ADVERTISEMENT

ರಾಜಕಾಲುವೆ ಒತ್ತುವರಿ ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 5:18 IST
Last Updated 25 ಅಕ್ಟೋಬರ್ 2017, 5:18 IST

ವಿಜಯಪುರ: ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವುಗೊಳಿಸಿ, ಮಳೆಯ ನೀರು ಸರಾಗವಾಗಿ ಕೆರೆಗಳಿಗೆ ಹರಿಯುವಂತೆ ಮಾಡಬೇಕು ಎಂದು ಜನಶಕ್ತಿ ರಂಗದ ದೇವನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಬೈರೇಗೌಡ ಒತ್ತಾಯಿಸಿದರು.

ಸಮೀಪದ ವಿಜಯಪುರ ಅಮಾನಿಕೆರೆಯ ಬಳಿ ಶಿಥಿಲಾವಸ್ಥೆಗೆ ತಲುಪಿರುವ ದುರ್ಗಾತಾಯಿ ಹಾಗೂ ಗಂಗಾತಾಯಿ ದೇವಾಲಯದಲ್ಲಿ ಕೆರೆಗಳು ತುಂಬಬೇಕು ಎಂಬ ಹರಕೆಯೊಂದಿಗೆ ಮಂಗಳವಾರ ಪೂಜೆ ಸಲ್ಲಿಸಿದ ಅವರು ಮಾತನಾಡಿದರು.

ಸುತ್ತಲಿನ ಪ್ರಾಂತಗಳಲ್ಲಿ ಕೆರೆಗಳು ತುಂಬಿ ಕೋಡಿ ಹರಿದಿದೆ. ಕೃಷಿ ಇಲಾಖೆಯ ಅಧಿಕಾರಿಗಳ ವರದಿಯಂತೆ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಆದರೂ, ಈ ಭಾಗದ ಯಾವ ಕೆರೆಗಳಿಗೂ ನೀರು ಬಂದಿಲ್ಲ ಎಂದರು.

ADVERTISEMENT

ಕೆರೆಗಳಿಗೆ ನೀರು ಬಂದಿಲ್ಲ. ರಾಜಕಾಲುವೆಗಳಲ್ಲಿ ಹರಿಯಬೇಕಾಗಿದ್ದ ನೀರು ತೋಟಗಳು, ಹೊಲಗಳಲ್ಲಿ ಶೇಖರಣೆಯಾಗಿತ್ತು. ಇದರಿಂದ ಅಂತರ್ಜಲದ ಮಟ್ಟ ವೃದ್ಧಿಯಾಗಲು ತೊಡಕುಂಟಾಗಿದೆ ಎಂದರು. ಈ ಬಗ್ಗೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಚಿಕ್ಕನಹಳ್ಳಿ ಕೆ.ವೆಂಕಟೇಶ್ ಮಾತನಾಡಿ, ಹಿಂದೆ ಹಿರಿಯರು ಕೆರೆಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಪುರಾತನ ದೇವಾಲಯಗಳನ್ನು ಗಮನಿಸದೆ ಬಿಡಲಾಗಿದೆ ಎಂದರು.

‘ನಮ್ಮ ಸಂಘಟನೆಯಿಂದ ಅವುಗಳನ್ನು ಜೀರ್ಣೋದ್ಧಾರ ಮಾಡಿ ಪೂಜೆ ಸಲ್ಲಿಸಿದ್ದೇವೆ. ಜನರು ಇಂತಹ ಪುರಾತನ ದೇವಾಲಯಗಳನ್ನು ಸಂರಕ್ಷಿಸುವ ಕಡೆಗೆ ಗಮನ ಹರಿಸಬೇಕು, ಕೆರೆಗಳ ಸಂರಕ್ಷಣೆಗೂ ಹೆಚ್ಚು ಕಾಳಜಿ ತೋರಿಸಬೇಕು’ ಎಂದರು. ವೆಲ್ಡರ್ ಮುನಿಮಾರಪ್ಪ, ಮುನಿರಾಜು, ಡೈರಿ ಮುನಿರಾಜು, ಜೈ ಶಂಕರ್, ಆಂಜಿನಮ್ಮ, ಆಶಾ, ಅಂಬಿಕ, ಚಿನ್ಮಯ್ ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.