ADVERTISEMENT

ಮಳೆ: ಹಸಿರಿನಿಂದ ಕಂಗೊಳಿಸಿದ ಸಂಡೂರು

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 5:39 IST
Last Updated 20 ಜೂನ್ 2025, 5:39 IST
   

ಸಂಡೂರು: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆಯು ಅವಧಿಗೂ ಮುನ್ನವೇ ಅಬ್ಬರಿಸಿದ್ದರಿಂದ ನಾರಿಹಳ್ಳ ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗಿ ಮೈದುಂಬಿಕೊಂಡಿದೆ. ದೋಣಿಮಲೈ, ಸ್ವಾಮಿಮಲೈ, ರಾಮನಮಲೈ, ತಿಮ್ಮಪ್ಪನಗುಡ್ಡ ಸೇರಿದಂತೆ ಹಲವು ಬೆಟ್ಟಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಚಾರಣಿಗ, ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿವೆ.

ತಾಲ್ಲೂಕಿನ ಚೋರುನೂರು, ತೋರಣಗಲ್ಲು, ಸಂಡೂರು ಹೋಬಳಿಯ ಗ್ರಾಮಗಳಲ್ಲಿನ ಕೆರೆಗಳಿಗೆ ಆಪಾರ ಪ್ರಮಾಣದಲ್ಲಿ ಮಳೆ ನೀರು ಹರಿದು ಬಂದಿವೆ.

ಕೆಲ ಕೆರೆಗಳು ಕೋಡಿ ಬಿದ್ದಿದ್ದು, ಬಿಸಲೂರು ಮಲೆನಾಡಿನ ಮಾನಸ ಸರೋವರ ಎಂದೇ ಖ್ಯಾತಿ ಪಡೆದ ನಾರಿಹಳ್ಳ ಜಲಾಶಯವು ತುಂಬಿ ತುಳುಕುತ್ತಿದ್ದು, ನೋಡುಗರ ಕಣ್ಮನ ಸೆಳೆಯುವುದಲ್ಲದೆ ಅದರ ಸೌಂದರ್ಯವನ್ನು ಸವಿಯುವುದು ಅವರ್ಣನೀಯ.

ADVERTISEMENT

ದಕ್ಷಿಣ ವಲಯದ ಸ್ವಾಮಿಮಲೈ ಅರಣ್ಯ ಕ್ಷೇತ್ರದಲ್ಲಿನ ‘ಸಿ ಸಂಡೂರು ಇನ್ ಸೆಪ್ಟೆಂಬರ್’ ವಿವ್ ಪಾಂಯಿಟ್, ದೋಣಿಮಲೈ ಅರಣ್ಯ ವ್ಯಾಪ್ತಿಯಲ್ಲಿನ ನಾರಿಹಳ್ಳ ಜಲಾಶಯ, ಉಬ್ಬಳಗಂಡಿ ಗ್ರಾಮದ ಯಾಣದ ಶಿಲಾ ಶಿಖರಗಳು, ಕುಮಾರಸ್ವಾಮಿ ದೇವಸ್ಥಾನ, ಭೀಮತೀರ್ಥ, ಹರಿಶಂಕರತೀರ್ಥ, ನವಿಲುತೀರ್ಥ, ಭೈರವತೀರ್ಥ, ರಾಮಘಡದ ರಾಮನ ಮಲೈ ಬೆಟ್ಟದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಲು ಅವಳಿ ಜಿಲ್ಲೆಗಳ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಕಳೆದ ವರ್ಷ ಅರಣ್ಯ ಇಲಾಖೆಯು ‘ಸಂಡೂರು ಅನ್ವೇಷಣೆ’ ಎನ್ನುವ ನೂತನ ಯೋಜನೆಯನ್ನು ಜಾರಿ ಮಾಡಿ ಭೀಮತೀರ್ಥ, ಉಬ್ಬಳಗಂಡಿಯ ಯಾಣ, ಕುಮಾರಸ್ವಾಮಿ ದೇವಸ್ಥಾನ, ರಾಮಘಡ ಸೇರಿದಂತೆ ಒಟ್ಟು ನಾಲ್ಕು ಚಾರಣ ಪಥಗಳನ್ನು ಪರಿಚಾಯಿಸಿದ್ದರಿಂದ ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳ ಚಾರಣಿಗರು ಬೆಟ್ಟ ಗುಡ್ಡಗಳಲ್ಲಿನ ಸುಂದರ ಪ್ರಕೃತಿಯನ್ನು ಆಸ್ವಾದಿಸಲು ಬರುವುದು ಸಾಮಾನ್ಯವಾಗಿದೆ.

