ADVERTISEMENT

ಅರಣ್ಯ ಭವನಕ್ಕೆ ಮುತ್ತಿಗೆ: ಸಂಸದರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 5:09 IST
Last Updated 27 ಅಕ್ಟೋಬರ್ 2017, 5:09 IST
ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯವರು ಹಕ್ಕುಪತ್ರ ನೀಡಿಕೆಗೆ ಒತ್ತಾಯಿಸಿ ಕಲ್ಕೆರೆ ಬಳಿ ಇರುವ ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದರು
ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯವರು ಹಕ್ಕುಪತ್ರ ನೀಡಿಕೆಗೆ ಒತ್ತಾಯಿಸಿ ಕಲ್ಕೆರೆ ಬಳಿ ಇರುವ ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದರು   

ಆನೇಕಲ್‌: ಸರ್ಕಾರದಲ್ಲಿ ತೀರ್ಮಾನವಾಗಿದ್ದರೂ ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ಕುಟುಂಬಗಳಿಗೆ ಸಾಗುವಳಿಗಾಗಿ ಜಮೀನು ನೀಡಲು ಅರಣ್ಯ ಇಲಾಖೆ ಮೀನಾ ಮೇಷ ಎಣಿಸುತ್ತಿದೆ. ಶೀಘ್ರದಲ್ಲಿ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡದಿದ್ದರೆ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್ ಎಚ್ಚರಿಸಿದರು.

ವರು ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯವರು ಹಕ್ಕುಪತ್ರ ನೀಡಿಕೆಗೆ ಒತ್ತಾಯಿಸಿ ಬನ್ನೇರುಘಟ್ಟ ಕಲ್ಕೆರೆ ಬಳಿ ಇರುವ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಗೂ ರಸ್ತೆ ತಡೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

ಹಕ್ಕಿ ಪಿಕ್ಕಿ ಕಾಲೋನಿಯವರಿಗೆ ಹಕ್ಕುಪತ್ರ ನೀಡುವ ಸಂಬಂಧ ಹಲವಾರು ಬಾರಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಕಾರ್ಯ ಪ್ರಗತಿಯಾಗಿಲ್ಲ. ಅಧಿಕಾರಿಗಳು ಬದಲಾಗುತ್ತಿದ್ದಂತೆ ಈ ಸಂಬಂಧ ಪ್ರಕ್ರಿಯೆ ಸಹ ನಿಧಾನವಾಗುತ್ತಿದೆ ಎಂದರು.

ADVERTISEMENT

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಅರಣ್ಯ ಭೂಮಿ ನೀಡುವ ಸಂಬಂಧ ಆದೇಶಗಳನ್ನು ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಈ ಭಾಗದ ಕಾಂಗ್ರೆಸ್ ಮುಖಂಡರ ಒತ್ತಾಯದ ಮೇರೆಗೆ ಜನಾಂಗದವರಿಗೆ ಹಕ್ಕುಪತ್ರ ನೀಡಲು ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದರು.

ಹಿಂದುಳಿದ ವರ್ಗಗಳ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಚ್ಯುತರಾಜು ಮಾತನಾಡಿ, ಈ ಭಾಗದ ಹಕ್ಕಿಪಿಕ್ಕಿ ಜನಾಂಗದವರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಿ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಹಸ್ತಾಂತರ: ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಾವೇದ್‌ ಅಖ್ತರ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಮಾತನಾಡಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ನಡುವೆ ಗಡಿ ವಿವರಣೆಗೆ ಸಂಬಂಧಿಸಿದಂತೆ ಹೊಂದಾಣಿಕೆಯಾಗುತ್ತಿಲ್ಲ. ಹಾಗಾಗಿ ವಿಳಂಬವಾಗಿತ್ತು.

ಇದನ್ನು ಸರಿಪಡಿಸಲಾಗಿದ್ದು ಎರಡು ದಿನಗಳಲ್ಲಿ ಕಂದಾಯ ಇಲಾಖೆಗೆ ರಾಗಿಹಳ್ಳಿ ಸರ್ವೆ ನಂ.1ರಲ್ಲಿರುವ 350ಎಕರೆ ಜಮೀನನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು. ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಬನ್ನೇರುಘಟ್ಟ ಸಮೀಪದ ಕಲ್ಕೆರೆ ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಬನ್ನೇರುಘಟ್ಟ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಸಂಸದ ಡಿ.ಕೆ.ಸುರೇಶ್ ಅವರೂ ಪಾಲ್ಗೊಂಡಿದ್ದರು.

ಮುಖಂಡ ವಿನೋದ್‌,  ಬಮೂಲ್‌ ನಿರ್ದೇಶಕ ಆರ್.ಕೆ.ರಮೇಶ್‌, ಕೆಪಿಸಿಸಿ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲರೆಡ್ಡಿ, ಮಂಟಪ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್‌ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಅಚ್ಯುತರಾಜು, ಮುಖಂಡರಾದ ಪ್ರಭಾಕರ್‌ರೆಡ್ಡಿ, ಕೃಷ್ಣಮೂರ್ತಿ, ನರಸಿಂಹಯ್ಯ, ಚೆಲುವರಾಜು, ಮಾದೇಶ್, ಗಿರೀಶ್, ಭೀಮ್‌ಸಿಂಗ್, ರಾಜು ಲಕ್ಷ್ಮಣ್‌ಸಿಂಗ್‌, ರಾಧತಿಮ್ಮಾರೆಡ್ಡಿ, ಲಕ್ಷ್ಮೀನಾರಾಯಣ್, ಶ್ರೀನಿವಾಸಯ್ಯ, ಬಾಲಾಜಿ ಬನ್ನೇರುಘಟ್ಟ ಚಂಪಕಧಾಮ ಸ್ವಾಮಿ ದೇವಾಲಯದ ಕನ್ವೀನರ್ ಸಂಪಂಗಿ, ಆಶ್ರಯ ಸಮಿತಿ ಸದಸ್ಯ ನರಸಿಂಹಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.