ಕೊಟ್ಟೂರು: ತಾಲ್ಲೂಕಿನ ನಿಂಬಳಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು ರೈತರ ಸಂಕಟ ಕೇಳುವವರಿಲ್ಲದಂತಾಗಿದೆ.
ಸಕಾಲಕ್ಕೆ ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ರೈತರ ಮನೆಯಲ್ಲಿ ಸಂತಸ ಮನೆ ಮಾಡಿದೆ. ರೈತರು ಜಮೀನುಗಳಲ್ಲಿ ಜೋಳ, ಮೆಕ್ಕೆಜೋಳ ಮುಂತಾದ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.
ಬಿತ್ತನೆ ಮಾಡಿದ ಬೀಜಗಳು ಮೊಳಕೆ ಹೊಡೆಯುವ ಹಂತದಲ್ಲಿರುವಾಗ ರಾತ್ರಿ ವೇಳೆ ಕಾಡು ಹಂದಿಗಳು ಸಾಲು ಹಿಡಿದು ಬೀಜಗಳನ್ನು ತಿಂದು ನಾಶ ಮಾಡುತ್ತಿರುವುದರಿಂದ ರೈತರು ಕಾಡು ಹಂದಿಗಳು ಹೊಲಕ್ಕೆ ನುಗ್ಗದಂತೆ ರಾತ್ರಿ ವೇಳೆ ಬೆಂಕಿ ಹಚ್ಚಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಿಂಬಳಗೆರೆ ಗ್ರಾಮದ ಬಾರಿ ಕೊಟ್ರೇಶಪ್ಪ, ಎಂ.ರಾಜಪ್ಪ, ಕರಿಯಣ್ಣರ ಕಲ್ಲೇಶ್, ಬಿ.ಶೇಖರಪ್ಪ , ನೀಲಪ್ಪ ಮುಂತಾದ ರೈತರ ಜಮೀನಿಗಳಲ್ಲಿ ಕಳೆದ ಮಂಗಳವಾರ ಬಿತ್ತಿದ್ದ ಮೆಕ್ಕೆಜೋಳ ಬೀಜಗಳನ್ನು ಕಾಡು ಹಂದಿಗಳು ದಾಳಿ ಮಾಡಿ ಮೊಳಕೆ ಹೊಡೆದ ಬೀಜಗಳನ್ನು ತಿಂದು ನಾಶ ಮಾಡಿವೆ.
ಸಾಲ ಸೂಲ ಮಾಡಿ ದುಬಾರಿ ಬೀಜ ರಸಗೊಬ್ಬರ ಖರೀದಿಸಿ ಕೂಲಿ ಆಳುಗಳಿಂದ ತತ್ತರಿಸಿ ತಲೆ ಮೇಲೆ ಕೈಹೊತ್ತು ಕೂತಿರುವ ರೈತರ ನೆರವಿಗೆ ಅರಣ್ಯ ಇಲಾಖೆ ಮುಂದಾಗುವುದೇ ಎಂದು ಈ ಭಾಗದ ರೈತರು ಕಾದು ನೋಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.