ಅಕ್ರಮ ಗಣಿಗಾರಿಕೆಗೂ ಮುನ್ನ ಕರ್ನಾಟಕ–ಆಂಧ್ರಪ್ರದೇಶದ ಗಡಿಯಲ್ಲಿರುವ ತುಮಟಿ, ವೀರಾಪುರ, ಮಲಪನಗುಡಿ ಟ್ರೈಜಂಕ್ಷನ್ ಬಿಂದುವಿನಲ್ಲಿದ್ದ ಗುರುತು (ಸಂಗ್ರಹ ಚಿತ್ರ)
ಬಳ್ಳಾರಿ: ಬಳ್ಳಾರಿಯ ಮೀಸಲು ಅರಣ್ಯದಲ್ಲಿ ಹಾದು ಹೋಗಿರುವ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಯನ್ನು ಧ್ವಂಸ ಮಾಡಿ, ಅಕ್ರಮ ಗಣಿಗಾರಿಕೆ ನಡೆಸಿದ ಅಪರಾಧದಲ್ಲಿ ಶಾಸಕ ಜನಾರ್ದನ ರೆಡ್ಡಿ ಜೈಲು ಸೇರಿದ್ದಾರೆ. ಆದರೆ ಧ್ವಂಸಗೊಂಡ ಅಂತರರಾಜ್ಯ ಗಡಿ (ಐಎಸ್‌ಬಿ) ಗುರುತು ಇನ್ನೂ ಗೊಂದಲದ ಗೂಡಾಗಿದೆ.
ಎರಡೂ ರಾಜ್ಯಗಳ ನಡುವಿನ ಗಡಿ ಗುರುತು ಮಾಡಲು ಸುಪ್ರೀಂ ಕೋರ್ಟ್ 2018ರಲ್ಲಿ ಆದೇಶಿಸಿತ್ತು. ಅದರಂತೆ ‘ಸರ್ವೆ ಆಫ್ ಇಂಡಿಯಾ’ ಗಡಿಯನ್ನು 2022ರಲ್ಲಿ ಗುರುತಿಸಿದೆ. ಆದರೆ,ಸುಪ್ರೀಂ ಕೋರ್ಟ್‌ಗೆ ಇದು ಸಲ್ಲಿಕೆ ಆಗಿಲ್ಲ.
ಈ ಸರ್ವೆ ನಡೆಯುತ್ತಿದ್ದ ವೇಳೆಗೆ 2020ರಲ್ಲಿ ಕೆಲ ಆಕ್ಷೇಪಗಳನ್ನು ಎತ್ತಿದ್ದ ಅಂದಿನ ಬಳ್ಳಾರಿ ಜಿಲ್ಲಾಧಿಕಾರಿ ನಕುಲ್, ‘ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ನಡುವಿನ ಟ್ರೈಜಂಕ್ಷನ್ ಮತ್ತು ಬೈಜಂಕ್ಷನ್‌ಗಳಲ್ಲಿ ಗಡಿ ಗುರುತಿಸುವ ಕೆಲಸ ಏಕಪಕ್ಷೀಯವಾಗಿ ನಡೆದಿದೆ’ ಎಂದು ಸರ್ವೆ ಇಲಾಖೆಗೆ ಪತ್ರ ಬರೆದಿದ್ದರು. ಅದಾಗಲೇ ಹಾಕಲಾಗಿದ್ದ ಕೆಲ ಗಡಿ ಬಾಂದುಗಳ ಬಗ್ಗೆ ವಿವರಣೆ ಕೇಳಿದ್ದರು. ಯಾವ ಮಾನದಂಡಗಳಲ್ಲಿ ಈ ಗಡಿ ಬಾಂದುಗಳನ್ನು ಹಾಕಲಾಗಿದೆ ಎಂದು ಸ್ಪಷ್ಟನೆ ಕೇಳಿದ್ದರು. ಇದಕ್ಕೆ ಸರ್ವೆ ಆಫ್ ಇಂಡಿಯಾ ಉತ್ತರಿಸಲಿಲ್ಲ ಎಂದು ಗೊತ್ತಾಗಿದೆ. ಗೊಂದಲಗಳ ನಡುವೆಯೇ ಸರ್ವೆ ಆಫ್ ಇಂಡಿಯಾ ಗಡಿ ಗುರುತಿಸುವ ಕೆಲಸವನ್ನು ಈಗಾಗಲೇ ಮುಗಿಸಿದೆ.
