ADVERTISEMENT

ಸಮಸ್ಯೆ ಉನ್ನತಾಧಿಕಾರಿಗಳ ಅಂಗಳಕ್ಕೆ

ಬಗೆಹರಿಯದ ರೇಷ್ಮೆ ಪ್ರೋತ್ಸಾಹಧನ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 11:08 IST
Last Updated 4 ಜನವರಿ 2014, 11:08 IST

ದೇವನಹಳ್ಳಿ: ಸರ್ಕಾರದಿಂದ ರೇಷ್ಮೆ ಬೆಳೆಗಾರರಿಗೆ ವಿತರಣೆಯಾಗುತ್ತಿರುವ ಪ್ರತಿ ಕೆ.ಜಿ.ಗೆ ಹತ್ತು ರೂ ಪ್ರೋತ್ಸಾಹ ಧನದ ಸಮರ್ಪಕ ವಿತರಣೆಗೆ ಸಂಬಂಧಿಸಿದಂತೆ ರೇಷ್ಮೆ ಇಲಾಖೆ ಅಧಿಕಾರಿಗಳು ರೇಷ್ಮೆ ಹಿತರಕ್ಷಣಾ ವೇದಿಕೆ ಮತ್ತು ಚಾಕಿ ಸಾಕಾಣಿಕೆದಾರರ ನಡುವೆ ನಡೆದ ಸಭೆಯಲ್ಲಿ ಬಿಕ್ಕಟ್ಟು ಬಗೆಹರಿಯದೆ ಸಮಸ್ಯೆ ರೇಷ್ಮೆ ಇಲಾಖೆ ಉನ್ನತಾಧಿಕಾರಿಗಳ ಅಂಗಳಕ್ಕೆ ಹೋಗಿದೆ.

ಸಭೆಯಲ್ಲಿ ಮಾತನಾಡಿದ ತಾಲ್ಲೂಕು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸೂರ್ಯನಾರಾಯಣ್, ಕಳೆದ ವರ್ಷ ಆಗಸ್ಟ್ 15 ರಂದು ಸರ್ಕಾರ ಅಧಿಕೃತ ಘೋಷಣೆ ಮಾಡಿ ಬೆಳೆಗಾರರಿಗೆ ಪ್ರತಿ ಕೆ.ಜಿ ಗೂಡಿಗೆ ಹತ್ತು ರೂಪಾಯಿ ನೀಡುವಂತೆ ತಿಳಿಸಿತ್ತು ಆದರೆ ಕೆ.ಜಿಗೆ ಇಂತಿಷ್ಟೇ ಎಂದು ತಿಳಿಸಿರಲಿಲ್ಲ.

ಇದರಿಂದ ಎಲ್ಲಾ ರೈತರಿಗೂ ಅನುಕೂಲವಾಗಿತ್ತು. ನಂತರ ಸರ್ಕಾರ ತಜ್ಞರಿಂದ ಸಲಹೆ ಪಡೆದು 60 ರಿಂದ 70 ಕೆ.ಜಿಗೆ ಮಾತ್ರ ಸೀಮಿತಗೊಳಿಸಿದೆ. 60 ಕೆ.ಜಿಗಿಂತ ಕಡಿಮೆ ಮತ್ತು 70 ಕೆ.ಜಿಗಿಂತ ಹೆಚ್ಚು ಉತ್ಪಾದನೆ ಮಾಡಿದ ರೇಷ್ಮೆಗೆ ಈ ಪ್ರೋತ್ಸಾಹ ಅನ್ವಯವಾಗುವುದಿಲ್ಲ. ಬೆಳೆಗಾರರು ಚಾಕಿ ಸಾಕಾಣಿಕೆಯಿಂದ ಖರೀದಿಸಿದ ಬಿಲ್‌ ಮತ್ತು ಗೂಡು ಮಾರಾಟ ಮಾಡಿದ ಬಿಲ್‌ ಎರಡೂ ಕ್ರಮಬದ್ಧವಾಗಿದ್ದರೆ ಮಾತ್ರ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದರು.

ರೇಷ್ಮೆ ಚಾಕಿ ಸಾಗಾಣಿಕೆದಾರ ನಂಜೇಗೌಡ ಮಾತನಾಡಿ, ಬೆಳೆಗಾರರು ತಾವು ಖರೀದಿಸಿದ ರೇಷ್ಮೆ ಮೊಟ್ಟೆಗೆ ಅನುಗುಣವಾಗಿ ರಸೀದಿ ನೀಡುತ್ತಿದ್ದೇವೆ, ರಸೀದಿ ಕ್ರಮ ಸಂಖ್ಯೆಗನುಗುಣವಾಗಿಯೇ ನೀಡುತ್ತಿದ್ದೇವೆ. ಕೆಲವೊಮ್ಮೆ ಬೆಳೆಗಾರರು ರಸೀದಿ ಕಳೆದುಕೊಂಡು ಬಂದಲ್ಲಿ ಕ್ರಮ ಸಂಖ್ಯೆ ಇಲ್ಲದೆ ರಸೀದಿ ನೀಡಿದ್ದೇವೆ. ಕೆಲವರು ಮೂರು ತಿಂಗಳಿಗೊಮ್ಮೆ ಬಂದರೆ ನಾವು ಏನೂ ಮಾಡುವುದಕ್ಕೆ ಆಗಲ್ಲ, ಬೇರೆ ತಾಲ್ಲೂಕಿನಲ್ಲಿ ಈ ಸಮಸ್ಯೆ ಇಲ್ಲ, ಇಲ್ಲಿ ಯಾಕೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ ಎಂದರು.

