ADVERTISEMENT

‘ದಿನ ಸಾವಿರ ಹೆಜ್ಜೆ ನಡೆದವರಿಗಿಲ್ಲ ಹೃದಯ ಕಾಯಿಲೆ’: ಸೋಮಶೇಖರ್‌ ಕಬ್ಬೇರ್‌

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 16:17 IST
Last Updated 28 ಸೆಪ್ಟೆಂಬರ್ 2021, 16:17 IST
ಡಾ. ಸೋಮಶೇಖರ್‌ ಕಬ್ಬೇರ್‌
ಡಾ. ಸೋಮಶೇಖರ್‌ ಕಬ್ಬೇರ್‌   

ಹೊಸಪೇಟೆ (ವಿಜಯನಗರ): ಒಂದು ದಿನಕ್ಕೆ ಹತ್ತು ಸಾವಿರ ಹೆಜ್ಜೆ ನಡೆದರೆ ಹೃದಯ ಕಾಯಿಲೆ ಬರುವುದಿಲ್ಲ. ಹತ್ತು ಸಾವಿರ ಹೆಜ್ಜೆ ನಡೆದರೆ ಅದು ಒಟ್ಟು ಏಳು ಕಿ.ಮೀ ಆಗುತ್ತದೆ. ಅದಕ್ಕಾಗಿ ಒಂದೂವರೆ ಗಂಟೆ ಸಮಯ ಹಿಡಿಯುತ್ತದೆ. ನಿತ್ಯ ಇಷ್ಟು ಮಾಡಿದರೆ ಉತ್ತಮ. ಇದಕ್ಕೆ ‘ಐಸೋಟಾನಿಕ್‌ ಎಕ್ಸರ್‌ಸೈಜ್‌’ ಅಂತಾರೆ.

ಎಲ್ಲಾ ವಯೋಮಾನದವರು ವಾಕ್‌ ಮಾಡಬಹುದು. ಇದು ಎಲ್ಲರಿಗೂ ಸರಳ ಕೂಡ ಹೌದು. ಒಂದೇ ಸಲ ಒಂದೂವರೆ ಗಂಟೆ ನಡೆಯಲು ಸಾಧ್ಯವಾಗದಿದ್ದರೆ ಪ್ರತಿ ಗಂಟೆಗೆ ಆರು ನಿಮಿಷ ನಡೆಯಬಹುದು. ದಿನಕ್ಕೆ ಒಬ್ಬ ಮನುಷ್ಯ 14ರಿಂದ 16 ಗಂಟೆ ಎಚ್ಚರ ಇರುತ್ತಾನೆ. ಆ ಅವಧಿಯಲ್ಲಿ ನಿರ್ದಿಷ್ಟ ಸಮಯ ಮೀಸಲಿಡಬಹುದು. ಇದರೊಂದಿಗೆ ವ್ಯಾಯಾಮ ಕೂಡ ಮಾಡಿದರೆ ಉತ್ತಮ. ಅದರಲ್ಲೂ ಯೋಗ, ಧ್ಯಾನ ಬಹಳ ಮುಖ್ಯವಾದುದು. ಪ್ರಾಣಾಯಾಮ, ಧ್ಯಾನ ಮಾಡಿದರೆ ಎಲ್ಲ ರೀತಿಯ ಒತ್ತಡ ಕಡಿಮೆಯಾಗುತ್ತದೆ. ಹೃದಯ ಆರೋಗ್ಯವಾಗಿ ಇಟ್ಟುಕೊಳ್ಳಬಹುದು.

ಬೆಳಿಗ್ಗೆ, ಮಧ್ಯಾಹ್ನ ಉತ್ತಮ ಪೌಷ್ಟಿಕಾಂಶ ಹೊಂದಿರುವ ಆಹಾರ ಸೇವಿಸಬೇಕು. ರಾತ್ರಿ ಲಘು ಆಹಾರ ಸೇವಿಸಬೇಕು. ಸಕ್ಕರೆ, ಬಿಳಿ ಬೆಲ್ಲ, ಮೈದಾ, ಬಿಳಿ ಅಕ್ಕಿಯ ಅನ್ನ, ಎಣ್ಣೆಯಲ್ಲಿ ಕರಿದ ಪದಾರ್ಥ ಸೇವಿಸದೇ ಇರುವುದು ಉತ್ತಮ. ಹಾಲಿನಿಂದ ತಯಾರಿಸಿದ ಆಹಾರ ಪದಾರ್ಥಗಳ ಸೇವನೆಯೂ ಸೀಮಿತವಾಗಿರಬೇಕು. ದೈಹಿಕ ಚಟುವಟಿಕೆಗಳಿಂದ ಶೇ 30ರಷ್ಟು ಹೃದಯಕ್ಕೆ ಪ್ರಯೋಜನವಾದರೆ, ಶೇ 70ರಷ್ಟು ಆಹಾರದ ಸೇವನೆ ಅವಲಂಬಿಸಿದೆ. ಬೇಸಿಗೆಯಲ್ಲಿ ಕನಿಷ್ಠ ನಾಲ್ಕು ಲೀಟರ್‌ ನೀರು ಸೇವಿಸಿದರೆ, ಚಳಿಗಾಲ, ಮಳೆಗಾದಲ್ಲಿ ಎರಡೂವರೆಯಿಂದ ಮೂರು ಲೀಟರ್‌ ನೀರು ಕುಡಿಯಬೇಕು.

ADVERTISEMENT

ಸತತ ನಾಲ್ಕು ಗಂಟೆ ಕುಳಿತು ಕೆಲಸ ಮಾಡಿದರೆ ಅದು 20 ಸಿಗರೇಟ್‌ ಸೇದಿರುವುದಕ್ಕೆ ಸಮ. ಅಷ್ಟೊಂದು ಒತ್ತಡ ಸೃಷ್ಟಿಯಾಗುತ್ತದೆ. ಆನುವಂಶೀಕ, ಕೆಲಸದ ಒತ್ತಡ, ಅತಿಯಾದ ಮದ್ಯಪಾನ, ಧೂಮಪಾನದಿಂದಲೂ ಹೃದಯಕ್ಕೆ ತೊಂದರೆ ಆಗುತ್ತದೆ.

–ಡಾ. ಸೋಮಶೇಖರ್‌ ಕಬ್ಬೇರ್‌, ಫಿಜಿಶಿಯನ್‌,
ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆ, ಹೊಸಪೇಟೆ

---

ನಿರೂಪಣೆ: ಶಶಿಕಾಂತ ಎಸ್‌. ಶೆಂಬೆಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.