ADVERTISEMENT

ಮೂಲ ಸೌಲಭ್ಯ: ರೂ.2 ಕೋಟಿ ಕಾಮಗಾರಿ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಆನೇಕಲ್: ಬೊಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಮೂಲ ಸೌಲಭ್ಯ ಅಭಿವೃದ್ಧಿಗಾಗಿ ಎರಡು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ. ಪ್ರಸಾದ್ ನುಡಿದರು.

ತಾಲ್ಲೂಕಿನ ಬೊಮ್ಮಸಂದ್ರದಲ್ಲಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಅಂಗನವಾಡಿ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ  ಮಾತನಾಡಿ, ಬೊಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶವಿರುವುದರಿಂದ ಪಂಚಾಯಿತಿಗೆ ಉತ್ತಮ ಆದಾಯವಿದೆ. ಕಾರ್ಖಾನೆಗಳ ಸಹಭಾಗಿತ್ವದಿಂದ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಟಿ.ದಯಾನಂದರೆಡ್ಡಿ, ರಾಜ್ಯದಲ್ಲಿ ಕೆಟ್ಟ ರಾಜಕೀಯ ಪರಿಸ್ಥಿತಿಯಿದೆ. ಬೆಂಗಳೂರಿನ ಸಮೀಪವಿರುವ ಗ್ರಾಮಾಂತರ ಪ್ರದೇಶದಲ್ಲೂ ಕೆಟ್ಟ ರಾಜಕೀಯದ ನೆರಳು ಬೀಳುತ್ತಿರುವುದು ವಿಷಾದ. 

  ಅಂಗನವಾಡಿ ಕಟ್ಟಡದ ಕಾಮಗಾರಿ ಕಳಪೆಯಾಗಿದೆ ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದರು. ಆಶ್ರಯ ಯೋಜನೆಗಾಗಿ ಮೀಸಲಿಟ್ಟಿರುವ ಸ್ಥಳದಲ್ಲಿ ಮನೆಗಳನ್ನು ನಿರ್ಮಿಸಿ ಬಡವರಿಗೆ ನೀಡಬೇಕು. ಈ ಬಗ್ಗೆ ವಸತಿ ಸಚಿವರೊಂದಿಗೆ ಸಮಾಲೋಚನೆ ಮಾಡಿರುವುದಾಗಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೇಜಶ್ರೀ ನಟರಾಜ್ ಮಾತನಾಡಿ, ಪ್ರತಿಯೊಬ್ಬರು ರಾಜಕೀಯವಾಗಿ ಬೆಳೆಯಲು ಪಕ್ಷವಿರುತ್ತದೆ. ಆದರೆ ಅಭಿವೃದ್ಧಿಗಾಗಿ ಗ್ರಾಮಸ್ಥರ ಸಹಕಾರವಿರಬೇಕು. ಅಭಿವೃದ್ಧಿ ವಿಷಯದಲ್ಲಿ ರಾಜಕೀಯವಿರಬಾರದು ಎಂದರು.

ಜಿ.ಪಂ. ಸದಸ್ಯರಾದ ಶೈಲಜಾ, ಕೆ.ಸಿ.ರಾಮಚಂದ್ರ, ಗ್ರಾ.ಪಂ.ಉಪಾಧ್ಯಕ್ಷ ಮಂಜುನಾಥರೆಡ್ಡಿ, ಕಾಂಗ್ರೆಸ್ ಮುಖಂಡ ಸರ್ಜಾಪುರ ಶ್ರೀರಾಮುಲು, ಜೆಡಿಎಸ್ ಮುಖಂಡ ಎಸ್‌ಎಲ್‌ವಿ ಸುರೇಶ್ ಮತ್ತಿತರರು ಹಾಜರಿದ್ದರು.

ಬೀದಿಗೆ ಬಂದ ಕಾಂಗ್ರೆಸ್ ಜಗಳ...
ಆನೇಕಲ್:
ತಾಲ್ಲೂಕಿನ ಬೊಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಹಾಗೂ ಅಂಗನವಾಡಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರ ನಡುವಿನ ಭಿನ್ನಾಭಿಪ್ರಾಯ ಸ್ಫೋಟಗೊಂಡು ಮಾತಿನ ಚಕಮಕಿಗೆ ಕಾರಣವಾಯಿತು.

ಗ್ರಾಮ ಪಂಚಾಯಿತಿ ಆಡಳಿತ ಬಿಜೆಪಿ ಬೆಂಬಲಿತರ ಹಿಡಿತದಲ್ಲಿದ್ದು,  ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಪ್ರಸಾದ್ ಕಾಮಗಾರಿಗಳ ಉದ್ಘಾಟನೆಗೆ ತಾಲ್ಲೂಕಿನವರು ಹಾಗೂ ಗ್ರಾಮದವರೆಂಬ ಅಭಿಮಾನದಿಂದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಆಹ್ವಾನಿಸಿದ್ದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ದಯಾನಂದರೆಡ್ಡಿ ಸಹ ಹಾಜರಿದ್ದರು. ಅಂಗನವಾಡಿ ಕಟ್ಟಡದ ಉದ್ಘಾಟನೆಯ ವೇಳೆ ಮಾಜಿ ಸಚಿವರನ್ನು ಉದ್ಘಾಟನೆಗೆ ಆಹ್ವಾನಿಸಿದಾಗ ಅವಕಾಶ ಕೊಡದೆ, ದಯಾನಂದರೆಡ್ಡಿ ಅವರೇ ಕತ್ತರಿ ಪಡೆದು ಟೇಪ್ ಕತ್ತರಿಸುವ ಮೂಲಕ ಭಿನ್ನಾಭಿಪ್ರಾಯ ಬಹಿರಂಗಗೊಂಡಿತು.

ನಂತರ ಕಾರ್ಯಕ್ರಮ ಪ್ರಾರಂಭವಾಗುತ್ತಿದಂತೆ ಶಿಷ್ಟಾಚಾರದ ಪಾಲಿಸದ ಬಗ್ಗೆ ಅಧಿಕಾರಿಗಳ ಮೇಲೆ ವಿಧಾನ ಪರಿಷತ್ ಸದಸ್ಯರು ಹರಿಹಾಯ್ದರು. ಈ ಸಂದರ್ಭದಲ್ಲಿ ಕುಪಿತಗೊಂಡ ರಾಮಲಿಂಗಾರೆಡ್ಡಿ ಬೆಂಬಲಿಗರು ವೇದಿಕೆ ಬಳಿಗೆ ಬಂದು ದಯಾನಂದರೆಡ್ಡಿ ಅವರ ವಿರುದ್ದ ವಾಗ್ಧಾಳಿ ನಡೆಸಿದ ಪರಿಣಾಮ ಮಾತಿನ ಚಕಮಕಿ ನಡೆಯಿತು. ಪರಸ್ಪರ ಏಕವಚನದಲ್ಲಿ ನಿಂದನೆ ಮಾಡಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು 2 ಬಾರಿ ಇದೇ ಪರಿಸ್ಥಿತಿ ನಿರ್ಮಾಣವಾಯಿತು.
 
ನಂತರ ಗ್ರಾ. ಪಂ. ಅಧ್ಯಕ್ಷರು ಇದು ಪಕ್ಷದ ಸಭೆಯಲ್ಲ ಸರ್ಕಾರಿ ಕಾರ್ಯಕ್ರಮ ಶಾಂತವಾಗಿ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ ನಂತರ ಕಾರ್ಯಕ್ರಮ ಸುಗಮವಾಗಿ ನಡೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.