ಉಬ್ಬಳಗಂಡಿ ಗ್ರಾಮದಲ್ಲಿ ಸುಮಾರು 180 ಅಡಿಗಳಿಗೂ ಹೆಚ್ಚು ಎತ್ತರದ ನಸುಗೆಂಪು ಬಣ್ಣದ ಎರಡು ಶಿಲಾ ಬೆಟ್ಟಗಳನ್ನು ಹೊಂದಿರುವ ಈ ಸಂಡೂರಿನ ಯಾಣವು ಪ್ರಸ್ತುತ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಸೇರಿದಂತೆ ಗಡಿ ರಾಜ್ಯಗಳ ಜನರ ನೆಚ್ಚಿನ ಟ್ರೆಕಿಂಗ್, ನಿಸರ್ಗ ತಾಣವಾಗಿ ಮಾರ್ಪಟ್ಟಿದೆ.

ಇಲ್ಲಿನ ಅರಣ್ಯವು ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿಗಳಷ್ಟು ಮೇಲ್ಮಟ್ಟದಲ್ಲಿದ್ದು, ಅರಣ್ಯ ಪ್ರದೇಶವು ಸುಮಾರು 32,091 ಹೆಕ್ಟೇರ್ ಹೊಂದಿದೆ.

ಈ ದಟ್ಟ ಕಾನನದಲ್ಲಿ ಶ್ರೀಗಂಧ, ರಕ್ತಚಂದನ, ಬೇವು, ಹುಣಸೆ, ಹೊನ್ನೆ, ಬೀಟೆ, ಸಿಲ್ವರ್, ಓಕ್, ತಬಸಿ, ತೇಗ, ಆಸಿನಾ, ನೇರಳೆ, ನೆಲ್ಲಿ, ಕಾಡು ಬದಾಮಿ, ಬಿದಿರು, ಕಕ್ಕೆ ಇತರೆ ಜಾತಿಯ ಸಸ್ಯಗಳು ಹೆರಳವಾಗಿವೆ.

ಆಕರ್ಷಣೀಯ ನೀಲಕುರಂಜಿ ಹೂ

ನಿಸರ್ಗದ ಬೆಟ್ಟಗಳ ಸಾಲಿನಲ್ಲಿ ಅಪರೂಪದ ನೀಲಿ ಮಣಿಯಂಥ ನೀಲಕುರಂಜಿ ಹೂ ಕಾಡಿನಲ್ಲಿ ಅರಳವುದರ ಮೂಲಕ ನಿಸರ್ಗದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಪೌರಾಣಿಕ ಹಿನ್ನೆಲೆಯುಳ್ಳ 8ನೇ ಶತಮಾನದಲ್ಲಿ ರಾಷ್ಟ್ರಕೂಟ, ಬಾದಾಮಿ ಚಾಲುಕ್ಯರ ಕಾಲದಲ್ಲಿ ಸುಂದರ ಕೆತ್ತನೆಯ ನಯನಮನೋಹರವಾಗಿ ನಿರ್ಮಿತವಾದ, 1200 ವರ್ಷಗಳ ಇತಿಹಾಸ ಹೊಂದಿರುವ ಕುಮಾರಸ್ವಾಮಿ, ಪಾರ್ವತಿ, ನವಿಲುಸ್ವಾಮಿ, ನಾಗನಾತೀಶ್ವರ ದೇವಾಲಯಗಳು ಸಂಡೂರಿನ ಜನರ ಆರಾಧ್ಯ ದೈವವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.