ADVERTISEMENT

ಎಂಎನ್‌ಸಿಗಳಿಗೆ ಮಣೆ: ರೈತರ ಅವಸಾನ

ಗ್ರಾಮಾಂತರ ಜಿಲ್ಲಾ ಮಟ್ಟದ ಪ್ರಾಂತ ರೈತ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 5:21 IST
Last Updated 16 ಜುಲೈ 2013, 5:21 IST
ದೇವನಹಳ್ಳಿಯ ನಗರೇಶ್ವರ ಕಲ್ಯಾಣ ಮಂದಿರದಲ್ಲಿ ತಾಲ್ಲೂಕು ಪ್ರಾಂತ ರೈತ ಸಂಘ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಾಂತ ರೈತ ಸಮ್ಮೇಳನವನ್ನು ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಉದ್ಘಾಟಿಸಿದರು. ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಯ್ಯಾರೆಡ್ಡಿ, ಸಂಘಟನಾ ಕಾರ್ಯದರ್ಶಿ ಚಂದ್ರತೇಜಸ್ವಿ, ತಾಲ್ಲೂಕು ಪ್ರಾಂತ ರೈತ ಸಂಘದ ಗೌರವಾಧ್ಯಕ್ಷ ನಾರಾಯಣಸ್ವಾಮಿ, ಅಧ್ಯಕ್ಷ ಎನ್.ವೀರಣ ಇತರರು ಇದ್ದರು
ದೇವನಹಳ್ಳಿಯ ನಗರೇಶ್ವರ ಕಲ್ಯಾಣ ಮಂದಿರದಲ್ಲಿ ತಾಲ್ಲೂಕು ಪ್ರಾಂತ ರೈತ ಸಂಘ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಾಂತ ರೈತ ಸಮ್ಮೇಳನವನ್ನು ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಉದ್ಘಾಟಿಸಿದರು. ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಯ್ಯಾರೆಡ್ಡಿ, ಸಂಘಟನಾ ಕಾರ್ಯದರ್ಶಿ ಚಂದ್ರತೇಜಸ್ವಿ, ತಾಲ್ಲೂಕು ಪ್ರಾಂತ ರೈತ ಸಂಘದ ಗೌರವಾಧ್ಯಕ್ಷ ನಾರಾಯಣಸ್ವಾಮಿ, ಅಧ್ಯಕ್ಷ ಎನ್.ವೀರಣ ಇತರರು ಇದ್ದರು   

ದೇವನಹಳ್ಳಿ: `ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಬದಲು ಬಹುರಾಷ್ಟ್ರೀಯ ಕಂಪೆನಿಗಳಿಗೆ ಸರ್ಕಾರಗಳು ಒತ್ತು ನೀಡುತ್ತಿದ್ದು, ರೈತರು ಅವಸಾನವಾಗುತ್ತಿದ್ದಾರೆ' ಎಂದು ಮಾಜಿ ಶಾಸಕ ಜಿ.ವಿ. ಶ್ರಿರಾಮರೆಡ್ಡಿ   ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ನಗರೇಶ್ವರ ಕಲ್ಯಾಣ ಮಂದಿರದಲ್ಲಿ ತಾಲ್ಲೂಕು ಪ್ರಾಂತ ರೈತ ಸಂಘ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಾಂತ ರೈತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಶೇ.68ರಷ್ಟು ಕುಟುಂಬಗಳಿದ್ದು. ಕಳೆದ ಹತ್ತು ವರ್ಷದಲ್ಲಿ ಶೇ.10 ರಷ್ಟು ಕುಟುಂಬಗಳು  ಕೃಷಿಯಿಂದ ವಿಮುಖರಾಗುವೆ. ದೇಶದಲ್ಲಿ ವಾರ್ಷಿಕ ನಾಲ್ಕು ಲಕ್ಷ ಮೂವತ್ತು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಎಂಟು ವರ್ಷದ ಹಿಂದೆ ಕೃಷಿ ಉತ್ಪಾದನೆ ಶೇ.8 ರಿಂದ 9 ರಷ್ಟಿತ್ತು. ಪ್ರಸ್ತುತ ಶೇ 1.8ಕ್ಕೆ ಕುಸಿದಿದೆ. ಕೃಷಿ ಅವಸಾನವಾದಿಂದ ಪರೋಕ್ಷವಾಗಿ ಕೈಗಾರಿಕೆಗೂ ಹಿನ್ನಡೆಯಾಗಿ ಆರ್ಥಿಕ ಸ್ಥಿತಿ ದುರ್ಬಲವಾಗಲಿದೆ ಎಂದರು.