ರೇಷ್ಮೆ ವಿಸ್ತರಣಾಧಿಕಾರಿ ಬಾಗೇವಾಡಿ ಮಾತನಾಡಿ, ಸರ್ಕಾರದ ಆದೇಶದಂತೆ ಪಾಲಿಸಿದರೆ ಅರ್ಹರಿಗೆ ಪ್ರೋತ್ಸಾಹ ಧನ ನೀಡಲು ಸಾಧ್ಯವೇ ಇಲ್ಲ. ರಸೀದಿ ಕ್ರಮ ಸಂಖ್ಯೆ ಇರಲೇಬೇಕು, ಚಾಕಿ ಸಾಗಾಣಿಕೆದಾರರು ಸಹಕರಿಸಬೇಕು ರೈತರ ಬಗ್ಗೆ ಕಾಳಜಿ ನಮಗೂ ಇದೆ ಎಂದರು.

ರೇಷ್ಮೆ ಪ್ರದರ್ಶನಾಧಿಕಾರಿ ಪ್ರಭಾಕರ್ ಮಾತನಾಡಿ, ಇಲಾಖೆಯಲ್ಲಿ ಸಾಕಷ್ಟು ಅನುದಾನ ಇದೆ. ಅದಕ್ಕೆ ಕೊರತೆ ಇಲ್ಲ. ಸಬ್ಸಿಡಿಗಾಗಿಯೇ ರಸೀದಿ ಹಾಕುವ ನಿಯಮವಿಲ್ಲ ಅದು ದೊರೆಯದಿದ್ದರೂ ರಸೀದಿ ಹಾಕಬೇಕು, 24 ಲಕ್ಷ ರೂ ಪ್ರೋತ್ಸಾಹ ಧನದಲ್ಲಿ 18 ಲಕ್ಷ ವಿತರಣೆಯಾಗಿದೆ. ಚಾಕಿ ಸಾಗಾಣಿಕೆ ಕೇಂದ್ರ ನೀಡುವ ಕ್ರಮಬದ್ಧವಲ್ಲದ ರಸೀದಿ ಕ್ರಮ ಸಂಖ್ಯೆಯಿಂದ ವಿಳಂಬವಾಗಿದೆ ಎಂದರು.

ರೇಷ್ಮೆ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕಲ್ಯಾಣ ಕುಮಾರ್ ಮಾತನಾಡಿ, ಚಾಕಿ ಸಾಕಾಣಿಕೆದಾರರು ರೇಷ್ಮೆ ಬೆಳೆಗಾರರು ಸೇರಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸಿದ ಪರಿಣಾಮ ಕಳೆದ ವರ್ಷದಿಂದ ಪ್ರೋತ್ಸಾಹಧನ ಜಾರಿಯಾಗಿದೆ, ಚಾಕಿ ಸಾಕಾಣಿಕೆದಾರರ ಬಿಲ್‌ಗಳೇ ಇಲ್ಲಿ ಮಾನದಂಡ ವನ್ನಾಗಿಸಿವುದರಿಂದ ರೇಷ್ಮೆ ಉತ್ಪಾದಕರಿಗೆ ತೊಂದರೆಯಾಗಿದೆ.

ಅಧಿಕಾರಿಗಳು ಬಿಲ್‌ಗಳು ಕ್ರಮಬದ್ಧವಾಗಿಲ್ಲ ಎಂಬ ಕಾರಣ ನೀಡಿ ಸಹಾಯ ಧನ ವಿತರಿಸುತ್ತಿಲ್ಲ, ಚಾಕಿ ಸಾಕಾಣಿಕೆ ಬಿಲ್‌ಗಳ ಬಗ್ಗೆ ರೇಷ್ಮೆ ಆಯುಕ್ತರಿಗೆ ವಿಸೃತ ವರದಿಯನ್ನು ನೀಡಿ ಸರ್ಕಾರದ ಮಟ್ಟದಲ್ಲಿ ಪ್ರತ್ಯೇಕ ಅಧಿಸೂಚನೆ ನೀಡುವಂತೆ ರೇಷ್ಮೆ ಹಿತರಕ್ಷಣಾ ವೇದಿಕೆ ವತಿಯಿಂದ ಒತ್ತಾಯಿಸಲಾಗುವುದು ಎಂದರು.

ರೇಷ್ಮೆ ಹಿತರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಜನಾರ್ದನ್‌, ರೇಷ್ಮೆ ವಿಸ್ತರಣಾಧಿಕಾರಿ ಡಾ.ವೆಂಕಟಾಚಲಪತಿ, ವಲಯಾಧಿಕಾರಿ ಮುನಿರಾಜಪ್ಪ, ವೀರಭದ್ರಪ್ಪ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.