ADVERTISEMENT

ಕಾವೇರಿ ನೀರು ಪೂರೈಕೆಗೆ ಚಾಲನೆ

ರಸ್ತೆ ಅಭಿವೃದ್ಧಿಗಾಗಿ ₹17 ಕೋಟಿ ಅನುದಾನ ಮಂಜೂರು – ಶಾಸಕ ಬಿ. ಶಿವಣ್ಣ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 7:13 IST
Last Updated 22 ಮಾರ್ಚ್ 2018, 7:13 IST

ಆನೇಕಲ್‌: ಗೃಹ ಮಂಡಳಿಯಿಂದ ನಿರ್ಮಿಸಿರುವ ಚಂದಾಪುರ ಸೂರ್ಯ ಸಿಟಿಯಲ್ಲಿ ನೀರಿನ ಕೊರತೆಯಿಂದ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತಿತ್ತು.

ಈ ಹಿನ್ನೆಲೆಯಲ್ಲಿ ಶಾಶ್ವತ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಶಾಸಕ ಬಿ.ಶಿವಣ್ಣ ಅವರು ತಿಳಿಸಿದರು.

ಸೂರ್ಯ ಸಿಟಿಯಲ್ಲಿ ಬುಧವಾರ ಕಾವೇರಿ ಕುಡಿಯುವ ನೀರು ಪೂರೈಕೆ ಯೋಜನೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ADVERTISEMENT

‘ಕಳೆದ ಐದು ವರ್ಷಗಳಿಂದಲೂ ಬಡಾವಣೆಯ ಸಮಸ್ಯೆಗಳನ್ನು ಇಲ್ಲಿಯ ನಿವಾಸಿಯಾಗಿ ಸ್ವತಃ ಗುರುತಿಸಿ ಪರಿಹಾರ ಕಂಡುಕೊಳ್ಳಲು ಸದಾ ಚಿಂತನೆ ಮಾಡಿದಾಗ ಕಾವೇರಿ ನೀರು ಪೂರೈಕೆ ಮಾಡಿಸಲು ಸಂಕಲ್ಪ ಮಾಡಲಾಗಿತ್ತು’ ಎಂದರು.

ಮುಖ್ಯಮಂತ್ರಿಗಳು ಉನ್ನತ ಅಧಿಕಾರಿಗಳ ಸಭೆ ನಡೆಸಿ ಈ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿ 30 ಎಂಎಲ್‌ಡಿ ಕಾವೇರಿ ನೀರು ಪೂರೈಕೆ ಮಾಡಲು ತೀರ್ಮಾನ ಪ್ರಕಟಿಸಿದರು. ಈ ಹಿನ್ನೆಲೆಯಲ್ಲಿ ಬಡಾವಣೆಗೆ 15 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು ಈ ಭಾಗದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಿದೆ  ಎಂದರು.

ಸೂರ್ಯಸಿಟಿಯ ರಸ್ತೆಗಳ ಅಭಿವೃದ್ಧಿಗಾಗಿ ₹17 ಕೋಟಿ ಅನುದಾನ ಮಂಜೂರಾಗಿದೆ. ಸುಸಜ್ಜಿತ ಷಟಲ್‌ ಬ್ಯಾಡ್ಮಿಂಟನ್‌ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಉದ್ಯಾನವನ, ಗ್ರಂಥಾಲಯ, ಆಟದ ಮೈದಾನ ಮತ್ತಿತರ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

‘ಜನರು ನಂಬಿಕೆಯಿಟ್ಟು ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ನಮ್ಮನ್ನು ಗೆಲ್ಲಿಸಿದರು. ಅವರ ನಂಬಿಕೆಗೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸಿ ಅಭಿವೃದ್ಧಿ ಕಾರ್ಯಗಳ ಮೂಲಕ ಜನರಿಗೆ ಸ್ಪಂದಿಸಲಾಗಿದೆ. ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗಿದೆ’ ಎಂದು ಅವರು ಹೇಳಿದರು.

ಚಂದಾಪುರ, ಅತ್ತಿಬೆಲೆ, ಬೊಮ್ಮಸಂದ್ರ ಗ್ರಾಮ ಪಂಚಾಯಿತಿಗಳನ್ನು ಪುರಸಭೆಗಳಾಗಿ ಹಾಗೂ ಹೆಬ್ಬಗೋಡಿ ಗ್ರಾಮ ಪಂಚಾಯಿತಿಯನ್ನು ನಗರಸಭೆ
ಯಾಗಿ ಮೇಲ್ದರ್ಜೆಗೇರಿಸಿ ಸರ್ಕಾರದಿಂದ ಹೆಚ್ಚಿನ ಅನುದಾನ ಬರುವಂತೆ ಈ ಅವಧಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಣ್ಣ, ಚಂದ್ರಪ್ಪ, ಚಂದಾಪುರ ಪುರಸಭಾ ಸದಸ್ಯ ಇಗ್ಗಲೂರು ಮುನಿರಾಜು, ಆನೇಕಲ್ ಪುರಸಭಾ ಅಧ್ಯಕ್ಷ ಪಿ.ಶಂಕರ್‌ಕುಮಾರ್, ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ್‌ ರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪುಷ್ಪರಾಜ್, ಆನಂದ್‌ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷರಾದ ದೊಡ್ಡಹಾಗಡೆ ಹರೀಶ್‌, ಬನಹಳ್ಳಿ ರಾಮಚಂದ್ರ ರೆಡ್ಡಿ, ಆನೇಕಲ್ ಟೌನ್ ಕಾಂಗ್ರೆಸ್ ಅಧ್ಯಕ್ಷ ಜಿ.ಗೋಪಾಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶೀಲಮ್ಮ, ಬಗರ್‌ಹುಕುಂ ಸಾಗುವಳಿ ಮಂಜೂರಾತಿ ಸಮಿತಿ ಸದಸ್ಯ ಮುನಿವೀರಪ್ಪ, ಸೂರ್ಯಸಿಟಿ ನಿವಾಸಿಗಳ ಸಂಘದ ಅಧ್ಯಕ್ಷ ಆದಿಮುನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.