ADVERTISEMENT

ಹಸಿರು ಸೊಪ್ಪಿನಿಂದ ಹಸನಾದ ಬದುಕು

ತುಂಡುಭೂಮಿಯಲ್ಲಿ ಲಕ್ಷಾಂತರ ಆದಾಯ ಗಳಿಕೆ

ಕೆ.ಸೋಮಶೇಖರ
Published 11 ಮಾರ್ಚ್ 2019, 19:45 IST
Last Updated 11 ಮಾರ್ಚ್ 2019, 19:45 IST
ಸೊಪ್ಪು ಕಟಾವು ಮಾಡುತ್ತಿರುವ ಅಜ್ಜಪ್ಪ
ಸೊಪ್ಪು ಕಟಾವು ಮಾಡುತ್ತಿರುವ ಅಜ್ಜಪ್ಪ   

ಹೂವಿನಹಡಗಲಿ: ಒಂದುವರೆ ಎಕರೆ ಭೂಮಿಯಲ್ಲಿ ತರಹೇವಾರಿ ಸೊಪ್ಪು ಬೆಳೆದು ಯಶಸ್ಸಿನ ಹಾದಿ ಕಂಡುಕೊಂಡಿದ್ದಾರೆ ಪಟ್ಟಣದ ಯುವ ರೈತ ಕೊಯಿಲಾರಗಟ್ಟಿ ಅಜ್ಜಪ್ಪ.

ಪಟ್ಟಣದ ಚರ್ಚ್‌ ಹಿಂಭಾಗದಲ್ಲಿ ಇವರು ನೀರಾವರಿ ಸೌಲಭ್ಯವಿರುವ ಜಮೀನನ್ನು ಗುತ್ತಿಗೆ ಪಡೆದು ದಶಕದಿಂದ ‘ಸೊಪ್ಪಿನ ಕೃಷಿ’ ಮಾಡುತ್ತಿದ್ದಾರೆ. ಹತ್ತಾರು ಎಕರೆ ಕೃಷಿ ಹಿಡುವಳಿಯಲ್ಲಿ ಸಾಧಿಸಲಾಗದ್ದನ್ನು ಇವರು ತುಂಡು ಭೂಮಿಯಲ್ಲಿ ಹಸಿರು ಸೊಪ್ಪು ಬೆಳೆದು ಸಾಧಿಸಿ ತೋರಿಸಿದ್ದಾರೆ.

ವರ್ಷದ 12 ತಿಂಗಳೂ ಇವರ ಹೊಲದಲ್ಲಿ ಹಸಿರು ಸೊಪ್ಪು ನಳನಳಿಸುತ್ತದೆ. ಪಾಲಕ, ಹುಳಿಚಿಕ್ಕ, ರಾಜಗಿರಿ, ಕೊತ್ತಂಬರಿ, ಮೂಲಂಗಿ, ಪುದಿನಾ ಸೊಪ್ಪುಗಳನ್ನು ಬೆಳೆದು ಹೂವಿನಹಡಗಲಿ, ಮುಂಡರಗಿ, ಹೊಸಪೇಟೆ, ಗದಗ ಮಾರುಕಟ್ಟೆಗಳಿಗೆ ಕಳಿಸಿಕೊಡುತ್ತಿದ್ದಾರೆ. ಪಟ್ಟಣದ ವ್ಯಾಪಾರಿಗಳು ತೋಟಕ್ಕೆ ಬಂದು ತಾಜಾ ಸೊಪ್ಪು ಕೊಂಡೊಯ್ಯುತ್ತಾರೆ. ಇಲ್ಲಿ ಬೆಳೆದ ವಿಶಿಷ್ಟ ಪರಿಮಳದ ಪುದೀನಾಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ.

