ADVERTISEMENT

ಕೊನೆಗೂ ಹುಲಿ, ಸಿಂಹ ಬಯಲಿಗೆ

ವಾಜಪೇಯಿ ಪಾರ್ಕ್‌ನಲ್ಲಿ ಮೊಸಳೆ ಉದ್ಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 12:33 IST
Last Updated 22 ಆಗಸ್ಟ್ 2019, 12:33 IST
ಪರಿಸರ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್‌ ದವೆ ಅವರು ಮೊಸಳೆ ಉದ್ಯಾನ ಉದ್ಘಾಟಿಸಿದರು
ಪರಿಸರ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್‌ ದವೆ ಅವರು ಮೊಸಳೆ ಉದ್ಯಾನ ಉದ್ಘಾಟಿಸಿದರು   

ಹೊಸಪೇಟೆ: ತಾಲ್ಲೂಕಿನ ಬಿಳಿಕಲ್‌ ಸಂರಕ್ಷಿತ ಅರಣ್ಯದಲ್ಲಿನ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ಕೊಠಡಿಯೊಳಗೆ ಇಡಲಾಗಿದ್ದ ತಲಾ ಒಂದು ಹುಲಿ, ಸಿಂಹವನ್ನು ಗುರುವಾರ ಸಫಾರಿಗೆ ಮೀಸಲಾಗಿರುವ ಬಯಲಿಗೆ ಬಿಡಲಾಯಿತು.

ಸಫಾರಿ ಸ್ಥಳದಲ್ಲಿ ಮುಳ್ಳಿನ ಕಂಟಿ ತೆರವುಗೊಳಿಸುವ ಕೆಲಸ ಪೂರ್ಣಗೊಂಡಿದೆ. ಜತೆಗೆಹುಲಿ, ಸಿಂಹಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿರುವುದರಿಂದ ಅವುಗಳನ್ನು, ಅವುಗಳಿಗೆ ಮೀಸಲಿಟ್ಟಿರುವ ಪ್ರತ್ಯೇಕ ಜಾಗದಲ್ಲಿ ಬಿಡಲಾಯಿತು.

ಪರಿಸರ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್‌ ದವೆ, ಹಸಿರು ನಿಶಾನೆ ತೋರಿಸಿ ಹುಲಿಯನ್ನು ಅದರ ಮನೆಯಿಂದ ಹೊರ ಬಿಟ್ಟರು. ನಂತರ ಸಿಂಹ ಮನೆ ಪರಿಶೀಲನೆ ನಡೆಸಿದರು. ಇಂದಿರಾ ಪ್ರಿಯದರ್ಶಿನಿ ಉದ್ಯಾನಕ್ಕೆ ಭೇಟಿ ಕೊಟ್ಟು, ಬಳಿಕ ಗೋಪುರಕ್ಕೆ ತೆರಳಿ ಅಲ್ಲಿಂದ ಇಡೀ ಉದ್ಯಾನವನ್ನು ಕಣ್ತುಂಬಿಕೊಂಡರು.

ADVERTISEMENT

ಇದಾದ ಬಳಿಕ ಮೊಸಳೆ ಉದ್ಯಾನವನ್ನು ಉದ್ಘಾಟಿಸಿದರು. ‘ಜೈವಿಕ ಉದ್ಯಾನದಲ್ಲಿ ಎಲ್ಲ ಕೆಲಸಗಳು ಅಚ್ಚುಕಟ್ಟಾಗಿ ನಡೆದಿವೆ. ಬರುವ ದಿನಗಳಲ್ಲಿ ದೊಡ್ಡ ಪ್ರವಾಸಿ ತಾಣವಾಗಿ ಇದು ಬೆಳೆಯಲಿದೆ’ ಎಂದು ಸಂದೀಪ್‌ ದವೆ ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್‌ ರಿತು ಮಾತನಾಡಿ, ‘ಸದ್ಯ ತಲಾ ಒಂದು ಹುಲಿ, ಸಿಂಹವನ್ನು ಅವುಗಳ ಸಫಾರಿಗೆ ನಿಗದಿಪಡಿಸಿರುವ ಬಯಲಿನಲ್ಲಿ ಬಿಡಲಾಗಿದ್ದು, ನಿತ್ಯ ಒಂದೊಂದು ಹೊರಬಿಡಲಾಗುವುದು. ಈಗಾಗಲೇ ಅವುಗಳು ಸ್ಥಳೀಯ ಪರಿಸರಕ್ಕೆ ಹೊಂದಿಕೊಂಡಿವೆ’ ಎಂದು ತಿಳಿಸಿದರು.

‘ಬಳ್ಳಾರಿ ಮೃಗಾಲಯದಿಂದ ನಾಲ್ಕು ಮೊಸಳೆಗಳನ್ನು ತಂದು ಬಿಡಲಾಗಿದ್ದು, ಇನ್ನುಳಿದ ನಾಲ್ಕು ಮೊಸಳೆಗಳನ್ನು ವಾರದೊಳಗೆ ತರಲಾಗುವುದು. ಅದಾದ ಬಳಿಕ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು’ ಎಂದು ವಿವರಿಸಿದರು.

ಎ.ಸಿ.ಎಫ್‌. ರಂಗಸ್ವಾಮಿ, ಮೃಗಾಲಯದ ಪ್ರಾಧಿಕಾರದ ಸದಸ್ಯ ರವಿ, ಆರ್‌.ಎಫ್‌.ಒ. ರಮೇಶ, ಎ.ಆರ್‌.ಎಫ್‌.ಒ. ಪರಮೇಶ್ವರಯ್ಯ ಇದ್ದರು. ಸಫಾರಿ ಆರಂಭಗೊಂಡ ಎರಡು ತಿಂಗಳ ನಂತರ ಹುಲಿ, ಸಿಂಹಗಳನ್ನು ಈಗ ಹೊರಗೆ ಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.