ಆಹಾರ ಪದಾರ್ಥಗಳನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಕೈಗಾರಿಕೆ ಮತ್ತು ಅಭಿವೃದ್ಧಿ ಹೆಸರಲ್ಲಿ ಕೃಷಿಯ ಫಲವತ್ತಾದ ಭೂಮಿ ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗುತ್ತಿದೆ.  ಕೇಂದ್ರ ಸರ್ಕಾರಕ್ಕೆ ಕೃಷಿ ಮತ್ತು ರೈತರ ಬಗ್ಗೆ  ಕಾಳಜಿ ಇದ್ದಲ್ಲಿ ರಾಷ್ಟ್ರೀಯ ಜಲ ನೀತಿ ಜಾರಿ ಮಾಡಬೇಕು. ರಾಜ್ಯದಲ್ಲಿ ಲಭ್ಯವಿರುವ ನೀರಿನಲ್ಲಿ ಶೇ.25ರಷ್ಟು ಮಾತ್ರ ಬಳಕೆಯಾಗುತ್ತಿದೆ ಶೇ.75 ರಷ್ಟು ವ್ಯರ್ಥವಾಗುತ್ತಿದೆ ಎಂದು ಅವರು ಹೇಳಿದರು.

ಆರು ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲು ಹಿಂಜರಿಯುವ ಸರ್ಕಾರ ಬಹುರಾಷ್ಟ್ರೀಯ ಕಂಪೆನಿಗಳ ತೆರಿಗೆ ಮನ್ನಾ ಮಾಡಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು.

ಬಯಲು ಸೀಮೆ ಜಿಲ್ಲೆಗಳಿಗೆ ಎತ್ತಿನ ಹೊಳೆಯಿಂದ ಕುಡಿಯುವ ನೀರು ಸಾಧ್ಯವೇ ಇಲ್ಲ. ಬಯಲು ಸೀಮೆಯ ಆರು ಸಾವಿರ ಕೆರೆಗಳಿಗೆ ನೀರು ಹರಿಸಲು ಇದರಿಂದ ಸಾಧ್ಯವಿಲ್ಲ. ಸಚಿವ ವೀರಪ್ಪ ಮೊಯ್ಲಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

ಪ್ರಾಂತ ರೈತ ಸಂಘ ರಾಜ್ಯ ಕಾರ್ಯದರ್ಶಿ ಬಯ್ಯಾರೆಡ್ಡಿ ಮಾತನಾಡಿ, ಇಲ್ಲಿನ ವಿಮಾನ ನಿಲ್ದಾಣಕ್ಕೆ  ವಶಪಡಿಸಿಕೊಂಡ ಫಲವತ್ತಾದ ಭೂಮಿಗೆ ಪ್ರತಿ ಎಕರೆಗೆ ಐದು ಲಕ್ಷ ನೀಡಲಾಗಿದೆ. ಆದರೆ ಇಂದಿನ ಮಾರುಕಟ್ಟೆ ಮೌಲ್ಯ ಐದು ಕೋಟಿ, ಭೂಮಿ ಕಳೆದುಕೊಂಡವರು ಭಿಕ್ಷೆ ಬೇಡುತ್ತಿದ್ದಾರೆ ಎಂದರು.

ಬಗರ್‌ಹುಕುಂ ಸಾಗುವಳಿದಾರರಿಗೆ ಕಳೆದ 30 ವರ್ಷದಿಂದ ಹಕ್ಕು ಪತ್ರ ನೀಡಿಲ್ಲ. ಸರ್ಕಾರಗಳು ರೈತರನ್ನು ಬೀದಿಗೆ ತರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಂತ್ಯ ರೈತ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರತೇಜಸ್ವಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಕಾರ್ಯದರ್ಶಿ ಕಲ್ಯಾಣಕುಮಾರ್, ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಹನುಮಂತರಾಯಪ್ಪ, ತಾಲ್ಲೂಕು ಪ್ರಾಂತ ರೈತ ಸಂಘ ಗೌರವಾಧ್ಯಕ್ಷ ನಾರಾಯಣಸ್ವಾಮಿ, ಅಧ್ಯಕ್ಷ ಎನ್.ವೀರಣ್ಣ, ಮಹಿಳಾ ಅಧ್ಯಕ್ಷ ಕೃಷ್ಣವೇಣಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಸುಮಿತ್ರಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.