ADVERTISEMENT

ಹಳ್ಳ ದಾಟಿ ಶಾಲೆಗೆ ತಲುಪಲು ಹರಸಾಹಸ

ವಿಜಯನಗರ ಬಡಾವಣೆ ಸಹಿಪ್ರಾ ಶಾಲೆ: ತೊಂದರೆ ಅನುಭವಿಸುವ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 5:51 IST
Last Updated 7 ಆಗಸ್ಟ್ 2025, 5:51 IST
ಹೂವಿನಹಡಗಲಿ ಪಟ್ಟಣದ ವಿಜಯನಗರ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರತಿದಿನ ಹಳ್ಳ ದಾಟಿಕೊಂಡು ಶಾಲೆಗೆ ತಲುಪುತ್ತಾರೆ
ಹೂವಿನಹಡಗಲಿ ಪಟ್ಟಣದ ವಿಜಯನಗರ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರತಿದಿನ ಹಳ್ಳ ದಾಟಿಕೊಂಡು ಶಾಲೆಗೆ ತಲುಪುತ್ತಾರೆ   

ಹೂವಿನಹಡಗಲಿ: ಪಟ್ಟಣದ ವಿಜಯನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಲು ಸೂಕ್ತ ದಾರಿಯ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ.

ಹಳ್ಳದ ದಂಡೆಯ ಮೇಲಿರುವ ಈ ಸರ್ಕಾರಿ ಶಾಲೆಗೆ ರಾಜೀವ್ ನಗರ, ನಜೀರ್ ನಗರದ ವಿದ್ಯಾರ್ಥಿಗಳು ಹರಸಾಹಸಪಟ್ಟು ಹಳ್ಳ ದಾಟಿಕೊಂಡೇ ಹೋಗಬೇಕಿದೆ. ಸಣ್ಣ ಮಕ್ಕಳು ಯಾವಾಗಲೂ ಹರಿಯುವ ಚರಂಡಿ ತ್ಯಾಜ್ಯ, ಕಶ್ಮಲ, ರೊಜ್ಜು ತುಳಿದುಕೊಂಡೇ ಶಾಲೆಗೆ ತಲುಪುವ ಅನಿವಾರ್ಯತೆ ನಿರ್ಮಾಣವಾಗಿದೆ.

ಮಳೆಗಾಲದಲ್ಲಂತೂ ಸಂಕಷ್ಟ ಹೇಳತೀರದಾಗಿದೆ. ಹಳ್ಳ ರಭಸವಾಗಿ ಹರಿಯುವುದರಿಂದ ಸಣ್ಣ ಮಕ್ಕಳು ಕಿಲೋ ಮೀಟರ್ ಸುತ್ತುವರಿದು ರಾಜೀವ್ ನಗರದ ಕಿರು ಸೇತುವೆ ಮೇಲಿಂದ ಮನೆಗಳನ್ನು ತಲುಪಬೇಕಿದೆ.

ADVERTISEMENT

‘ಶಾಲಾ ವಿದ್ಯಾರ್ಥಿಗಳು, ನಾಗರಿಕರ ಅನುಕೂಲಕ್ಕಾಗಿ ಈ ಹಳ್ಳಕ್ಕೆ ಕಿರು ಸೇತುವೆ ನಿರ್ಮಿಸಿಕೊಡುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.

ಈ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 73 ವಿದ್ಯಾರ್ಥಿಗಳಿದ್ದು, ಮುಖ್ಯಶಿಕ್ಷಕರು ಸೇರಿ ನಾಲ್ಕು ಜನ ಶಿಕ್ಷಕರಿದ್ದಾರೆ.

ಕೂಲಿ ಕಾರ್ಮಿಕರು, ಹಮಾಲರು, ಬಡವರ ಮಕ್ಕಳೇ ಈ ಶಾಲೆಗೆ ಪ್ರವೇಶ ಪಡೆಯುತ್ತಾರೆ. ಹಳ್ಳ ದಾಟುವ ಸಮಸ್ಯೆ, ಸುಗಮ ದಾರಿ ಇಲ್ಲದ ಕಾರಣಕ್ಕೆ ಪೋಷಕರು ಈ ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

‘ಕೆಲ ದಿನಗಳ ಹಿಂದೆ ಶೆಕ್ಷಾವಲಿ ಎಂಬ ವಿದ್ಯಾರ್ಥಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾವೆಲ್ಲ ಸೇರಿ ಆತನನ್ನು ರಕ್ಷಿಸಿದೆವು. ದಿನವೂ ಚರಂಡಿ ರೊಜ್ಜು ತುಳಿದುಕೊಂಡು ಶಾಲೆಗೆ ಹೋಗುವುದು ಕಿರಿಕಿರಿ ಎನಿಸುತ್ತಿದೆ’ ಎಂದು 6ನೇ ತರಗತಿ ವಿದ್ಯಾರ್ಥಿ ಚಂದ್ರು ಹೇಳಿದರು.

ಹೂವಿನಹಡಗಲಿ ಪಟ್ಟಣದ ವಿಜಯನಗರ ಬಡಾವಣೆ ಸಹಿಪ್ರಾ ಶಾಲೆಯ ವಿದ್ಯಾರ್ಥಿಗಳು ಹಳ್ಳ ದಾಟಿಕೊಂಡು ಹೋಗುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.