಜಾಂಚಿ ಕೆ.ಷಣ್ಮುಖ, ಕಾರ್ಯದರ್ಶಿ ಕೆ.ರಮೇಶ್, ಜಿಲ್ಲಾ ಸಹಕಾರ್ಯದರ್ಶಿ ಮಂಜು, ಹನುಮಂತಪ್ಪ, ರಂಜಿತ್ ಕುಮಾರ್, ಕರಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.