ಅಕ್ರಮ ಗಣಿಗಾರಿಕೆ ಮತ್ತು ಬಿ–1 ವರ್ಗದ ಗಣಿಗಳ ಎಲ್ಲೆ ಗುರುತು ಮಾಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದಿರುವ ಯಾವುದೇ ಪ್ರಕರಣಗಳಲ್ಲೂ ಸರ್ವೆ ಆಫ್ ಇಂಡಿಯಾದ ನಕ್ಷೆ ಸಲ್ಲಿಕೆಯಾಗಿಲ್ಲ. ಆದರೆ, ಬಿ–1 ವರ್ಗದ ಗಣಿ ಗುರುತು ಪ್ರಕರಣದಲ್ಲಿ ಕೇಂದ್ರದ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ನಕ್ಷೆ ಸಲ್ಲಿಕೆಯಾಗಿದೆ ಎನ್ನಲಾಗಿದ್ದು, ಅದು ಇನ್ನಷ್ಟೇ ಸುಪ್ರೀಂ ಕೋರ್ಟ್‌ಗೆ ನಕ್ಷೆಯನ್ನು ಸಲ್ಲಿಸಬೇಕಾಗಿದೆ.
ಆಕ್ಷೇಪ ಏನು?: ಗಡಿ ಗುರುತು ಮಾಡುವ ಪ್ರಕ್ರಿಯೆಗೆ ಬಳಸಲಾಗಿರುವ ಮಾನದಂಡಗಳ ಬಗ್ಗೆ ಗಣಿ ಉದ್ಯಮಿ ಟಪಾಲ್ ಗಣೇಶ್ ಮೊದಲಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ–ಆಂಧ್ರ ಪ್ರದೇಶಗಳ ನಡುವಿನ ಅಂತರರಾಜ್ಯ ಗಡಿಗೆ 1896ರ ಬ್ರಿಟಿಷ್ ನಕ್ಷೆಯೇ ಆಧಾರ. ಇದನ್ನು ಎರಡೂ ರಾಜ್ಯಗಳು ಹಲವು ಪ್ರಕರಣಗಳಲ್ಲಿ ಒಪ್ಪಿಕೊಂಡಿವೆ. ಈ ನಕ್ಷೆಯೂ ‘ಆಲ್ಟಿಟ್ಯೂಡ್ (ಗಿರಿಶಿಖಿರಗಳ ತುದಿಗಳ ಮೇಲೆ ಹಾದುಹೋಗುವ ನಕ್ಷೆ) ಆಧಾರಿತ ನಕ್ಷೆಯಾಗಿದ್ದು, ಎತ್ತರ ಮತ್ತು ತಗ್ಗು ಪ್ರದೇಶಗಳನ್ನೂ ಒಳಗೊಂಡಿದೆ. ಭಾಷಾವಾರು ಪ್ರಾಂತ್ಯ ವಿಭಜನೆಯಾದಾಗಲೂ ಹಳ್ಳಿಗಳ ಹಂಚಿಕೆಗೆ ಇದೇ ನಕ್ಷೆಯನ್ನೇ ಬಳಸಲಾಗಿದೆ ಎನ್ನಲಾಗಿದೆ. ಇದೇ ಆಧಾರದಲ್ಲೇ ಅನಂತಪುರದಲ್ಲಿ ಗಣಿ ಗುತ್ತಿಗೆಗಳನ್ನು ಹಂಚಿಕೆ ಮಾಡಲಾಗಿತ್ತು.
ಸರ್ವೆ ಆಫ್ ಇಂಡಿಯಾ ಗಡಿ ಗುರುತು ಮಾಡುವಾಗ ಟೋಪೋಸ್ಕೇಲ್ (ಸ್ಥಳಾಕೃತಿ ನಕ್ಷೆ)ಅನ್ನು ಮಾನದಂಡವಾಗಿ ಬಳಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ಗೊಂದಲಗಳಿಗೆ ಕಾರಣವಾಗಿದೆ. ಜನಾರ್ದನ ರೆಡ್ಡಿ ಅವರ ಅಕ್ರಮಗಳನ್ನು ನಿಖರವಾಗಿ ಸಾಬೀತು ಮಾಡುವಲ್ಲಿ ಈ ನಕ್ಷೆ ವಿಫಲವಾಗಲಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಎಲ್ಲ ಗೊಂದಲಗಳ ಕುರಿತು 2023ರ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಗಡಿ ನಕ್ಷೆಯನ್ನು ಪರಾಮರ್ಶಿಸಲು ತಜ್ಞರ ಸಮಿತಿ ರಚಿಸಲಾಗುವುದು’ ಎಂದಿದ್ದರು. ಆದರೆ, ಈವರೆಗೆ ಸಮಿತಿ ರಚನೆಯಾಗಿಲ್ಲ. ಈ ಎಲ್ಲ ಗೊಂದಲಗಳಿರುವ ನಕ್ಷೆ ಆಧಾರದಲ್ಲೇ, ಎರಡೂ ರಾಜ್ಯಗಳ ಗಡಿ ಭಾಗದ ಬಿ–1 ಕ್ಯಾಟಗರಿ ಗಣಿಗಳ ಎಲ್ಲೆಗಳನ್ನು ಗುರುತು ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.