ADVERTISEMENT

ಹದಗೊಳಿಸಿದ ಮಡಿಗಳಲ್ಲಿ ಬೀಜ ಸುರಿದ ತಿಂಗಳಲ್ಲೇ ಸೊಪ್ಪು ಕಟಾವಿಗೆ ಬರುತ್ತದೆ. ಎರಡು ತಿಂಗಳು ನಿರಂತರ ಸೊಪ್ಪು ಕತ್ತರಿಸಿ ಮಾರುಕಟ್ಟೆಗೆ ಕಳಿಸುತ್ತಾರೆ. ಒಂದು ಮಡಿಯಲ್ಲಿ ಸೊಪ್ಪು ಹಾಳಾಗುವ ಮುನ್ನವೇ ಮತ್ತೊಂದು ಮಡಿ ಸಿದ್ಧವಾಗುವಂತೆ ಜಾಣ್ಮೆಯಿಂದ ಕೃಷಿ ಮಾಡುತ್ತಿದ್ದಾರೆ. ವರ್ಷದ ಉದ್ದಕ್ಕೂ ವಿವಿಧ ಸೊಪ್ಪುಗಳನ್ನು ಪೂರೈಕೆ ಮಾಡುವುದಾಗಿ ತರಕಾರಿ ವ್ಯಾಪಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಪ್ರತಿ ದಿನ 500ರಿಂದ 600 ಸೊಪ್ಪಿನ ಕಂತೆಗಳನ್ನು ಸಿದ್ಧಪಡಿಸಿ ತಲಾ ಕಂತೆಗೆ ₹3 ರಂತೆ ದರ ನಿಗದಿಗೊಳಿಸಿ ಮಾರುಕಟ್ಟೆಗೆ ಕಳಿಸುತ್ತಾರೆ. ಪ್ರತಿದಿನವೂ ಸಾವಿರಾರು ರೂಪಾಯಿ ಎಣಿಸುತ್ತಿದ್ದಾರೆ. ಸೊಪ್ಪು ಕಟಾವು ಮಾಡಿ ಕಂತೆ ಕಟ್ಟಲು ಇಬ್ಬರು ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ.

ಇವರ ತಂದೆ ಹನುಮಂತಪ್ಪ ಸೊಪ್ಪು, ತರಕಾರಿ ಬೆಳೆದು ಮಾರಾಟ ಮಾಡುತ್ತಿದ್ದರು. ಅವರು ಕಾಲವಾದ ಬಳಿಕ ಅಜ್ಜಪ್ಪ ತಂದೆಯ ಕಾಯಕವನ್ನೇ ಮುಂದುವರೆಸಿದ್ದಾರೆ. ಇವರ ಸಹೋದರರಾದ ನಾಗರಾಜ, ಪರಶುರಾಮ ಕೂಡ ಪ್ರತ್ಯೇಕವಾಗಿ ಹಸಿರು ಸೊಪ್ಪು ಬೆಳೆದು ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ.

‘ನೀರಾವರಿ ಸೌಲಭ್ಯವಿರುವ ಒಂದುವರೆ ಎಕರೆ ಜಮೀನನ್ನು ವಾರ್ಷಿಕ ₹40 ಸಾವಿರಕ್ಕೆ ಗುತ್ತಿಗೆ ಪಡೆದಿದ್ದೇನೆ. ನಿತ್ಯ ಸೊಪ್ಪಿನ ಕಂತೆಗಳನ್ನು ಮಾರುಕಟ್ಟೆಗೆ ಕಳಿಸುವುದರಿಂದ ಖರ್ಚು ಕಳೆದು ಕನಿಷ್ಠ ₹1,000 ಲಾಭ ಉಳಿಯುತ್ತದೆ. ದಶಕದಿಂದಲೂ ತಾವು ಅಳವಡಿಸಿಕೊಂಡಿರುವ ‘ಸೊಪ್ಪಿನ ಕೃಷಿ’ ಕೈ ಹಿಡಿದಿದೆ. ಇದರಲ್ಲಿ ಬಂದ ಲಾಭದಿಂದಲೇ ಮೂರು ಎಕರೆ ಜಮೀನು ಖರೀದಿಸಿರುವೆ. ಹೊಸ ಮನೆಯನ್ನು ನಿರ್ಮಿಸಿಕೊಂಡಿರುವೆ’ ಎಂದು ಅಜ್ಜಪ್ಪ ಹೇಳಿದರು.

‘20 ಸೆಂಟ್ಸ್‌ ಭೂಮಿಯಲ್ಲಿ ಬೆಳೆದ ಮೂಲಂಗಿಯಿಂದ ₹40 ಸಾವಿರ, 15 ಸೆಂಟ್ಸ್‌ ಪಾಲಕ್‌ನಿಂದ ₹20 ಸಾವಿರ, 5 ಸೆಂಟ್ಸ್‌ನಲ್ಲಿ ಬೆಳೆದ ರಾಜಗಿರಿಯಿಂದ ₹10 ಸಾವಿರ ಆದಾಯ ಬಂದಿದೆ. ಪುದಿನಾ ಸೊಪ್ಪಿಗಂತೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಷ್ಟು ಆದಾಯ ತಂದು ಕೊಡುತ್ತದೆ’ ಎಂದು ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.