ADVERTISEMENT

ಪರಿಸರ ಕೇಡುಗರನ್ನು ಸುಮ್ಮನೇ ಬಿಡಬೇಡಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ವಿಜಯಪುರ: ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿ, ಎಲ್ಲೆಂದರಲ್ಲಿ ಕಸಹಾಕುವುದು ಮುಂತಾದವುಗಳ ಬಗ್ಗೆ ಪುರಸಭೆ ಹಾಗೂ ಕಂದಾಯ ಇಲಾಖೆಗಳು ಕಠಿಣ ಕ್ರಮ ಕೈಗೊಂಡು ಅಂತಹವರ ಮೇಲೆ ಕ್ರಿಮಿನಲ್ ದಾವೆ ಹೂಡಿ, ಜೈಲು ಶಿಕ್ಷೆಯಾಗುವಂತೆ ಮಾಡಬೇಕೆಂದು ಪರಿಸರ ತಜ್ಞ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಕಾನೂನು ಸೇವಾ ಸಮಿತಿ ಸದಸ್ಯ ಡಾ. ಯಲ್ಲಪ್ಪ ರೆಡ್ಡಿ ಹೇಳಿದರು.

ಇತ್ತೀಚೆಗೆ ವಿಜಯಪುರಕ್ಕೆ ಭೇಟಿ ನೀಡಿದ ಸಂದರ್ಭ ಅವರು ಪುರಸಭಾಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ, ಮುಖ್ಯಾಧಿಕಾರಿ  ಎಂ.ಆರ್. ಮಂಜುನಾಥ್, ಆರೋಗ್ಯಾಧಿಕಾರಿ ಮಂಜುಳಾ, ಪರಿಸರ ಎಂಜಿನಿಯರ್ ಮಮತಾ ಅವರ ಜೊತೆ ಚರ್ಚೆ ನಡಿಸಿದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ನೈರ್ಮಲ್ಯ, ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ, ಘನತ್ಯಾಜ್ಯ ವಿಲೇವಾರಿ ಸೇರಿದಂತೆ ವಿವಿಧ ಮೂಲ ಸೌಕರ್ಯಗಳ ಯೋಜನೆಗಳ ಕುರಿತು ಅವರು ಸುದೀರ್ಘವಾಗಿ  ಚರ್ಚಿಸಿದರು. ರಾಜ್ಯದಲ್ಲಿನ ಯಾವುದೇ ಕೆರೆ, ಕುಂಟೆ, ತೋಪು ಮುಂತಾದವು ಸಾರ್ವಜನಿಕರ ಉಪಯೋಗಕ್ಕೆ ಇರುವುದೇ ಹೊರತು, ಅವುಗಳನ್ನು ಯಾರೂ ಸ್ವಂತ ಆಸ್ತಿಯೆಂದು ಪರಿಗಣಿಸಿ ವಿಲೇವಾರಿ ಮಾಡುವಂತಿಲ್ಲ. ಇದು ಸುಪ್ರೀಂ ಕೋರ್ಟ್‌ನ ಆದೇಶವಾಗಿರುತ್ತದೆ. ಈ ಬಗ್ಗೆ ಪ್ರತಿಯೊಬ್ಬರಲ್ಲು ಅರಿವು ಮೂಡಿಸಬೇಕು ಎಂದರು.

ಸಮುದಾಯ ಭವನಗಳು ಮತ್ತು ಕಲ್ಯಾಣ ಮಂಟಪಗಳಿಂದ ಸಂಗ್ರಹಿಸುವ ತ್ಯಾಜ್ಯ ಹಾಗೂ ಕಸಾಯಿಖಾನೆ, ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿಗೆ ಪುರಸಭೆ ತೆಗೆದುಕೊಂಡಿರುವ  ಕ್ರಮ, ಒಳಚರಂಡಿ, ನೀರಿನ ಸಂಸ್ಕರಣೆ ಮುಂತಾದುವುಗಳ ಬಗ್ಗೆ ವಿಚಾರಿಸಿ ಸೂಕ್ತ ಸಲಹೆ ಸೂಚನೆಗಳನ್ನು ಅವರು ನೀಡಿದರು.

ಪಟ್ಟಣದ ಕೆಲವು ಸ್ಥಳಗಳಿಗೆ ಭೇಟಿ ಕೊಟ್ಟರು, ಇಲ್ಲಿನ ಕಲ್ಯಾಣಿಗಳು ಕಸ ಕಡ್ಡಿಗಳಿಂದ ತುಂಬಿ ಗಿಡಗಂಟಿಗಳು ಬೆಳೆದು ಮೂತ್ರಾಲಯಗಳಾಗಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಈ ಕಲ್ಯಾಣಿಗಳನ್ನು ಶುಚಿಗೊಳಿಸಿ ಅವುಗಳಿಗೆ ಮಳೆ ನೀರು ಹರಿಯುವಂತೆ ವ್ಯವಸ್ಥೆ ಮಾಡಿ, ಸುತ್ತಲೂ ಸಂರಕ್ಷಣಾ ಗೋಡೆಗಳನ್ನು ನಿರ್ಮಿಸುವಂತೆ ಅವರು ಸಲಹೆ ನೀಡಿದರು.

ಯಾವುದೇ ಖಾಲಿ ಜಾಗಗಳು ಮತ್ತು ಅವುಗಳ ಬಗ್ಗೆ ತಕರಾರು ಇದ್ದಲ್ಲಿ ಸಂಬಂಧಪಟ್ಟವರು ಆ ಸ್ಥಳಗಳನ್ನು ಶುಚಿಯಾಗಿ ಇಟ್ಟುಕೊಳ್ಳುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಅವರ ಖರ್ಚಿನಲ್ಲಿ ಪುರಸಭೆ ಅವನ್ನು ನಿರ್ವಹಣೆ ಮಾಡಬೇಕೆಂದು ಅವರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.